ತಾಪಂ ಸಭೆಯಲ್ಲಿ ಅಧಿಕಾರಿಗಳಿಗೆ ಎಚ್ಚರಿಕೆ ಕುಡಿಯುವ ನೀರು,ವಿದ್ಯುತ್ ಸಮಸ್ಯೆ ಬಗೆಹರಿಸಿ: ಎಂ.ವೈ.ಪಾಟೀಲ್

ಅಫಜಲಪುರ:ಏ.05:ಬೇಸಿಗೆ ಆರಂಭವಾಗಿದ್ದು ತಾಲೂಕಿನ ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಬೇಕು ಸಂಬಂಧಪಟ್ಟ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ಇದ್ದು ಜನರ ಸಮಸ್ಯೆ ಸ್ಪಂದಿಸಬೇಕು ಇಲ್ಲದಿದ್ದರೆ ಅಂಥವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಎಂ.ವೈ.ಪಾಟೀಲ್ ತಿಳಿಸಿದರು.ಪಟ್ಟಣದ ತಾಪಂ ಸಭಾಂಗಣದಲ್ಲಿ ನಡೆದ ಕುಡಿಯುವ ನೀರು,ವಿದ್ಯುತ್ ಸಮಸ್ಯೆ ಕುರಿತು ನಡೆದ ಸಭೆಯಲ್ಲಿ ಮಾತನಾಡಿದ ಅವರು ತಾಲೂಕಿನಲ್ಲಿ 30 ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ.ಸರಕಾರ ಟಾಸ್ಕ್ ಫೋರ್ಸ್ ಸವಿುತಿಗೆ 50 ಲಕ್ಷ ಅನುದಾನ ನೀಡಿದೆ.ಅಧಿಕಾರಿಗಳು ನೀರಿನ ಹಾಹಾಕಾರ ಇರುವ ಗ್ರಾಮಗಳಿಗೆ ಮೊದಲ ಆದ್ಯತೆ ನೀಡಬೇಕು ತಿಳಿಸಿದರು.

ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ರಮೇಶ ಮಟ್ಟಳ್ಳಿ ಸಭೆಗೆ ಮಾಹಿತಿ ನೀಡಿ ತಾಲೂಕಿನಲ್ಲಿ 21 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವುದನ್ನು ಗುರುತಿಸಲಾಗಿದೆ ಆ ಗ್ರಾಮಗಳಲ್ಲಿ ಕೊಳವೆ ಬಾವಿಗಳನ್ನು ಕೊರೆಯಲಾಗುವುದು ಎಂದರು.ತಾಲೂಕಿನಲ್ಲಿ ಸುಮಾರು 65 ಶುದ್ಧ ಕುಡಿಯುವ ನೀರಿನ ಘಟಕಗಳು ಇರುವ ಮಾಹಿತಿ ಇದೆ.ಅದರಲ್ಲಿ ಅರ್ಧಕ್ಕೂ ಹೆಚ್ಚು ಹಾಳಾಗಿವೆ ಎಂಬ ದೂರು ಬಂದಿವೆ.ಇನ್ನೂ ಒಂದು ವಾರದಲ್ಲಿ ದುರಸ್ತಿ ಮಾಡಬೇಕು ಎಂದು ತಾಪಂ ಉಪಾಧ್ಯಕ್ಷ ಭೀಮಾಶಂಕರ ಹೊನ್ನಕೇರಿ ಅಧಿಕಾರಿಗಳಿಗೆ ತಾಕೀತು ಮಾಡಿದರು.ಕೆಲವು ರೈತರು ತಲಾ ಒಂದೊಂದು ವಿದ್ಯುತ್ ಪರಿವರ್ತಕದ ಮೇಲೆ 3-4 ಅಕ್ರಮ ವಿದ್ಯುತ್ ಪಂಪ ಸೆಟ್ ನಡೆಸಿಕೊಂಡು ಬರುತ್ತಿರುವುದರಿಂದ ಕಳೆದ ಎರಡು ತಿಂಗಳಿಂದ ತಾಲೂಕಿನಲ್ಲಿ ವೋಲ್ಟೇಜ್ ಕಡಿಮೆಯಾಗುವುದು ಹಾಗೂ ಮೇಲಿಂದ ಮೇಲೆ ಟ್ರಿಪ್ ಆಗುತ್ತಿದೆ.ಆದರೂ ಸಹ ಶಿರವಾಳ,ಬಳೂರಗಿ,ಮಣ್ಣೂರ,ಕರಜಗಿ ತಲಾ ಎರಡೆರಡು ಶಿಷ್ಟ್ ಮಾಡಿ ದಿನಕ್ಕೆ 7 ಗಂಟೆ ವಿದ್ಯುತ್ ಪೂರೈಸುತ್ತಿದ್ದೇವೆ ಆಳಂದ ಹತ್ತಿರ 220 ಕೆವಿ ವಿದ್ಯುತ್ ವಿತರಣಾ ಕೇಂದ್ರವು ಬೇಗ ಆರಂಭವಾದರೆ ವಿದ್ಯುತ್ ಸಮಸ್ಯೆಗೆ ಶೀಘ್ರ ಪರಿಹಾರ ದೊರೆಯಲಿದೆ ಎಂದು ಜೆಸ್ಕಾಂ ಕಾರ್ಯನಿರ್ವಾಹಕ ಎಂಜನಿಯರ್ ನಾಗರಾಜ್ ಸಭೆಗೆ ತಿಳಿಸಿದರು.ಸಭೆಯಲ್ಲಿ ಮಧ್ಯಪ್ರವೇಶಿಸಿ ಶಿವೂರ ಗ್ರಾಮದ ಮುಖಂಡರಾದ ಸೋಮನಗೌಡ ಬಿರಾದಾರ ಮಾತನಾಡಿ ದಿನದಲ್ಲಿ ಕೇವಲ 7 ಗಂಟೆ 3 ಪೇಸ್ ವಿದ್ಯುತ್ ನೀಡುತ್ತಿರುವುದರಿಂದ ತೋಟದಲ್ಲಿ ಮನೆ ಮಾಡಿಕೊಂಡಿರುವವರಿಗೆ ರಾತ್ರಿ ವೇಳೆಯಲ್ಲಿ ತೊಂದರೆಯಾಗುತ್ತಿರುವುದರಿಂದ ನಿರಂತರ ಜ್ಯೋತಿ ತೋಟದ ಮನೆಗಳಿಗೆ ನೀಡಬೇಕು ಎಂದು ಸಭೆಗೆ ತಿಳಿಸಿದರು.ಈ ಬಗ್ಗೆ ಪ್ರತಿಕ್ರಿಯಿಸಿದ ಜೆಸ್ಕಾಂ ಅಧಿಕಾರಿಗಳು ಮಾಹಿತಿ ನೀಡಿ ನಿರಂತರ ಜ್ಯೋತಿ ಗ್ರಾಮಗಳಿಗೆ ಮಾತ್ರ ಸೀವಿುತವಾಗಿದ್ದು ತೋಟದ ಮನೆಗಳಿಗೆ ನೀಡುವ ಕುರಿತು ಚರ್ಚೆ ನಡೆಯುತ್ತಿದೆ ಎಂದು ತಿಳಿಸಿದರು.ತಾಲೂಕು ಆರೋಗ್ಯಾಧಿಕಾರಿ ಡಾ.ಸುಶೀಲಕುಮಾರ ಅಂಬೂರೆ ಮಾತನಾಡಿ 7508 ಜನರಿಗೆ ಕೋವಿಡ್ ಲಸಿಕೆ ನೀಡಲಾಗಿದೆ.ಕೆಲವೆಡೆ ಜನರು ಲಸಿಕೆ ಪಡೆಯಲು ಮುಂದೆ ಬರುತ್ತಿಲ್ಲ ಈ ಕುರಿತು ಜಾಗೃತಿ ಮೂಡಿಸಲಾಗುತ್ತಿದ್ದು ಗ್ರಾವೀುಣ ಪ್ರದೇಶದ ಜನರಿಗೆ ಲಸಿಕೆ ಹಾಕಿಸಿಕೊಳ್ಳಲು ವಾಹನದ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.


ಕುರ್ಚಿ ಹಾಗೂ ಕುಡಿಯುವ ನೀರಿಗೆ ಸಭೆಯಲ್ಲಿ ಪರದಾಟ
ಕುಡಿಯುವ ನೀರು ಹಾಗೂ ವಿದ್ಯುತ್ ಸಮಸ್ಯೆ ಬಗ್ಗೆ ಶಾಸಕ ಎಂ.ವೈ.ಪಾಟೀಲ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತಾಲೂಕಾ ಮಟ್ಟದ ಅಧಿಕಾರಿಗಳು,ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸೇರಿದಂತೆ ಪತ್ರಕರ್ತರಿಗೂ ಕುಡಿಯಲು ನೀರಿಲ್ಲದೆ ಸಭೆಯಲ್ಲಿ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು ಹಾಗೂ ಪುರಸಭೆ ಮುಖ್ಯಾಧಿಕಾರಿ ಅಶೋಕ ಬಿಲಗುಂದಿ ಅವರಿಗೆ ಸಭೆಯಲ್ಲಿ ಕುಳಿತುಕೊಳ್ಳಲು ಕುರ್ಚಿ ಇಲ್ಲದ ಕಾರಣಕ್ಕಾಗಿ ಸುಮಾರು ಅರ್ಧ ಗಂಟೆಗಳ ಕಾಲ ಬಾಗಿಲಲ್ಲಿ ನಿಂತು ಸಭೆಯನ್ನು ವೀಕ್ಷಣೆ ಮಾಡಿದರು ಕೆಲವೊತ್ತು ನಂತರ ಅಧಿಕಾರಿಯೊಬ್ಬರು ಅಲ್ಲಿಂದ ತೆರಳಿದ ನಂತರ ಖಾಲಿಯಾದ ಕುರ್ಚಿಗೆ ಬಂದು ಕುಳಿತರು.