ತಾಪಮಾನ ತಡೆಗೆ ಎಲ್ಲರೂ ಗಿಡ ಬೆಳೆಸಿ: ಶಾಸಕ ಶರಣು ಸಲಗರ

ಬಸವಕಲ್ಯಾಣ:ಜೂ.6: ಎಲ್ಲರೂ ಕಡ್ಡಾಯವಾಗಿ ಗಿಡ-ಮರಗಳನ್ನು ನೆಟ್ಟಿ ಅವುಗಳನ್ನು ಪೋಷಿಸಿ ಬೆಳೆಸುವುದರಿಂದ ಹವಾಮಾನ ವೈಪರಿತ್ಯ ಹಾಗೂ ಜಾಗತಿಕ ತಾಪಮಾನಗಳಂತಹ ಗಂಭೀರ ಸಮಸ್ಯೆಗಳನ್ನು ಬಗೆಹರಿಸಬಹುದು ಎಂದು ಶಾಸಕ ಶರಣು ಸಲಗರ ಹೇಳಿದರು.

ತಾಲ್ಲೂಕು ಆಡಳಿತ, ಅರಣ್ಯ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ನಗರದಲ್ಲಿರುವ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಎದುರು ಗಿಡ ನೆಟ್ಟು ವಿಶ್ವ ಪರಿಸರ ದಿನಾಚರಣೆಯನ್ನಾಚರಿಸಿ ಅವರು ಮಾತನಾಡಿದರು.

ಪರಿಸರ ದಿನಾಚರಣೆ ಪ್ರಯುಕ್ತ ನಗರದ ವಿವಿಧೆಡೆ 50 ಗಿಡಗಳನ್ನು ನೆಡಲಾಗಿದೆ. ಮಾನವ ಕುಲದ ಉಳಿವಿಗೆ ಗಿಡಮರಗಳು ಅತ್ಯಗತ್ಯ. ಪರಿಸರ ದಿನಾಚರಣೆ ಕೇವಲ ಜೂ.5ಕ್ಕೆ ಮಾತ್ರ ಸೀಮಿತವಾಗಿರದೆ ಕೃಷಿ ಪ್ರಧಾನ ಭಾರತದಲ್ಲಿ ಅದು ದಿನಾಲೂ ಆಚರಿಸುವಂತೆ ಈ ಪರಿಸರದ ಮಹತ್ವದ ಭಾಗವಾಗಿರುವ ಮಾನವನ ಆದ್ಯ ಕರ್ತವ್ಯವಾಗಿದೆ ಎಂದರು.

ಉತ್ತಮ ರೀತಿಯಲ್ಲಿ ಮಳೆ ಬರಲು, ಜನರಿಗೆ ಶುದ್ಧ ಗಾಳಿ ಸಿಗಲು ಹಾಗೂ ಪ್ರಾಣಿ-ಪಕ್ಷಿಗಳಿಗೆ ಆಶ್ರಯ ತಾಣಕ್ಕೆ ಗಿಡ-ಮರಗಳು ಸಹಾಯಕಾರಿಯಾಗಿವೆ. ಹಾಗಾಗಿ, ಅವುಗಳ ಪೋಷಣೆ ಅತ್ಯಂತ ಮಹತ್ವದಾಗಿದೆ. ಕ್ಷೇತ್ರದ ಪ್ರತಿಯೊಬ್ಬರು ತಮ್ಮ ಮನೆ ಎದುರು ಒಂದು ಗಿಡ ಹಚ್ಚಿ ಈ ಪರಿಸರ ದಿನಾಚರಣೆಗೆ ವಿಶೇಷ ಅರ್ಥ ಬರುವಂತೆ ಮಾಡಬೇಕು ಎಂದು ಶಾಸಕರು ಈ ವೇಳೆ ಫೇಸ್‍ಬುಕ್ ಲೈವ್‍ನಲ್ಲಿ ಕ್ಷೇತ್ರದ ಜನತೆಗೆ ಮನವಿ ಮಾಡಿಕೊಂಡರು.

ಈ ಸಂದರ್ಭದಲ್ಲಿ ತಹಸೀಲ್ದಾರ್ ಸಾವಿತ್ರಿ ಶರಣು ಸಲಗರ, ಅರಣ್ಯ ಇಲಾಖೆಯ ಅಧಿಕಾರಿಗಳಾದ ಸೈಯದ್ ಮುರ್ತುಜಾ ಖಾದ್ರಿ, ಸಂತೋಷ್ ಕುಮಾರ ಯಾಚೆ, ನಿಸಾರ, ಮಹಮ್ಮದ್ ಮುದಾಸೀರ, ತಾಲ್ಲೂಕು ತೋಟಗಾರಿಕೆ ಅಧಿಕಾರಿ ಸಂತೋಷ್ ತಾಂಡೂರ್, ತಾಪಂ ಸಹಾಯಕ ನಿರ್ದೇಶಕ ಸಂತೋಷ್ ಚವ್ಹಾಣ, ಹುಲಸೂರ ತಾಪಂ ಮಾಜಿ ಅಧ್ಯಕ್ಷ ಸಿದ್ರಾಮ ಕಾಮಣ್ಣ, ಕೃಷ್ಣಾರೆಡ್ಡಿ ಯಡಮಾಲೆ, ದಿಪಕ್ ಗಾಯಕವಾಡ್, ಶರಣು ಖಸಗೆ ಇನ್ನಿತರರಿದ್ದರು.