ತಾಪಂ ಕ್ಷೇತ್ರಗಳ ಪುನರ್ ವಿಂಗಡಣೆ ಅವೈಜ್ಞಾನಿಕ: ಜಮಾದಾರ

ಚಿಂಚೋಳಿ,ಏ.1- ಇಲ್ಲಿನ ವಿಧಾನಸಭಾ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಚಿಂಚೋಳಿ ಮತ್ತು ಕಾಳಗಿ ತಾಲೂಕು ಪಂಚಾಯತ ಮತಕ್ಷೇತ್ರಗಳ ಪುನರ್ ವಿಂಗಡಣೆ ಅವೈಜ್ಞಾನಿಕವಾಗಿದೆ ಎಂದು ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅನೀಲ ದೇವಿಂದ್ರಪ್ಪ ಜಮಾದಾರ ಅವರು ಪ್ರತಿಕ್ರಿಯಿಸಿದ್ದಾರೆ.
ಗ್ರಾಮ ಪಂಚಾಯತ ಮತ್ತು ಭೌಗೋಳಿಕ ದೃಷ್ಠಿಕೋನದಲ್ಲಿ ತಾಪಂ ಕ್ಷೇತ್ರಗಳನ್ನು ವಿಂಗಡಣೆ ಮಾಡುವುದನ್ನು ಬಿಟ್ಟು ಸಂಸದ ಡಾ.ಉಮೇಶ ಜಾಧವ ಹಾಗೂ ಶಾಸಕ ಡಾ.ಅವಿನಾಶ ಜಾಧವ ಅವರ ಒತ್ತಾಡಕ್ಕೆ ಮಣಿದು ತಾಪಂ ಮತಕ್ಷೇತ್ರಗಳ ಪುನರ ವಿಂಗಡಣೆ ಮಾಡಲಾಗಿದೆ ಎಂದು ಪತ್ರಿಕೆಗೆ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ಅವರು ಆರೋಪಿಸಿದ್ದಾರೆ.
ತಾಲೂಕಿನ ಶಾದಿಪೂರ ತಾಪಂ ಕ್ಷೇತ್ರದ ವ್ಯಾಪ್ತಿಯಲ್ಲಿ 40 ಕಿ.ಮೀ ದೂರದ ಚಿಕ್ಕನಿಂಗದಳ್ಳಿ ಗ್ರಾಮವನ್ನು ಸೇರಿಸಲಾಗಿದೆ ಹಾಗೆಯೇ ಮೋಘಾ ತಾಪಂ ಕ್ಷೇತ್ರದ ವ್ಯಾಪ್ತಿಗೆ 20 ಕಿ.ಮೀ ದೂರದ ಮುಕರಂಬಾ ಗ್ರಾಮವನ್ನು ಸೇರಿಸಲಾಗಿದೆ. ವೆಂಕಟಪೂರ ತಾಪಂ ಕ್ಷೇತ್ರವನ್ನು ರದ್ದು ಪಡಿಸಿರುವುದು ಯಾತಕ್ಕಾಗಿ? ಇದೆಲ್ಲ ನೋಡಿದರೆ ಮೇಲ್ನೋಟಕ್ಕೆ ಅವೈಜ್ಞಾನಿಕ ಹಾಗೂ ರಾಜಕೀಯ ಒತ್ತಡದಿಂದ ಕ್ಷೇತ್ರಗಳ ಪುನರ ವಿಂಗಡಣೆ ನಡೆಸಲಾಗಿದೆ ಎಂದು ಸ್ಪಷ್ಟವಾಗುತ್ತದೆ ಎಂದು ಅವರು ಹೇಳಿದ್ದಾರೆ.
ತಾಪಂ ಕ್ಷೇತ್ರಗಳ ಪುನರ ವಿಂಗಡಣೆಯನ್ನು ವೈಜ್ಞಾನಿಕ ದೃಷ್ಠಿಕೋನದಲ್ಲಿ ಹಾಗೂ ಸಾರ್ವಜನಿಕರ ಅಭಿಪ್ರಾಯ ವಿಶೇಷವಾಗಿ ಭೌಗೋಳಿಕ ಮಾನದಂಡ ಗ್ರಾಪಂ ವ್ಯಾಪ್ತಿಗಳನ್ನು ಪರಿಗಣಿಸಬೇಕು ಎಂದು ಜಮಾದಾರ ಅವರು ಒತ್ತಾಯಿಸಿದ್ದಾರೆ.