ತಾಕತ್ತಿದ್ದರೆ ಸುರೇಶ್‌ಗೌಡರನ್ನು ಕಟ್ಟಿ ಹಾಕಲಿ: ಡಿವಿಎಸ್ ಸವಾಲು

ತುಮಕೂರು,ಮಾ. ೨- ಧರ್ಮ ಸಂಸ್ಥಾಪನಾರ್ಥವಾಗಿ ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ನಡೆಯುತ್ತಿರುವ ಚುನಾವಣೆ ಎಂಬ ಅಶ್ವಮೇಧಯಾಗಕ್ಕೆ ಸುರೇಶಗೌಡ ಎಂಬ ಕುದುರೆಯನ್ನು ಬಿಟ್ಟಿದ್ದೇವೆ. ವಿರೋಧ ಪಕ್ಷಗಳಿಗೆ ತಾಕತ್ತಿದ್ದರೆ ಈ ಕುದುರೆಯನ್ನು ಕಟ್ಟಿ ಹಾಕಲಿ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಸವಾಲು ಹಾಕಿದರು.
ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಹೊನ್ನುಡಿಕೆ ಮತ್ತು ಹೆಬ್ಬೂರು ಹೋಬಳಿಗಳ ಬಿಜೆಪಿ ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ೧೦ ವರ್ಷಗಳ ಕಾಲ ಕ್ಷೇತ್ರದ ಅಭಿವೃದ್ದಿ ಹೊಳೆಯನ್ನೇ ಹರಿಸಿದ ಬಿ.ಸುರೇಶಗೌಡ, ೨೦೧೮ರ ಚುನಾವಣೆಯಲ್ಲಿ ಕಾರ್ಯಕರ್ತರು ಅತಿಯಾದ ಆತ್ಮವಿಶ್ವಾಸದಿಂದ ಕೂದಲೆಳೆಯ ಅಂತರದಲ್ಲಿ ಸೋಲು ಕಂಡಿದ್ದಾರೆ. ಆದರೆ ಈ ಬಾರಿ ಅದು ಸಾಧ್ಯವಿಲ್ಲ. ಶೇ. ೧೦೦ಕ್ಕೆ ನೂರರಷ್ಟು ಸುರೇಶ್‌ಗೌಡರ ಗೆಲುವು ಖಚಿತ ಎಂದರು.
ಸುರೇಶ್‌ಗೌಡರು ಹತ್ತು ವರ್ಷಗಳ ಶಾಸಕ ಅವಧಿಯಲ್ಲಿ ಕ್ಷೇತ್ರದ ಅಭಿವೃದ್ದಿಗಾಗಿ ೨೦೦೦ ಕೋಟಿಗೂ ಅಧಿಕ ಅನುದಾನವನ್ನು ತಂದು ರಸ್ತೆ, ಚರಂಡಿ,ಸಮುದಾಯ ಭವನ, ವಿದ್ಯುತ್ ಸಂಪರ್ಕ,ಪ್ರಾಥಮಿಕ ಶಾಲೆಗಳ ಅಭಿವೃದ್ದಿ ಸೇರಿದಂತೆ ಕ್ಷೇತ್ರದ ಮೂಲಭೂತ ಸೌಕರ್ಯಗಳಿಗೆ ಹೆಚ್ಚು ಒತ್ತು ನೀಡಿದರೆ, ಈಗಿನ ಶಾಸಕರು ಕೇಂದ್ರದಿಂದ ಬಿಡುಗಡೆಯಾದ ೧೦ ಕೋಟಿ ರೂಗಳ ಅಭಿವೃದ್ದಿ ಕಾಮಗಾರಿಯ ಗುತ್ತಿಗೆದಾರರು ಕಮಿಷನ್ ನೀಡಿಲ್ಲ ಎಂಬ ಕಾರಣಕ್ಕೆ ಕೆಲಸ ಮಾಡಲೇ ಬಿಟ್ಟಿಲ್ಲ. ಇಂತಹ ಶಾಸಕರ ಅಗತ್ಯ ಕ್ಷೇತ್ರಕ್ಕೆ ಇದೆಯೇ ಎಂಬುದನ್ನು ಮತದಾರರು ತೀರ್ಮಾನಿಸಬೇಕು ಎಂದು ಹೇಳಿದರು.
