ತಾಪಂನಿಂದ ಮತದಾನ ಜಾಗೃತಿ ಜಾಥಾ

ಕೋಲಾರ,ಮೇ,೩:ಜಿಲ್ಲೆಯಲ್ಲಿ ಪ್ರತಿಯೊಬ್ಬ ಮತದಾರರೂ ತಮ್ಮ ಹಕ್ಕು ಚಲಾಯಿಸಿಲು ಜಾಗೃತಿ ಮೂಡಿಸಿ, ಶೇ.೮೫ರ ಗುರಿ ಸಾಧನೆಯ ಜತೆಯಲ್ಲೇ ಶೇ.೧೦೦ ಮತದಾನಕ್ಕೆ ಸಂಕಲ್ಪ ಮಾಡಿ ಕೆಲಸ ಮಾಡೋಣ ‘ನಮ್ಮ ಮತ ನನ್ನ ಭವಿಷ್ಯ ಎಂಬ ಸತ್ಯದ ಅರಿವಾಗುವಂತೆ ಮನವೊಲಿಸಿ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯುಕೇಶ್‌ಕುಮಾರ್ ಕರೆ ನೀಡಿದರು.
ಕೋಲಾರ ತಾಲ್ಲೂಕು ಪಂಚಾಯಿತಿ ವತಿಯಿಂದ ವಿವಿಧ ಕಲಾ ತಂಡಗಳ ಮೆರವಣಿಗೆಯೊಂದಿಗೆ ಹಮ್ಮಿಕೊಂಡಿದ್ದ ಬೃಹತ್ ಮತದಾನ ಜಾಗೃತಿ ಕಾರ್ಯಕ್ರಮದ ಜಾಥಾಗೆ ಹಸಿರು ನಿಶಾನೆ ತೋರಿ ಅವರು ಮಾತನಾಡುತ್ತಿದ್ದರು.
ಮತದಾನ ಜನಸಾಮಾನ್ಯರ ಒಂದು ಪವಿತ್ರ ಕರ್ತವ್ಯ ಒಂದು ದೇಶದ ಪ್ರಗತಿ ಮತದಾನದಿಂದ ಎಂಬ ಸತ್ಯದ ಅರಿವು ಮೂಡಿಸುವ ಅಗತ್ಯವಿದೆ, ನಾವು ಮತ ಹಾಕದಿದ್ದರೆ ಏನಾಗುತ್ತದೆ ಎಂದು ನಕಾರಾತ್ಮಕವಾಗಿ ಮಾತನಾಡುವವರನ್ನೂ ಮನವೊಲಿಸಿ ಮತಚಲಾಯಿಸಲು ಪ್ರೇರೇಪಿಸಿ ಎಂದರು.
ಕಳೆದ ಚುನಾವಣೆಯಲ್ಲಿ ಮತದಾನ ನಿರಾಕರಿಸಿರುವ ಮತದಾರರ ಮನವೊಲಿಸಿ ಮತದಾನದಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸಿ ಎಂದ ಅವರು, ವಿಕಲಚೇತನರು, ಹಿರಿಯ ನಾಗರೀಕರಿಗೆ ಪ್ರತಿ ಮತಗಟ್ಟೆಯಲ್ಲೂ ಗಾಲಿ ಕುರ್ಚಿಯನ್ನು ಬಳಸಲಾಗುವುದು, ಇದರ ಪ್ರಯೋಜನ ಪಡೆದು ಮತದಾನದಲ್ಲಿ ತಪ್ಪದೇ ಭಾಗವಹಿಸಲು ಕೋರಿದರು.
ತಮ್ಮ ಗ್ರಾಮಗಳಲ್ಲಿ ಹಾಗೂ ನೆರೆಹೊರೆ ಕುಟುಂಬಗಳಲ್ಲಿ ಮತದಾನದ ಮಹತ್ವದ ಕುರಿತು ಅರಿವು ಮೂಡಿಸಿ, ಇದು ನಿಮ್ಮ ಕರ್ತವ್ಯ ಹಾಗೂ ದೇಶದ ಅಭಿವೃದ್ದಿಗಾಗಿ ಓರ್ವ ಉತ್ತಮ ಜನಪ್ರತಿನಿಧಿಯ ಆಯ್ಕೆಗೆ ಇರುವ ಸುವರ್ಣಾವಕಾಶ ಎಂದು ಮನವರಿಕೆ ಮಾಡಿಕೊಡಿ ಎಂದರು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಪಿ.ಮುನಿಯಪ್ಪ ಮಾತನಾಡಿ, ‘ನನ್ನ ಮತ ನನ್ನ ಭವಿಷ್ಯ ಎಂಬುದನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕು, ಯಾವುದೋ ನೆಪ ಹೇಳಿಕೊಂಡು ಮತದಾನದಿಂದ ದೂರ ಉಳಿಯುವ ಮೂಲಕ ತಪ್ಪು ಮಾಡಬಾರದು, ಸಂವಿಧಾನದಡಿ ಸಿಕ್ಕಿರುವ ಹಕ್ಕನ್ನು ಬಳಸಿಕೊಳ್ಳಬೇಕು ಎಂದರು.
ಪ್ರತಿ ಮತದಾರನೂ ನಾನು ಯಾವುದೇ ಆಮಿಷಕ್ಕೆ ಒಳಗಾಗದೇ ಮತ ಚಲಾಯಿಸುವೆ ಎಂದು ಪ್ರತಿಜ್ಞೆ ಸ್ವೀಕರಿಸುವ ಮೂಲಕ ಚುನಾವಣೆಯಲ್ಲಿ ಹಣ,ಆಮಿಷ, ಹೆಂಡ ಹಂಚಿಕೆಗೆ ಕಡಿವಾಣ ಹಾಕಬೇಕು, ಇಂತಹ ಕಾರ್ಯಗಳು ತಮ್ಮ ಗಮನಕ್ಕೆ ಬಂದರೆ ಕೂಡಲೇ ಚುನಾವಣಾಧಿಕಾರಿಗಳಿಗೆ ದೂರು ನೀಡಬೇಕು ಎಂದು ಕೋರಿದರು.
