ತಾಜ್‌ಮಹಲ್ ನಿರ್ಬಂಧಿತ ಪ್ರದೇಶದಲ್ಲಿ ತಲೆಎತ್ತಿದ ಅಕ್ರಮ ಕಟ್ಟಡಗಳು

ಆಗ್ರಾ,ಅ.೧೮- ಉತ್ತರ ಪ್ರದೇಶದ ಆಗ್ರಾದಲ್ಲಿರುವ ಪ್ರೇಮಸೌಧ ತಾಜ್‌ಮಹಲ್‌ನ ೫೦೦ ಮೀಟರ್ ವ್ಯಾಪ್ತಿಯ ನಿರ್ಬಂಧಿತ ಪ್ರದೇಶದಲ್ಲಿ ರೆಸ್ಟೋರೆಂಟ್‌ಗಳು, ಕೆಫೆಗಳು, ಎಂಪೋರಿಯಂಗಳು ಸೇರಿದಂತೆ ೪೭೦ ಅಕ್ರಮ ಕಟ್ಟಡಗಳು ತಲೆ ಎತ್ತಿದ ಪರಿಣಾಮ ತಾಜ್‌ಮಹಲ್ ಅವುಗಳ ಮಧ್ಯೆ ಮರೆಯಾಗುವಂತಾಗಿದೆ.
ಈ ಕೆಲವು ಅತಿಕ್ರಮಣಗಳು ದಶಕಗಳಷ್ಟು ಹಳೆಯ ದಾಗಿದ್ದು, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಈ ಕುರಿತು ಹಲವು ಪ್ರಕರಣಗಳಲ್ಲಿ ಎಫ್‌ಐಆರ್ ದಾಖಲಿಸಿದೆ. ಆದರೆ ಸ್ಥಳೀಯ ಅಧಿಕಾರಿಗಳು ಇವುಗಳನ್ನು ತೆರವುಗೊಳಿಸಲು ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನುವ ಸಂಗತಿ ಬಯಲಾಗಿದೆ.
ಕಳೆದ ವರ್ಷ ಉತ್ತರ ಪ್ರದೇಶ ಸರ್ಕಾರ ಮತ್ತು ಜಿಲ್ಲಾಡಳಿತಕ್ಕೆ ಎಎಸ್‌ಐ ಮಹಾನಿರ್ದೇಶಕರು ಎಫ್‌ಐ ಆರ್ ದಾಖಲು ಮಾಡಿರುವ ಪಟ್ಟಿಕೊಟ್ಟು ಕ್ರಮಕ್ಕೆ ಆಗ್ರಹಿಸಿದ್ದರೂ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಕುರಿತು ಹಲವು ಬಾರಿ ಸ್ಥಳೀಯ ಅಧಿಕಾರಿಗಳಿಗೆ ತಿಳಿಸಿದ್ದರೂ ಒತ್ತುವರಿ ತೆರವು ಮಾಡಿಲ್ಲ ಎಂದು ಎಎಸ್‌ಐ ಅಧಿಕಾರಿಗಳು ದೂರಿದ್ದಾರೆ.
ಸಂರಕ್ಷಿತ ಸ್ಮಾರಕಗಳ ಸುತ್ತ ಅನಧಿಕೃತವಾಗಿ ನಿರ್ಮಿಸಿದ ಪ್ರಕರಣಗಳಲ್ಲಿ ಎಫ್‌ಐಆರ್ ದಾಖಲಿಸಲು ಎಎಸ್‌ಐ ಅಧಿಕಾರ ವ್ಯಾಪ್ತಿ ಸೀಮಿತವಾಗಿದೆ ಎಂದು ಅಧೀಕ್ಷಕ ಪುರಾತತ್ವ ಶಾಸ್ತ್ರಜ್ಞ ರಾಜ್‌ಕುಮಾರ್ ಪಟೇಲ್ ಹೇಳಿದ್ದಾರೆ.
೨೦೧೫-೨೦೨೨ರ ಅವಧಿಯಲ್ಲಿ ಸಂರಕ್ಷಿತ ಸ್ಮಾರಕ ಮತ್ತು ಅದರ ಉಪವೃತ್ತಗಳ ವ್ಯಾಪ್ತಿಯಲ್ಲಿ ೨೪೮ ಹೊಸ ಅಕ್ರಮ ನಿರ್ಮಾಣಗಳು ನಾಯಿಕೊಡೆಗಳಂತೆ ಹುಟ್ಟಿಕೊಂಡಿವೆ. ಅವುಗಳಲ್ಲಿ ಕೆಲವು ವಿಶ್ವ ಪರಂಪರೆಯ ತಾಣದ ೫೦ ಮೀಟರ್ ತ್ರಿಜ್ಯದ ಹತ್ತಿರದಲ್ಲಿವೆ. ಸಂರಕ್ಷಿತ ಸ್ಮಾರಕಗಳ ಸುತ್ತಲೂ ೧೦೦ ಮೀ ವರೆಗಿನ ನಿರ್ಮಾಣ ನಿಷೇಧಿಸಲಾಗಿದೆ ಎಂದು ತಿಳಿಸಿದ್ದಾರೆ.
ಆದರೆ ನಿಷೇಧಿತ ಪ್ರದೇಶದ ಮೀರಿ ೨೦೦ ಮೀ ವರೆಗಿನ ಪ್ರದೇಶವನ್ನು ಪ್ರಾಚೀನ ಸ್ಮಾರಕಗಳು ಮತ್ತು ಪುರಾತತ್ತ್ವ ಶಾಸ್ತ್ರದ ಸ್ಥಳಗಳು ಮತ್ತು ಅವಶೇಷಗಳ ಕಾಯ್ದೆಯ ಅಡಿಯಲ್ಲಿ ನಿಯಂತ್ರಿಸಲಾಗುತ್ತದೆ, ನಿರ್ಮಾಣ-ಸಂಬಂಧಿತ ಪರವಾನಗಿಯ ವಿಷಯದಲ್ಲಿ ಕಠಿಣ ನಿಯಮ ಹೊಂದಿದೆ ಎಂದು ಹೇಳಿದ್ದಾರೆ
೧೯೯೬ ರಲ್ಲಿ ಸುಪ್ರೀಂ ಕೋರ್ಟ್‌ನ ಆದೇಶಗಳನ್ನು ಅನುಸರಿಸಿ, ತಾಜ್ ರಕ್ಷಣೆಗಾಗಿ ವಿವಿಧ ಯೋಜನೆಗಳ ಅನುಷ್ಠಾನದ ಪ್ರಗತಿಯನ್ನು ಮೇಲ್ವಿಚಾರಣೆ ಮಾಡಲು ಟಿಟಿಝೆಡ್ ಪ್ರಾಧಿಕಾರ ಸ್ಥಾಪಿಸಲಾಗಿದೆ.