ತಾತನ ಮೆಚ್ಚಿದ ಮೊಮ್ಮಗ

ಬೆಂಗಳೂರು,ಜೂ. ೧- ಮಣ್ಣಿನ ಮಗ, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರು ಪ್ರಧಾನಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬೆಳ್ಳಿ ಹಬ್ಬದ ಸಂಭ್ರಮದಲ್ಲಿದ್ದೇವೆ. ದೇಶ ಹಾಗೂ ರಾಜ್ಯಕ್ಕೆ ದೇವೇಗೌಡರ ಕೊಡುಗೆ ದೊಡ್ಡದು ಎಂದು ಜೆಡಿಎಸ್‌ನ ಯುವ ಘಟಕದ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.
ಅಧಿಕಾರಾವಧಿ ಸಣ್ಣದಾದರೂ ಪ್ರಧಾನಿಯಾಗಿ ದೇವೇಗೌಡರವರು ಮಾಡಿದ ಸಾಧನೆ ದೊಡ್ಡದು, ಇಡೀ ದೇಶದಲ್ಲೇ ಐಟಿ ಉದ್ಯಮಕ್ಕೆ ೧೦ ವರ್ಷಗಳ ತೆರಿಗೆ ರಜೆ, ಭಾರತ-ಬಾಂಗ್ಲಾ ನಡುವಿನ ಗಂಗಾ ನದಿ ವಿವಾದ ಪರಿಹಾರ, ಈಶಾನ್ಯದ ೭ ರಾಜ್ಯಗಳಿಗೆ ೬ ಸಾವಿರ ಕೋಟಿ ಪ್ಯಾಕೇಜ್ ಘೋಷಣೆ, ಏರ್‌ಪೋರ್ಟ್, ರೈಲ್ವೆ, ರಾಷ್ಟ್ರೀಯ ಹೆದ್ದಾರಿ ಯೋಜನೆಗಳು, ವಿಶ್ವವಿದ್ಯಾಲಯಗಳ ನಿರ್ಮಾಣಕ್ಕೆ ವಿಶೇಷ ಅನುದಾನ, ಕಾಶ್ಮೀರಕ್ಕೆ ೩ ಸಾವಿರ ಕೋಟಿ ಪ್ಯಾಕೇಜ್, ನೆನೆಗುದಿಗೆ ಬಿದ್ದಿದ್ದ ದೆಹಲಿ ಮೆಟ್ರೋಗೆ ಚಾಲನೆ, ನಾಗಾ ಬಂಡುಕೋರರ ಜತೆಗಿನ ಶಾಂತಿ ಸಂಧಾನ ಹೀಗೆ ದೇವೇಗೌಡರ ಸಾಧನೆಗಳು ಸಾಕಷ್ಟಿದೆ ಎಂದು ಅವರು ಟ್ವಿಟರ್‌ನಲ್ಲಿ ಹೇಳಿದ್ದಾರೆ.
ತವರು ರಾಜ್ಯ ಕರ್ನಾಟಕಕ್ಕೂ ದೇವೇಗೌಡರ ಕೊಡುಗೆ ದೊಡ್ಡದಿದೆ, ರೈಲ್ವೆ, ನೀರಾವರಿ, ವಿದ್ಯುತ್, ಕೈಗಾರಿಕೆ ಸೇರಿದಂತೆ ರಾಜ್ಯದ ಸಮಗ್ರ ಅಭಿವೃದ್ಧಿಗೆ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ. ರಾಜಕೀಯದಲ್ಲಿ ನೋವು-ನಲಿವುಗಳನ್ನು ಕಂಡಿರುವ ದೇವೇಗೌಡರವರ ಪಯಣ ತಮ್ಮಂತಹ ಯುವ ಪೀಳಿಗೆಗೆ ದಾರಿ ದೀಪ ಎಂದು ನಿಖಿಲ್ ಕುಮಾರಸ್ವಾಮಿ ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.