
ನಗರ, ಏ.14- ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಅವರು ಹೈಕಮಾಂಡ್‍ನಿಂದ ವರುಣಾ ಹಾಗೂ ಚಾಮರಾಜನಗರ ಕ್ಷೇತ್ರದಲ್ಲಿ ಟಿಕೆಟ್ ಪಡೆದುಕೊಂಡು ಬಂದಿದ್ದಾರೆ. ಇದು ಬ್ಲಾಕ್‍ಮೇಲ್ ತಂತ್ರ ಅಲ್ಲ. ಅವರಿಗಿರುವ ಸಂಘಟನಾ ತಾಕತ್ತು ಎಂದು ವಿ. ಸೋಮಣ್ಣ ಅಭಿಮಾನಿ ಬಳಗದ ಅಧ್ಯಕ್ಷ ಕೆ. ವೀರಭದ್ರಸ್ವಾಮಿ ತಿಳಿಸಿದರು.
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಆರ್‍ಡಿಎಲ್ ಅಧ್ಯಕ್ಷ ಎಂ. ರುದ್ರೇಶ್ ಹತಾಶೆಯಿಂದ ಇಂಥ ಹೇಳಿಕೆ ನೀಡಿದ್ದಾರೆ. ಅವರಿಗೆ ಸೋಮಣ್ಣ ತಾಕತ್ತು ಏನು ಎಂಬುವುದು ಬೆಂಗಳೂರಿನಲ್ಲಿಯೇ ಅರ್ಥವಾಗಿರಬೇಕಲ್ಲವೇ? ರಾಮನಗರದಿಂದ ಚಾಮರಾಜನಗರಕ್ಕೆ ಟಿಕೆಟ್ ಪಡೆದುಕೊಂಡು ಸೋಮಣ್ಣ ಕಟ್ಟಿರುವ ಭದ್ರ ಕೋಟೆಯನ್ನು ಒಡೆಯಲು ರುದ್ರೇಶ ಬಂದಿದ್ದರು. ಕೇವಲ ಆರು ತಿಂಗಳ ಹಿಂದೆ ಚಾಮರಾಜನಗರಕ್ಕೆ ಬಂದ ರುದ್ರೇಶ್‍ಗೆ ಬಿಜೆಪಿ ಜಿಲ್ಲಾ ಸಮಿತಿ ಹಾಗೂ ತಾಲೂಕು ಸಮಿತಿಯೇ ಬೆಂಬಲ ನೀಡಲಿಲ್ಲ. ಇನ್ನು ಕ್ಷೇತ್ರದ ಜನರ ಬೆಂಬಲ ಪಡೆಯಲು ಸಾಧ್ಯವೇ. ಹೀಗಾಗಿ ಇಂಥ ಬಾಲಿಶ ಹೇಳಿಕೆ ಅವರ ವೈಕ್ತಿತ್ವವನ್ನು ತೋರಿಸುತ್ತದೆ ಎಂದರು.
ಸಿದ್ದಗಂಗಾಶ್ರೀಗಳನ್ನು ರಾಜಕೀಯ ಹುನ್ನಾರಕ್ಕೆ ಬಳಸಿಕೊಳ್ಳಲು ರುದ್ರೇಶ್ ಹೊರಡಿದ್ದಾರೆ. ಇದು ಅವರ ಸಣ್ಣತನವಾಗಿದೆ. ಕಳೆದ 45 ವರ್ಷಗಳಿಂದ ಸತತವಾಗಿ ಸಿದ್ದಗಂಗಾ ಮಠದ ಭಕ್ತರಾಗಿ ವಿ. ಸೋಮಣ್ಣ ಮಾಡಿರುವ ಸೇವೆ ಅನನ್ಯವಾಗಿದೆ. ಇಂಥ ವ್ಯಕ್ತಿ ವಿರುದ್ದ ಮಾತನಾಡುವ ನೈತಿಕತೆ ರುದ್ರೇಶ್‍ಗೆ ಇಲ್ಲ. ಒಂದು ಚುನಾವಣೆಯನ್ನು ಗೆಲ್ಲಲು ಸಾಧ್ಯವಾಗದ ರುದ್ರೇಶ್‍ರಿಂದ ಹೈಕಮಾಂಡ್ ಹಾಗೂ ಸೋಮಣ್ಣ ಪಾಠ ಕೇಳಬೇಕಿಲ್ಲ. ರಾಜ್ಯ ನಾಯಕರಾದ ಯುಡಿಯೂರಪ್ಪ, ಯುವ ನಾಯಕರಾದ ವಿಜಯೇಂದ್ರ ಅವರ ಹೆಸರಿಗೆ ಕಳಂಕ ತರುವ ರೀತಿಯಲ್ಲಿ ರುದೇಶ್ ನಡೆದುಕೊಳ್ಳುತ್ತಿದ್ದಾರೆ. ಯಡಿಯೂರಪ್ಪ ಹಾಗೂ ಸೋಮಣ್ಣ ಅವರು ರಾಜ್ಯದ ಎರಡು ಕಣ್ಣುಗಳಿದ್ದಂತೆ. ಸೋಮಣ್ಣ ಅವರು 2008ರಲ್ಲಿ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡಲು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅವರು ಬಹಳ ಅನ್ಯೋನ್ಯತೆಯನ್ನು ಸಹಿಸದ ಇಂಥ ಹಿಂಬಾಲಕರು ಅವರ ವಿರುದ್ದ ಕಂದಕ ನಿರ್ಮಾಣ ಮಾಡಲು ಹೊರಟಿದ್ದಾರೆ. ಟಿಕೆಟ್ ಘೋಷಣೆಯಾದ ಬಳಿಕ ಮೊದಲು ಸೋಮಣ್ಣ ಅವರು ಯಡಿಯೂರಪ್ಪ ಅವರ ಮನೆಗೆ ತೆರಳಿ ಸಿಹಿ ತಿನ್ನಿಸಿ, ಆಶೀರ್ವಾದ ಪಡೆದು ಬಂದಿದ್ದಾರೆ ಎಂದರು.
