ತಾಪಮಾನಕ್ಕೆ ಯುರೋಪ್ ತತ್ತರ

ಇಟಲಿ, ಜು.೨೨- ಪ್ರಕೃತಿ ರಮಣೀಯ ತಾಣ ಹಾಗೂ ತಣ್ಣನೆಯ ಪ್ರದೇಶಗಳಿಗೆ ಹೆಸರಾಗಿರುವ ಯುರೋಪ್‌ನ ಹಲವೆಡೆ ಅದರಲ್ಲೂ ಗ್ರೀಸ್ ಹಾಗೂ ಇಟಲಿಯಲ್ಲಿ ಸದ್ಯ ಉಷ್ಣ ಮಾರುತಕ್ಕೆ ಜನತೆ ತತ್ತರಿಸಿದ್ದು, ಅಂಟಾರ್ಟಿಕ್ ತೀರದಲ್ಲಿ ಸಮುದ್ರ ಮಟ್ಟ ಏರುವ ಆತಂಕವನ್ನು ವಿಜ್ಞಾನಿಗಳು ಎಚ್ಚರಿಸಿದ್ದಾರೆ. ಪ್ರಸಕ್ತ ವಾರಾಂತ್ಯಕ್ಕೆ ಬರೊಬ್ಬರಿ ೪೫ ಡಿಗ್ರಿ ಸೆಲ್ಸಿಯಸ್‌ಗೆ ಉಷ್ಣತೆ ಏರುವ ಸಾಧ್ಯತೆ ಇದೆ ಎಂದು ಹವಾಮಾನಶಾಸ್ತ್ರಜ್ಞರು ಎಚ್ಚರಿಕೆ ನೀಡಿದ್ದಾರೆ.
ಕಳೆದ ಹಲವು ದಿನಗಳಿಂದ ಇಟಲಿಯಲ್ಲಿ ಕಂಡು ಕೇಳರಿಯದ ರೀತಿಯಲ್ಲಿ ಉಷ್ಣ ಮಾರುತಕ್ಕೆ ಜನತೆ ಬಸವಳಿದಿದ್ದು, ಅಗಾಧ ಪ್ರಮಾಣದ ಸೆಕೆಯಿಂದಾಗಿ ಜನತೆ ಮನೆಯಿಂದ ಹೊರಬರಲಾಗದ ಸ್ಥಿತಿಯಲ್ಲಿದ್ದಾರೆ. ಇಟಲಿಯ ಹೆಚ್ಚಿನ ಪ್ರವಾಸಿ ತಾಣಗಳನ್ನು ಸದ್ಯ ತಾತ್ಕಾಲಿಕ ಅವಧಿಗೆ ಮುಚ್ಚಲಾಗಿದ್ದು, ಜನತೆ ಮನೆಯಲ್ಲೇ ಇರುವಂತೆ ಸರ್ಕಾರ ಕೂಡ ಸೂಚಿಸಿದೆ. ಪ್ರಸಕ್ತ ಜುಲೈನಲ್ಲಿ ಕಳೆದ ೪೦ ವರ್ಷಗಳಲ್ಲೇ ಗ್ರೀಸ್‌ನ ಅತ್ಯಂತ ಹೆಚ್ಚಿನ ತಾಪಮಾನದ ತಿಂಗಳು ಎಂಬ ದಾಖಲೆ ನಿರ್ಮಾಣವಾಗಿದೆ. ಅದೂ ಅಲ್ಲದೆ ಮುಂದಿನ ದಿನಗಳಲ್ಲಿ ಸೆಕೆಯ ಪ್ರಮಾಣ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಅದರಲ್ಲೂ ವಿಶ್ವಸಂಸ್ಥೆಯ ವರದಿಗಳ ಪ್ರಕಾರ, ಮುಂದಿನ ದಿನಗಳಲ್ಲಿ ಯುರೋಪ್‌ನಾದ್ಯಂತ ಸೆಕೆಯ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ೨೦೧೬ರಲ್ಲಿ ಇಟಲಿಯಲ್ಲಿ ದಾಖಲೆ ಪ್ರಮಾಣದ ತಾಪಮಾನದ ವರದಿಯಾಗಿತ್ತು. ಆದರೆ ಜುಲೈನಲ್ಲಿ ಸೆಕೆಯ ವಾತಾವರಣ ಎಲ್ಲಾ ದಾಖಲೆಗಳನ್ನು ಮುರಿದು ಹಾಕಿದೆ. ಅದರಲ್ಲೂ ೧೭ ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲಿ ಜಾಗತಿಕ ಸರಾಸರಿ ಉಷ್ಣತೆ ಇದೀಗ ಜುಲೈನಲ್ಲಿ ೧೭.೮ ಡಿಗ್ರಿ ಸೆಲ್ಸಿಯಸ್‌ಗೆ ಏರಿಕೆಯಾಗಿರುವುದು ಪ್ರಸಕ್ತ ಸನ್ನಿವೇಶಕ್ಕೆ ಕನ್ನಡಿ ಹಿಡಿದಂತಿದೆ. ತೈಲ, ಕಲ್ಲಿದ್ದಲು ಮತ್ತು ಅನಿಲದಂತಹ ಪಳೆಯುಳಿಕೆ ಇಂಧನಗಳನ್ನು ಬಳಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇಂಗಾಲದ ಹೊರಸೂಸುವಿ ಪ್ರಮಾಣ ಏರಿಕೆಯಾಗುತ್ತಿದ್ದು, ಪರಿಣಾಮ ಉಷ್ಣತೆಯಲ್ಲಿ ನಿರಂತರ ಏರಿಕೆ ದಾಖಲಾಗುತ್ತಿದೆ. ಇನ್ನು ಕಳೆದ ಜೂನ್ ಹಾಗೂ ಜುಲೈ ತಿಂಗಳಲ್ಲಿ ಕಂಡುಕೇಳರಿಯದ ತಾಪಮಾನ ಪ್ರಮಾಣ ವರದಿಯಾಗುತ್ತಿದ್ದು, ಸಹಜವಾಗಿಯೇ ಸಮುದ್ರದ ಮಟ್ಟ ಏರಿಕೆಯಾಗುವ ಆತಂಕ ಹೊಂದಲಾಗಿದೆ.