ತಾಂತ್ರಿಕತೆ ಶಿಕ್ಷಣಕ್ಕೆ ಹೆಚ್ಚಿನ ಬೇಡಿಕೆ

ಮಧುಗಿರಿ, ಸೆ. ೧೭- ಮುಂದಿನ ದಿನಗಳಲ್ಲಿ ತಾಂತ್ರಿಕತೆಯಿಂದ ಕೂಡಿದ ಶಿಕ್ಷಣಕ್ಕೆ ಬೇಡಿಕೆ ಇದ್ದು, ವಿದ್ಯಾರ್ಥಿಗಳು ಆಸಕ್ತಿಯಿಂದ ತರಬೇತಿ ಪಡೆಯಬೇಕು ಎಂದು ರಾಜ್ಯ ಕೌಶಲ್ಯಾಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಮುರಳೀಧರ ಹಾಲಪ್ಪ ತಿಳಿಸಿದರು.
ಪಟ್ಟಣದ ತುಮಕೂರು ರಸ್ತೆಯಲ್ಲಿರುವ ಸರ್ಕಾರಿ ಐಟಿಐ ಕಾಲೇಜಿನಲ್ಲಿ ಏರ್ಪಡಿಸಿದ್ದ ಉದ್ಯೋಗ ಕಾರ್ಯಾಗಾರ ಹಾಗೂ ಇಂಜಿನಿಯರ್ಸ್ ದಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಆಧುನಿಕ ತಂತ್ರಜ್ಞಾನದಿಂದಾಗಿ ದೇಶದಲ್ಲಿ ವಿದ್ಯುತ್ ಚಾಲಿತ ವಾಹನಗಳ ಸಂಖ್ಯೆ ಹೆಚ್ಚುತ್ತಿದೆ. ತುಮಕೂರು ಜಿಲ್ಲೆಯಲ್ಲಿ ೨೭ ಸಾವಿರ ಎಕರೆ ಪ್ರದೇಶದಲ್ಲಿ ಕೈಗಾರಿಕಾ ವಲಯ ಸ್ಥಾಪಿಸುತ್ತಿದೆ. ಅನೇಕ ವಿದೇಶಿ ಕಂಪನಿಗಳು ಇಲ್ಲಿ ಕೈಗಾರಿಕೆ ಪ್ರಾರಂಭಿಸುತಿವೆ. ಈ ನಿಟ್ಟಿನಲ್ಲಿ ಕೈಗಾರಿಕಾ ತರಬೇತಿ ಪಡೆದ ವಿದ್ಯಾರ್ಥಿಗಳಿಗೆ ವಿಫುಲ ಉದ್ಯೋಗಾವಕಾಶ ಸಿಗಲಿದೆ ಎಂದರು.
ಗುಬ್ಬಿಯ ಎಚ್‌ಎಎಲ್‌ನಲ್ಲಿ ೪೮೦೦ ಮಂದಿಗೆ ಉದ್ಯೋಗಕ್ಕೆ ಅವಕಾಶವಿದ್ದು, ಜಿಲ್ಲೆಯ ಜನಪ್ರತಿನಿಧಿಗಳು ಜಿಲ್ಲೆಯ ವಿದ್ಯಾರ್ಥಿಗಳಿಗೆ ಪ್ರಥಮ ಪ್ರಾಶಸ್ತ್ಯ ನೀಡಬೇಕೆಂದು ಅಧಿಕಾರಿಗಳಿಗೆ ಮನವಿ ಮಾಡಿದ್ದು ಇದಕ್ಕೆ ಸ್ಪಂದಿಸಿದ್ದಾರೆ. ನಿಮ್ಮ ಭವಿಷ್ಯ ಉಜ್ವಲಗೊಳಿಸಲು ಸರ್ಕಾರ ನಿಮಗೆ ಶಾಶ್ವತ ಉದ್ಯೋಗ ಕಲ್ಪಿಸಲು ಯೋಜನೆ ರೂಪಿಸುತ್ತಿದೆ ಎಂದರು.
