ತಾಪಂ ಸಾಮಾನ್ಯ ಸಭೆ: ಅಧಿಕಾರಿಗಳ ಗೈರು, ಹೊನ್ನಕೇರಿ ಗರಂ

ಅಫಜಲಪುರ:ಮಾ.26: ತಾಲೂಕು ಪಂಚಾಯಿತಿ ಸಾಮಾನ್ಯ ಸಭೆಗೆ ಗೈರು ಹಾಜರಾದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ನಾವು ಚುನಾಯಿತರಾಗಿ ಸುದೀರ್ಘ 5 ವರ್ಷಗಳ ಕಾಲ ನಮ್ಮ ಅಧಿಕಾರವಧಿ ಮುಗಿದರೂ ಸಹ ಇನ್ನು ನಮ್ಮ ಬೇಡಿಕೆಗಳು ಹಾಗೂ ಕೆಲಸ ಕಾರ್ಯಗಳು ಆಗುತ್ತಿಲ್ಲ ಹೀಗಾದರೆ ನಾವು ಜನರಿಗೆ ಏನು ಮುಖ ತೋರಿಸಬೇಕು ಎಂದು ತಾಪಂ ಸಾಮಾನ್ಯ ಸಭೆಯಲ್ಲಿ ತಾಪಂ ಉಪಾಧ್ಯಕ್ಷ ಭೀಮಾಶಂಕರ ಹೊನ್ನಕೇರಿ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ಗುರುವಾರದಂದು ತಾಪಂ ಅಧ್ಯಕ್ಷೆ ರುಕ್ಮಣಿ ಹೊನ್ನಕೇರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು ಪ್ರತಿ ಬಾರಿ ಸಭೆ ಆದಾಗ ಲ್ಯಾಂಡ್ ಆರ್ಮಿ ಹಾಗೂ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಸಭೆಗೆ ಗೈರು ಹಾಜರಾಗುತ್ತಾರೆ. ಹೀಗಾಗಿ ಅವರ ವಿರುದ್ಧ 5 ವರ್ಷ ಕಳೆದರೂ ಸಹ ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಏಕೆ ಎಂದು ತಾಪಂ ಕಾರ್ಯನಿರ್ವಾಹಕ ಅಬ್ದುಲ್ ನಬಿ ಯಲಗಾರ ಅವರಿಗೆ ಪ್ರಶ್ನಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಗತಿ ವರದಿ ಮಂಡಿಸುತ್ತಾ, ಅಳ್ಳಗಿ(ಬಿ) ಗ್ರಾಮದಲ್ಲಿ ಕಳೆದ ವರ್ಷ ಪ್ರೌಢ ಶಾಲೆ ಮಂಜೂರಾಗಿತ್ತು. ಆದರೆ 70 ವಿದ್ಯಾರ್ಥಿಗಳು ಇಲ್ಲದ ಕಾರಣಕ್ಕಾಗಿ ಮೇಲಾಧಿಕಾರಿಗಳ ತಂಡ ಅದನ್ನು ರದ್ದುಗೊಳಿಸಲಾಗಿದೆ. ಹೀಗಾಗಿ ಅದನ್ನು ಮುಂದಿನ ದಿನಗಳಲ್ಲಿ ಮರು ಮಂಜೂರಾತಿ ಮಾಡಲಾಗುವುದು ಹಾಗೂ ಲೋಕೋಪಯೋಗಿ ಇಲಾಖೆಯಿಂದ ತಾಲೂಕಿನ ವಿವಿಧ ಹಳ್ಳಿಗಳಲ್ಲಿ ಶಾಲಾ ಕಟ್ಟಡಗಳ ಶಂಕುಸ್ಥಾಪನೆ ಮಾಡಲಾಗುತ್ತಿದೆ. ಆದರೆ ಶಿಕ್ಷಣ ಇಲಾಖೆಗೆ ಯಾವುದೇ ಮಾಹಿತಿ ಸಹ ನೀಡದೆ ಶಂಕುಸ್ಥಾಪನೆ ಮಾಡಲಾಗುತ್ತಿದೆ ಎಂದು ತಮ್ಮ ಅಸಮಧಾನ ವ್ಯಕ್ತಪಡಿಸಿದರು.
