ತಾಪಂ ಸದಸ್ಯನ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿ ಗ್ರಾಮಸ್ಥರ ಪ್ರತಿಭಟನೆ

ಕೆ.ಆರ್.ಪೇಟೆ, ನ.03: ತಾಲೂಕಿನ ಸಂತೆಬಾಚಹಳ್ಳಿ ಹೋಬಳಿಯ ದಾಸಗೊಳಪುರ ಗ್ರಾಮಸ್ಥರ ಮೇಲೆ ದಬ್ಬಾಳಿಕೆ ದೌರ್ಜನ್ಯ ನಡೆಸುತ್ತಿರುವ ತಾಲೂಕು ಪಂಚಾಯಿತಿ ಸದಸ್ಯ ರಾಜಾಹುಲಿ ದಿನೇಶ್ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಗ್ರಾಮಸ್ಥರ ಆಗ್ರಹಿಸಿದರು.
ಪಟ್ಟಣದ ಮಿನಿ ವಿಧಾನಸೌಧದ ಮುಂಭಾಗ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಎಂ.ಶಿವಮೂರ್ತಿ ಅವರಿಗೆ ಮನವಿ ಸಲ್ಲಿಸಿದರು.
ದಾಸಗೊಳಪುರ ಗ್ರಾಮಸ್ಥರು ಇಂದು ಪಟ್ಟಣದ ಮಿನಿ ವಿಧಾನಸೌಧದ ಮುಂಭಾಗ ಪ್ರತಿಭಟನೆ ನಡೆಸಿ ಮಾತನಾಡಿ ಗ್ರಾಮಸ್ಥರ ಮೇಲೆ ದೌರ್ಜನ್ಯ ನಡೆಸುತ್ತಿರುವ ತಾಲೂಕು ಪಂಚಾಯಿತಿ ಸದಸ್ಯ ರಾಜಾಹುಲಿ ದಿನೇಶ್ ಮತ್ತು ಆತನ ಸಹೋದರರ ವಿರುದ್ಧ ರಕ್ಷಣೆ ನೀಡಬೇಕು. ನಾವು ಬೇಸಾಯ ಮಾಡುತ್ತಿರುವ ನಮ್ಮ ಗ್ರಾಮಕ್ಕೆ ಸೇರಿರುವ 9 ಎಕರೆ 22 ಗುಂಟೆ ಜಮೀನನ್ನು ಗ್ರಾಮಸ್ಥರಿಗೆ ದರಖಾಸ್ತು ಮೂಲಕ ಮಂಜೂರು ಮಾಡಿಸಿಕೊಡಬೇಕು ಎಂದು ಆಗ್ರಹಿಸಿ ದಿನೇಶ್ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ನಮಗೆ ನ್ಯಾಯ ಕೊಡಿಸಬೇಕೆಂದು ಮನವಿ ಮಾಡಿದರು.
ದಾಸಗೊಳಪುರ ಗ್ರಾಮದ ಸರ್ವೇ ನಂಬರ್ 17ಕ್ಕೆ ಸೇರಿರುವ 5ಎಕರೆ 22 ಗುಂಟೆ ಜಮೀನನ್ನು ಗ್ರಾಮದ 10 ಕುಟುಂಬಗಳು ಕಳೆದ 30 ವರ್ಷಗಳಿಂದ ಬೇಸಾಯ ಮಾಡುತ್ತಿದ್ದಾರೆ. ಜಮೀನಿನಲ್ಲಿ ನೆಟ್ಟಿ ಬೆಳೆಸಿದ್ದ ತೆಂಗಿನ ಗಿಡಗಳು ಹಾಗೂ ಇತರೆ ಬೆಳೆಗಳನ್ನು ಜೆಸಿಬಿ ಯಂತ್ರ ಬಳಸಿ ನಾಶಪಡಿಸಿರುವ ರಾಜಾಹುಲಿ ದಿನೇಶ್ ನಮ್ಮ ಗ್ರಾಮಕ್ಕೆ ಹೊರ ಊರುಗಳಿಂದ ಯುವಕರನ್ನು ಕರೆತಂದು ನಮ್ಮ ಮೇಲೆ ದಬ್ಬಾಳಿಕೆ ನಡೆಸಿ ಕೊಲೆ ಬೆದರಿಕೆ ಹಾಕಿಸಿ ದೌರ್ಜನ್ಯ ಮಾಡುತ್ತಿದ್ದಾರೆ.ಇವರಿಂದ ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ ಆದ್ದರಿಂದ ನಮಗೆ ರಕ್ಷಣೆ ನೀಡಬೇಕು. ನಮ್ಮ ಜೀವನಕ್ಕೆ ಆಧಾರವಾಗಿರುವ ಗ್ರಾಮದ ಜಮೀನನ್ನು ನಮಗೆ ಕೊಡಿಸಿಕೊಡಬೇಕು.ಗ್ರಾಮದಲ್ಲಿ ಗಲಾಟೆ ಗದ್ದಲ ನಡೆಸಿ ಅಶಾಂತಿಗೆ ಕಾರಣವಾಗಿರುವ ರಾಜಾಹುಲಿ ದಿನೇಶ್ ಮತ್ತು ಸಹಚರರನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ದಾಸಗೊಳಪುರ ಗ್ರಾಮಸ್ಥರು ಹಾಗೂ ಗ್ರಾಮದ ಮುಖಂಡರಾದ ದೇವೇಗೌಡ, ರೇಣುಕಾ, ಕರೀಗೌಡ, ದಿಲೀಪ್, ಸೌಮ್ಯ, ಸಾವಿತ್ರಮ್ಮ, ರಾಜೇಗೌಡ, ಚಂದ್ರಶೇಖರ್ ಮತ್ತಿತರರು ಭಾಗವಹಿಸಿದ್ದರು.