ಈಗಾಗಲೇ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಯುವ ನಾಯಕ ವಿಜಯೇಂದ್ರ ಅವರು ವರುಣಾ ಮತ್ತು ಚಾಮರಾಜನಗರಕ್ಕೆ ಚುನಾವಣಾ ಪ್ರಚಾರಕ್ಕೆ ಬರುವಂತೆ ಅಹ್ವಾನಿಸಿದ್ದಾರೆ. ಅವರು ಸಹ ಒಪ್ಪಿದ್ದಾರೆ. ಇವೆಲ್ಲವು ಸಹ ಸೋಮಣ್ಣ ಹಾಗು ಯಡಿಯೂರಪ್ಪ ಅವರ ನಡುವೆ ಅತ್ಮೀಯತೆಯಾಗಿದೆ. ಮತದಾರರು ಇಂಥ ಟೀಕೆ ಟಿಪ್ಪಣಿಗಳಿಗೆ ಮಾರು ಹೋಗಬೇಡಿ. ಈ ಹಿಂದೆ ಯಾರಿಗೆ ಟಿಕೆಟ್ ನೀಡಿದರು ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಿಸುತ್ತೇನೆ ಎಂದು ಬೊಬ್ಬೆ ಹೊಡೆಯುತ್ತಿದ್ದ ರುದ್ರೇಶ್ ಕ್ಷೇತ್ರದಲ್ಲಿ ಬಿಜೆಪಿ ಗೆಲುವಿಗೆ ಶ್ರಮಿಸಲಿ. ಕೇವಲ ಹೇಳಿಕೆ ನೀಡಿ. ಪಲಾಯನ ಮಾಡುವುದು ಬೇಡ ವೀರಭದ್ರಸ್ವಾಮಿ ತಿಳಿಸಿದರು.
ಈ ಕ್ಷೇತ್ರದಲ್ಲಿ ಎಂ.ಸಿ. ಬಸಪ್ಪ, ಎಸ್. ಪುಟ್ಟಸ್ವಾಮಿ, ಯು.ಎಂ. ಮಾದಪ್ಪ ಸಿ. ಗುರುಸ್ವಾಮಿ ಅವರಂಥ ಸಜ್ಜನ ಕುಟುಂಬದಿಂದ ಬಂದು ಸರಳ ವ್ಯಕ್ತಿತ್ವದ ಮೂಲಕ ಶಾಸಕರಾಗಿ ಉತ್ತಮ ಕೆಲಸ ಮಾಡಿ ನಮ್ಮೆಗೆಲ್ಲ ಮಾದರಿಯಾಗಿದ್ದಾರೆ. ಅವರ ಹಾದಿಯಲ್ಲಿಯೇ ಜಿಲ್ಲೆಯ ಅಭಿವೃದ್ದಿಗೆ ವಿ. ಸೋಮಣ್ಣ ಅವರ ಕೊಡುಗೆ ಇದೆ. ಕಳೆದ 20 ವರ್ಷಗಳಿಂದ ಜಿಲ್ಲೆಯ ಜನರ ಒಡನಾಟ ಸೋಮಣ್ಣ ಅವರಿಗೆ ಇದೆ. ವರಿಷ್ಠರು ಸಹ ಇದನ್ನು ಗಮನಿಸಿ, ನಾಲ್ಕು ಕ್ಷೇತ್ರಗಳನ್ನು ಗೆಲ್ಲಿಸುವ ಹೊಣಗಾರಿಕೆಯನ್ನು ಸೋಮಣ್ಣ ಅವರಿಗೆ ನೀಡಿ, ಕ್ಷೇತ್ರಕ್ಕೆ ಕಳುಹಿಸಿಕೊಟ್ಟಿದ್ದಾರೆ. ಹೈಕಮಾಂಡ್ ಪ್ರಶ್ನೆ ಮಾಡುವ ತಾಕತ್ತು ಹಾಗು ಅಧಿಕಾರವನ್ನು ರುದ್ರೇಶ್‍ಗೆ ಕೊಟ್ಟವರು ಯಾರು ಎಂದು ವೀರಭದ್ರಸ್ವಾಮಿ ಪ್ರಶ್ನೆ ಮಾಡಿದರು.
ಗೋಷ್ಠಿಯಲ್ಲಿ ತಾ.ಪಂ. ಮಾಜಿ ಸದಸ್ಯ ಎಂ.ಸಿ. ಮಲ್ಲದೇವರು, ಬಿಜೆಪಿ ಮುಖಂಡರಾದ ಬಸವನಪುರ ರಾಜಶೇಖರ್, ಯುವ ಮುಖಂಡ ಕಾರ್ತಿಕ್, ಜಿಲ್ಲಾ ಜಾಗೃತಿ ಸಮಿತಿ ಸದಸ್ಯ ಸಿದ್ದರಾಜು, ಅಕ್ರಮ ಸಕ್ರಮ ಸಮಿತಿಯ ಮಾಜಿ ಸದಸ್ಯ ಸಿದ್ದರಾಜು, ಕಾಳನಹುಂಡಿ ಡೇರಿ ಅಧ್ಯಕ್ಷ ಕುಮಾರಸ್ವಾಮಿ ಇತರರು ಇದ್ದರು.