ತಾಕತ್ ಇದ್ದರೆ ಗೋಪುರ ಮಾದರಿ ತಂಗುದಾಣ ನೆಲಸಮಗೊಳಿಸಿ

ಮೈಸೂರು: ಬಸ್ ತಂಗುದಾಣದ ಗುಂಬಜ್ ಮಾದರಿಯನ್ನು ಒಡೆದು ಹಾಕುತ್ತೇನೆಂದು ಹೇಳಿರುವ ಪ್ರತಾಪ್ ಸಿಂಹ ಅವರಿಗೆ ತಾಕತ್ತು, ಧಮ್ ಇದ್ದಲ್ಲಿ ಊಟಿ ರಸ್ತೆಯಲ್ಲಿ ಗೋಪುರ ಮಾದರಿಯ ಬಸ್ ತಂಗುದಾಣವನ್ನು ನೆಲಸಮಗೊಳಿಸಲಿ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಲಕ್ಷ್ಮಣ್ ಸವಾಲು ಹಾಕಿದರು.
ನಗರದ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಎಂಟು ವರ್ಷಗಳಲ್ಲಿ ಜನರಿಗೆ ಕೊಟ್ಟ ಮಾತನ್ನೂ ಉಳಿಸಿಕೊಳ್ಳದೆ ಸುಳ್ಳು ಹೇಳಿಕೊಂಡು ಕಾಲಾಹರಣ ಮಾಡುತ್ತಿದ್ದಾರೆ. ಸುಳ್ಳು ಹೇಳುವುದರಲ್ಲಿ ಪ್ರತಾಪ್ ಸಿಂಹ ಮೊದಲಿಗರು. ನಾಗನಹಳ್ಳಿ ಬಳಿ ಸ್ಯಾಟಲೈಟ್ ರೈಲ್ವೆ ಟರ್ಮಿನಲ್, ವಿಮಾನ ನಿಲ್ದಾಣ ರನ್ ವೇ ವಿಸ್ತರಣೆ, ಉಂಡುವಾಡಿ ಕುಡಿಯುವ ನೀರಿನ ಯೋಜನೆ, ಕುಶಾಲನಗರಕ್ಕೆ ರೈಲು, ದಸರಾ ಒಳಗೆ ದಶಪಥ ರಸ್ತೆ ಬರಿ ಮಾತಿನಲ್ಲೇ ಇದೆ ಎಂದು ಟೀಕಿಸಿದರು.
ಶಾಸಕ ಎಸ್.ಎ.ರಾಮದಾಸ್ ಹಾಗೂ ಸಂಸದ ಪ್ರತಾಪ್ ಸಿಂಹ ಈ ಇಬ್ಬರ ನಡುವಿನ ವಾರ್‍ನಲ್ಲಿ ಮೈಸೂರಿನ ಮರ್ಯಾದೆ ತೆಗೆಯುತ್ತಿದ್ದಾರೆ. ಬಸ್ ತಂಗುದಾಣಕ್ಕೆ ಅಡ್ಡಿಪಡಿಸಿ ದೊಡ್ಡ ವಿವಾದ ಮಾಡಿರುವ ಸಂಸದರೇ ನಿಮ್ಮ ಮನೆಯಿಂದ ದುಡ್ಡು ತಂದು ನಿರ್ಮಿಸಿದ್ದೀರಾ? ನಗರಾಭಿವೃದ್ಧಿ ಇಲಾಖೆ ನಿಯಮಗಳ ಪ್ರಕಾರ ಗೋಪುರ ಮಾದರಿಯ ಕಟ್ಟಡಗಳಿಗೆ ಅನುಮತಿ ಪಡೆಯಬೇಕಿಲ್ಲ.
ಹೀಗಿದ್ದರೂ, ನಗರಪಾಲಿಕೆಯಿಂದ ಅನುಮತಿ ಪಡೆಯಬೇಕೆಂದು ಹೇಳಿರುವುದು ಹಾಸ್ಯಾಸ್ಪದ. ಮುಸ್ಲಿಮರನ್ನು ಟಾರ್ಗೆಟ್ ಮಾಡಿ ಮಾತನಾಡುವುದನ್ನು ನಿಲ್ಲಿಸದಿದ್ದರೆ ಸಂಸದರ ಕಚೇರಿ ಎದುರು ಉಪವಾಸ ಸತ್ಯಾಗ್ರಹ ಮಾಡುತ್ತೇನೆ. ಪೆÇಲೀಸ್ ಠಾಣೆಗೂ ದೂರು ನೀಡಲಾಗುವುದು ಎಚ್ಚರಿಸಿದರು.
ಮೈಸೂರಿನಲ್ಲೂ ಬಿಜೆಪಿ ನೇಮಿಸಿರುವ ವ್ಯಕ್ತಿಗಳು ಮತದಾರರ ಮಾಹಿತಿ ಸಂಗ್ರಹಿಸುತ್ತಿರುವ ಕುರಿತು ವರದಿ ಬಂದಿರುವುದರಿಂದ ಜಿಲ್ಲಾಧಿಕಾರಿಗಳಿಗೆ ಸೋಮವಾರ ದೂರು ನೀಡಲಾಗುವುದು.
ಪದವಿ ವೈದ್ಯಕೀಯ ಸಮಾಜ ಶಾಸ್ತ್ರದ ಪಠ್ಯದಲ್ಲಿ ಏಡ್ಸ್ ಮತ್ತು ಕ್ಯಾನ್ಸರ್‍ಗೆ ಸ್ವಮೂತ್ರ ಕುಡಿದರೆ ಗುಣವಾಗಲಿದೆ ಅಂತ ಹೇಳಿರುವುದು ಅವೈಜ್ಞಾನಿಕ ಮತ್ತು ಮೂರ್ಖತನದಿಂದ ಕೂಡಿದೆ. ಆರ್‍ಎಸ್‍ಎಸ್ ಪ್ರೇರಿತ ವಿಚಾರಧಾರೆಗಳನ್ನು ಪಠ್ಯದಲ್ಲಿ ಸೇರಿಸಲಾಗಿದೆ. ಒಂದು ವಾರದೊಳಗೆ ಮರು ಮುದ್ರಣ ಮಾಡಿ ಹಂಚಬೇಕು ಎಂದು ಒತ್ತಾಯಿಸಿದರು.
ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಜಿಪಂ ವಾಜಿ ಅಧ್ಯಕ್ಷ ಬಿ.ಎಂ.ರಾಮು, ಸೇವಾದಳದ ಅಧ್ಯಕ್ಷ ಗಿರೀಶ್ ನಾ?ಂಕ್, ವಕ್ತಾರ ಕೆ.ಮಹೇಶ್ ಮತ್ತಿತರರು ಹಾಜರಿದ್ದರು.