ಪ್ರಭಾರಿ ಟಿಎಚ್‍ಓ ಡಾ. ಸುಶೀಲಕುಮಾರ ಅಂಬೂರೆ ಮಾಹಿತಿ ನೀಡುತ್ತಾ ಕೋವಿಡ್ 2ನೇ ಅಲೆಯಲ್ಲಿ ಇಲ್ಲಿವರೆಗೂ ಒಟ್ಟಾರೆ 4509 ಜನರಿಗೆ ಕೋವಿಡ್ ಟೆಸ್ಟ್ ಮಾಡಲಾಗಿದ್ದು ಇದರಲ್ಲಿ 39 ಪಾಸಿಟಿವ್ ಬಂದಿವೆ ಮತ್ತು ಪ್ರಸ್ತುತ 26 ಸಕ್ರಿಯ ಪ್ರಕರಣಗಳಿದ್ದು 13 ಜನರು ಬಿಡುಗಡೆ ಹೊಂದಿದ್ದಾರೆ. ಅದರಂತೆ 4501 ಜನ ಕೊರೋನಾ ವಾರಿಯರ್ಸ್ ಸೇರಿದಂತೆ ಇನ್ನುಳಿದ ನಾಗರೀಕರಿಗೆ ವ್ಯಾಕ್ಸಿನ್ ವಿತರಣೆ ಮಾಡಲಾಗಿದೆ ಎಂದರು.
ಕೃಷಿ ಅಧಿಕಾರಿ ಎಸ್.ಎಚ್ ಗಡಗಿಮನಿ ಮಾತನಾಡುತ್ತಾ, ತಾಲೂಕಿನಲ್ಲಿ ಪ್ರವಾಹ ಸಂದರ್ಭದಲ್ಲಿ ಒಟ್ಟು 44269 ಹೆಕ್ಟೇರ್ ಪ್ರದೇಶ ಬೆಳೆ ಹಾನಿಯಾಗಿದೆ. ಅದರಲ್ಲಿ 22925 ಹೆಕ್ಟರ್ ತೊಗರಿ, 2040 ಹೆಕ್ಟರ್ ಕಬ್ಬು ಹಾನಿಯಾಗಿದೆ. ತಾಲೂಕಿನಲ್ಲಿ ಈಗಾಗಲೇ 2073 ತಾಡಪತ್ರಿ ವಿತರಣೆ ಮಾಡಲಾಗಿದೆ ಎಂದು ಹೇಳುತ್ತಿರುವಾಗ ಮಧ್ಯ ಪ್ರವೇಶಿಸಿದ ತಾಪಂ ಸದಸ್ಯರಾದ ಶಿವಶರಣಪ್ಪ ಪಡಶೆಟ್ಟಿ ಹಾಗೂ ಗುರಣ್ಣ ತೆಗ್ಗೆಳ್ಳಿ ಅವರು ನಿಮಗೆ ಬೇಕಾದವರಿಗೆ ತಾಡಪತ್ರಿ ಹಂಚಿಕೆ ಮಾಡಿದ್ದೀರಿ. ಹೀಗಾಗಿ ಅದರ ಸಂಪೂರ್ಣ ಮಾಹಿತಿ ನೀಡಿ ಎಂದು ಸಭೆಯಲ್ಲಿ ಪಟ್ಟು ಹಿಡಿದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಕರಿಬಸಮ್ಮ ಮಾತನಾಡಿ, ಜನವರಿ 1ರಿಂದ ವಸತಿ ಕೇಂದ್ರಗಳನ್ನು ಪ್ರಾರಂಭ ಮಾಡಿದ್ದೇವೆ. ಶೇ.80 ರಷ್ಟು ವಿದ್ಯಾರ್ಥಿಗಳು ಬರುತ್ತಿದ್ದು ಒಟ್ಟು 18 ವಸತಿ ಕೇಂದ್ರಗಳಲ್ಲಿ 13 ಪ್ರಾರಂಭ ಮಾಡಲಾಗಿದೆ ಎಂದಾಗ ತಾಪಂ ಉಪಾಧ್ಯಕ್ಷ ಭೀಮಾಶಂಕರ ಹೊನ್ನಕೇರಿ ಪ್ರಶ್ನಿಸುತ್ತಾ, ಕರಜಗಿ ಬಾಲಕಿಯರ ವಸತಿ ನಿಲಯದಲ್ಲಿ ಐದಾರು ವರ್ಷಗಳ ಹಿಂದೆ ನೂರಾರು ಮಕ್ಕಳಿದ್ದರು. ಆದರೆ ಈಗಿನ ಮೇಲ್ವಿಚಾರಕರ ಬೇಜವಾಬ್ದಾರಿಯಿಂದ ಕೇವಲ 14 ಮಕ್ಕಳಿದ್ದಾರೆ ಹಾಗೂ ಅವರ ಪತಿ ವಸತಿ ನಿಲಯಕ್ಕೆ ಮದ್ಯ ಸೇವನೆ ಮಾಡಿ ಬರುತ್ತಿದ್ದಾರೆ. ಆದರೆ ಬಾಲಕಿಯರ ವಸತಿ ನಿಲಯ ಇರುವುದರಿಂದ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಮೇಲ್ವಿಚಾರಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ಸಭೆಯಲ್ಲಿ ತಾಪಂ ಸದಸ್ಯರಾದ ಶಿವಶರಣಪ್ಪ ಪಡಶೆಟ್ಟಿ, ರಾಜು ಬಬಲಾದ, ಮಾಪಣ್ಣ ದೊಡ್ಮನಿ, ಕಲ್ಲಪ್ಪ ಪ್ಯಾಟಿ, ಗುರಣ್ಣ ತೆಗ್ಗೆಳ್ಳಿ, ಶಂಕರಗೌಡ ಪಾಟೀಲ್, ಪಾರ್ವತಿ ಕಣ್ಣಿ, ಬಲವಂತ ಜಕಬಾ, ಕೃಷ್ಣಾಬಾಯಿ ಡೊಂಗರಿ, ಅಂಬಿಕಾ ನಿಂಗಪ್ಪ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.
ತಾಲೂಕಿನಾದ್ಯಂತ ಸುಮಾರು 25 ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿದೆ ಎಂದು ವರದಿ ಬಿತ್ತರವಾಗಿದೆ. ಹೀಗಾಗಿ ಸಮಸ್ಯೆ ಹೊಂದಿರುವ ಗ್ರಾಮಗಳಲ್ಲಿ ಸಮರ್ಪಕವಾಗಿ ನೀರು ಪೂರೈಸುವಂತೆ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಅಧಿಕಾರಿ ರಮೇಶ ಮಟ್ನಳ್ಳಿ ಅವರಿಗೆ ತಾಪಂ ಉಪಾಧ್ಯಕ್ಷ ಭೀಮಾಶಂಕರ ಹೊನ್ನಕೇರಿ ಸೂಚನೆ ನೀಡಿದರು.
ಇಂದಿನ ಸಭೆಯು ನಮ್ಮ ಅಧಿಕಾರವಧಿಯ ಕೊನೆಯ ಸಭೆಯಾಗಿದ್ದು ಹಲವಾರು ಕನಸುಗಳನ್ನು ಇಟ್ಟುಕೊಂಡು ಇಲ್ಲಿಗೆ ಬಂದಿದ್ದೇವೆ. ಸತತ 5 ವರ್ಷಗಳ ಸುದೀರ್ಘ ಅವಧಿಯಲ್ಲಿ ಸಹಕಾರ ನೀಡಿದ ತಾಪಂ ಸದಸ್ಯರು, ಅಧಿಕಾರಿಗಳು ಹಾಗೂ ಪತ್ರಕರ್ತರಿಗೆ ನಾವು ಎಂದಿಗೂ ಚಿರಋಣಿಯಾಗಿರುತ್ತೇವೆ ಹಾಗೂ ಭ್ರಷ್ಟಾಚಾರ ಮುಕ್ತ ಆಡಳಿತ ನೀಡಿದ್ದೇವೆ ಎಂದು ತಾಪಂ ಅಧ್ಯಕ್ಷೆ ರುಕ್ಮಿಣಿ ಹೊನ್ನಕೇರಿ ಹಾಗೂ ತಾಪಂ ಉಪಾಧ್ಯಕ್ಷ ಭೀಮಾಶಂಕರ ಹೊನ್ನಕೇರಿ ತಿಳಿಸಿದರು.