ಇದೇ ಮೊದಲ ಬಾರಿಗೆ ೮೦ ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಮನೆಯಿಂದಲೇ ಮತ ಚಲಾಯಿಸಲು ಅವಕಾಶ ಕಲ್ಪಿಸಲಾಗಿದೆ, ಈ ಸುವರ್ಣಾವಕಾಶವನ್ನು ಹಲವಾರು ಮಂದಿ ಬಳಸಿಕೊಂಡಿದ್ದಾರೆ ಎಂದ ಅವರು, ಮತದಾನ ನಮ್ಮ ಜವಾಬ್ದಾರಿ ಎಂದು ಅರಿತುಕೊಂಡಾಗ ತಾನಾಗಿಯೇ ಶೇ.೧೦೦ ಮತದಾನವಾಗುತ್ತದೆ, ಈ ನಿಟ್ಟಿನಲ್ಲಿ ಯುವಕರು ಅರಿವು ಮೂಡಿಸಬೇಕು ಎಂದರು.
ಮತದಾನದ ಜಾಥಾ ಕಾರ್ಯಕ್ರಮದಲ್ಲಿ ಡೊಳ್ಳು ಕುಣಿತ, ಮತದಾನ ಕೇಂದ್ರ, ಮತಗಟ್ಟೆ ಅಧಿಕಾರಿಗಳು, ಮತದಾನ ಎಜೆಂಟ್ ರನ್ನು ಒಳಗೊಂಡ ಸ್ಥಭ್ದ ಚಿತ್ರ ಎಲ್ಲರ ಗಮನ ಸೆಳೆಯುವಂತಿದ್ದು, ಮತದಾನಕ್ಕೆ ಪ್ರೇರಣೆ ನೀಡುವಂತಿದ್ದು, ನಗರದಾಧ್ಯಂತ ಸಾಗಿ ಬಂತು. ಜೂನಿಯರ್ ಕಾಲೇಜು ಸಮೀಪದಿಂದ ಆರಂಭಗೊಂಡು ಎಸ್ ಎನ್ ಅರ್ ವೃತ್ತ, ಡೂಂ ಲೇಟ್ ವೃತ್ತ, ಕ್ಲಾಕ್ ಟವರ್ ವೃತ್ತ, ಕೆಎಸ್‌ಆರ್‌ಟಿಸಿ ಬಸ್ಸ್ ನಿಲ್ಲಾಣ, ಮೇಕ್ಕೆ ಸರ್ಕಲ್ ಹಾಗೂ ಕೋರ್ಟ್ ಸರ್ಕಲ್ ನಲ್ಲಿ ಕೊನೆಗೊಂಡಿತು.
ಮಾರ್ಗದುದ್ದಕ್ಕೂ ‘ನಮ್ಮ ಮತ ನಮ್ಮ ಭವಿಷ್ಯ ‘ನಮ್ಮ ಮತ ನಮ್ಮ ಹಕ್ಕು’ ‘ನಮ್ಮ ಮತ ಮಾರಟಕ್ಕಿಲ್ಲ ಎಂಬ ಘೋಷಣೆಗಳು ಮುಗಿಲು ಮುಟ್ಟಿದವು.
ಜಾಥಾದಲ್ಲಿ ಶಿಶು ಅಭಿವೃದ್ದಿ ಯೋಜನಾಧಿಕಾರಿ ವಿನೋದ್ ರಾಜ್, ತಾಪಂ ಯೋಜನಾ ನಿರ್ದೇಶಕಿ ಶೃತಿ, ಸಹಾಯಕ ಕಾರ್ಯದರ್ಶಿ ವೆಮಕಟಾಚಲಪತಿ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಗೌರವಾಧ್ಯಕ್ಷ ಎನ್.ಶ್ರೀನಿವಾಸರೆಡ್ಡಿ ಗೋವಿಂದಗೌಡ, ಜಿಪಂನ ಜಗದೀಶ್, ತಾಲ್ಲೂಕು ಯೋಜನಾಧಿಕಾರಿ ಎನ್ ರಮೇಶ, ಸಹಾಯಕ ನಿರ್ದೇಶಕಿ ಸುನಿತಾ, ಕಾರ್ಯದರ್ಶಿ ಬಸಪ್ಪ, ಐಇಸಿ ಸಂಯೋಜಕ ಭಾಸ್ಕರರೆಡ್ಡಿ, ಮತ್ತು ತಾಪಂ ಗ್ರಾ.ಪಂ ಸಿಬ್ಬಂದಿ, ಸಹಾಯಕ ಕೃಷಿ ನಿರ್ದೇಶಕರು ಹಾಗೂ ಸಿಬ್ಬಂದಿ, ಪಶುಸಂಗೋಪನೆ ಇಲಾಖೆಯ ಸಹಾಯಕ ನಿರ್ದೇಶಕರುಮತ್ತು ಸಿಬ್ಬಂದಿ,. ಆಶಾಕಾರ್ಯಕರ್ತರು, ಅಂಗನವಾಡಿ ಮೇಲ್ವಿಚಾರಕರು,ಪೊಲೀಸ್ ಇಲಾಖೆ ಸಿಬ್ಬಂದಿ ಭಾಗವಹಿಸಿದ್ದರು.