ರಾಜ್ಯದಲ್ಲಿ ಅಧಿಕಾರದ ಆಸೆಗಾಗಿ ನಡೆಯುತ್ತಿರುವ ಜೆಡಿಎಸ್‌ನ ಪಂಚರತ್ನ ರಥ ಯಾತ್ರೆ, ಪಂಕ್ಚರ್ ಆಗಿದೆ. ಕಾಂಗ್ರೆಸ್‌ನ ಪ್ರಜಾಧ್ವನಿಗೆ ಉಸಿರೇ ಇಲ್ಲದಂತಾಗಿದೆ. ಡಿ.ಕೆ.ಶಿ, ಸಿದ್ದರಾಮಯ್ಯ ಅವರದ್ದು ಒಂದೊಂದು ದ್ವನಿಯಾದರೆ, ಮಲ್ಲಿಕಾರ್ಜುನ ಖರ್ಗೆಅವರದೇ ಬೇರೆ ಆಲೋಚನೆಯಾಗಿದೆ.ದೇಶ, ನಾಡಿನ ಅಭಿವೃದ್ದಿ ಪರಿಕಲ್ಪನೆಯಲ್ಲಿ ದುಡಿಯುತ್ತಿರುವ ಏಕೈಕ ಪಕ್ಷವೆಂದರೆ ಅದು ಬಿಜೆಪಿ ಮಾತ್ರ. ಒಂದು ಕಾಲದಲ್ಲಿ ಹೊರದೇಶಗಳಿಂದ ಬೇಡುವ ಸ್ಥಿತಿಯಲ್ಲಿದ್ದ ಭಾರತ, ಇಂದು ಬೇರೆ ರಾಷ್ಟ್ರಗಳಿಗೆ ನೀಡುವ ಸ್ಥಿತಿಯಲ್ಲಿದೆ ಎಂದರೆ ಅದಕ್ಕೆ ಕಾರಣ ಪ್ರಧಾನಿ ನರೇಂದ್ರಮೋದಿ ಅವರ ಆಡಳಿತ ಎಂದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪಂಚೆ ರಾಮಚಂದ್ರಯ್ಯ, ತಾ.ಪಂ ಮಾಜಿ ಅಧ್ಯಕ್ಷ ವೆಂಕಟೇಶ್ ಸೇರಿದಂತೆ ಹಲವರು ಬಿಜೆಪಿಗೆ ಸೇರ್ಪಡೆಯಾದರು.
ಸಮಾವೇಶದಲ್ಲಿ ಬಿಜೆಪಿ ರೈತ ಮೋರ್ಚಾ ಉಪಾಧ್ಯಕ್ಷ ಶಿವಪ್ರಸಾದ್, ಜಿ.ಪಂ.ಮಾಜಿ ಅಧ್ಯಕ್ಷ ವೈ.ಹೆಚ್.ಹುಚ್ಚಯ್ಯ, ಮಂಡಲ ಅಧ್ಯಕ್ಷ ಶಂಕರ್, ಜಿ.ಪಂ.ಮಾಜಿ ಸದಸ್ಯರಾದ ರಾಜೇಗೌಡ, ರಾಮುಸ್ವಾಮಿಗೌಡ, ಆಂದಾನಪ್ಪ, ಬಿಜೆಪಿ ಜಿಲ್ಲಾ ಎಸ್ಸಿ ಮೋರ್ಚಾ ಅಧ್ಯಕ್ಷ ನರಸಿಂಹಮೂರ್ತಿ, ಎಪಿಎಂಸಿ ಅಧ್ಯಕ್ಷ ಉಮೇಶಗೌಡ, ಬಿಜೆಪಿ ಮುಖಂಡ ಕುಮಾರ್, ತುಮುಲ್ ನಿರ್ದೇಶಕ ರೇಣುಕಾಪ್ರಸಾದ್, ಪ್ರಕಾಶ್, ಸಿದ್ದೇಗೌಡ, ವೈ.ಟಿ.ನಾಗರಾಜು, ಅರೆಕೆರೆ ರವಿ, ವಿಜಯಕುಮಾರ್, ಮಾಸ್ತಿಗೌಡ, ತಾರಾದೇವಿ, ಬಳ್ಳಗೆರೆ ಮುಖಂಡರಾದ ವೆಂಕಟೇಶ್ ಮತ್ತಿತರರು ಭಾಗವಹಿಸಿದ್ದರು.