ನಗರ ಪ್ರದೇಶಕ್ಕೆ ಸೀಮಿತವಾಗಿದ್ದ ಉದ್ಯೋಗ ಮೇಳವನ್ನು ಗಡಿಭಾಗದ ಬರಪೀಡಿತ ಪ್ರದೇಶವಾದ ಮಧುಗಿರಿಯಲ್ಲಿ ನಡೆಸಬೇಕೆಂದು ಆಯುಕ್ತರಿಗೆ ಮನವಿ ಮಾಡಲಾಗಿದ್ದು ಮುಂದಿನ ದಿನಗಳಲ್ಲಿ ಇಲ್ಲಿಯೂ ನಡೆಸಲಾಗುವುದು ಎಂದರು.
ಪೀಣ್ಯ ಕೈಗಾರಿಕೆಗಳ ಸಂಘದ ಮಾಜಿ ಅಧ್ಯಕ್ಷ ಡಿ.ಟಿ. ವೆಂಕಟೇಶ್ ಮಾತನಾಡಿ, ಇಲ್ಲಿಯವರೆಗೆ ಐಟಿಐ ಶಿಕ್ಷಣ ನಿಂತ ನೀರಾಗಿದ್ದು, ಹತ್ತು ವರ್ಷಗಳ ಹಿಂದೆ ಐಟಿಐ ಶಿಕ್ಷಣದಲ್ಲಿ ಕ್ರಾಂತಿಯಾಯಿತು. ದೇಶದ ಹೆಮ್ಮೆಯ ಟಾಟಾ ಸಂಸ್ಥೆಯವರು ಐಟಿಐಗಳಿಗೆ ಸುಸಜ್ಜಿತ ಉಪಕರಣ, ಪ್ರಯೋಗಾಲಯಗಳನ್ನು ಕೊಡುಗೆಯಾಗಿ ನೀಡಿದ್ದು, ಇದರಿಂದ ವಿದ್ಯಾರ್ಥಿಗಳಿಗೆ ಆಧುನಿಕ ತಂತ್ರಜ್ಞಾನ ಬಳಸಿಕೊಳ್ಳುವ ಅವಕಾಶ ಸಿಕ್ಕಿದೆ ಎಂದ ಅವರು, ಪ್ರಖ್ಯಾತ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡು ಐಟಿಐ ವಿದ್ಯಾರ್ಥಿಗಳಿಗೆ ಉದ್ಯೋಗ ಕಲ್ಪಿಸಲಾಗುವುದು ಎಂದರು.
ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಅಧಿಕಾರಿ ತಿಪ್ಪೇಸ್ವಾಮಿ ಮಾತನಾಡಿ, ಮಧುಗಿರಿಯಲ್ಲಿ ಉದ್ಯೋಗ ಮೇಳ ಆಯೋಜಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು. ಈ ಶಿಕ್ಷಣ ಸಂಸ್ಥೆಯಲ್ಲಿ ಸಂಚಾರಿ ನೋಂದಣಿ ಕಾರ್ಯಕ್ರಮನ್ನು ಮುಂದಿನ ದಿನಗಳಲ್ಲಿ ನಡೆಸಲಾಗುವುದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯರಾದ ರೂಪಾ ವಹಿಸಿದ್ದರು. ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಅಧಿಕಾರಿ ಲಾಲೂ ಪ್ರಸಾದ್, ಧರ್ಮಸ್ಥಳ ಸಂಸ್ಥೆಯ ಯೋಜನಾಧಿಕಾರಿ ದಿನೇಶ್, ಯುಕ್ತ ಫೌಂಡೇಶನ್ ಅಧ್ಯಕ್ಷ ದಿಲೀಪ್ ಮತ್ತಿತರುರ ವೇದಿಕೆಯಲ್ಲಿ ಉಪಸ್ಥಿತರಿದ್ದರು.