ತಾಂಡಾ ನಿವಾಸಿಗಳಿಗೆ ಪ್ರಧಾನಿ ಹಕ್ಕುಪತ್ರ ಕೊಟ್ಟಿದ್ದು ಶಾಸಕ ಎಂ.ವೈ. ಪಾಟೀಲ್‍ರಿಗೆ ಹೊಟ್ಟೆಕಿಚ್ಚು: ಮಾಲಿಕಯ್ಯ ಗುತ್ತೇದಾರ್

ಅಫಜಲಪುರ :ಜ.20: ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರಿಂದ ತಾಂಡಾ ನಿವಾಸಿಗಳು ಹಕ್ಕುಪತ್ರ ಪಡೆದು ಸಂಭ್ರಮಿಸುತ್ತಿರುವುದು ಕ್ಷೇತ್ರದ ಕಾಂಗ್ರೆಸ್ ಶಾಸಕ ಎಂ.ವೈ. ಪಾಟೀಲ್ ಅವರಿಗೆ ಅರಗಿಸಿಕೊಳ್ಳಲಾಗದೇ ಹೊಟ್ಟೆಕಿಚ್ಚು ಪಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಹಾಗೂ ಮಾಜಿ ಸಚಿವ ಮಾಲಿಕಯ್ಯ ಗುತ್ತೇದಾರ್ ಅವರು ಕಟುವಾಗಿ ಟೀಕಿಸಿದರು.
ನಮ್ಮ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕದ ಕಲಬುರ್ಗಿ, ಬೀದರ್, ಯಾದಗಿರಿ, ರಾಯಚೂರು ಹಾಗೂ ಮುಂಬಯಿ ಕರ್ನಾಟಕದ ವಿಜಯಪುರ ಜಿಲ್ಲೆಗಳ 52,072 ಜನರಿಗೆ ಹಕ್ಕುಪತ್ರ ವಿತರಣೆ ಮಾಡಲು ಪ್ರಧಾನಿ ನರೇಂದ್ರ ಮೋದಿ ಅವರ ಆಗಮನಕ್ಕೆ ರಾಷ್ಟ್ರಕೂಟರ ನಾಡು ಮಳಖೇಡದಲ್ಲಿನ ಕಾರ್ಯಕ್ರಮ ದೇಶದ ಇತಿಹಾಸದಲ್ಲಿಯೇ ಐತಿಹಾಸಿಕವಾಗಿದೆ ಎಂದು ಬಣ್ಣಿಸಿದರು.
ರಾಜ್ಯಾದ್ಯಂತ ಲಂಬಾಣಿ ತಾಂಡಾ, ಹಟ್ಟಿ, ಆಡಿ, ಗೊಲ್ಲರಹಟ್ಟಿ, ವಡ್ಡರ ಹಟ್ಟಿಯಲ್ಲಿರುವ ಅಲೆಮಾರಿ ಜನಾಂಗದವರಿಗೆ ಖಾಯಂ ಸೂರು ಒದಗಿಸುವ ದೃಷ್ಟಿಯಿಂದ ಕಲಬುರ್ಗಿ ಜಿಲ್ಲೆಯಲ್ಲಿ 27,267 ಬೀದರ್ ಜಿಲ್ಲೆಯಲ್ಲಿ 7,500 ರಾಯಚೂರು ಜಿಲ್ಲೆಯಲ್ಲಿ 3,500 ವಿಜಯಪುರ- ಯಾದಗಿರಿ ಜಿಲ್ಲೆಗಳಲ್ಲಿ 11,200 ಹಾಗೂ 2,605 ಸೇರಿದಂತೆ ಒಟ್ಟು 52,072 ಜನರಿಗೆ ಪ್ರಧಾನಿ ನರೇಂದ್ರ ಮೋದಿ ಅವರೇ ಈ ಭಾಗದ ಲಂಬಾಣಿ ಸಮುದಾಯದ ಜನರಿಗೆ ತಮ್ಮ ಕೈಯ್ಯಾರೆ ಹಕ್ಕುಪತ್ರಗಳನ್ನು ವಿತರಿಸಿದರು. ಆ ಕುರಿತು ಗಿನ್ನಿಸ್ ದಾಖಲೆಯ ಪ್ರಮಾಣಪತ್ರವನ್ನೂ ಸಹ ವೇದಿಕೆಯಲ್ಲಿಯೇ ರಾಜ್ಯದ ಕಂದಾಯ ಸಚಿವ ಆರ್. ಅಶೋಕ್ ಅವರಿಗೆ ಪ್ರದಾನ ಮಾಡಲಾಗಿದೆ. ಇಂತಹ ಗಿನ್ನಿಸ್ ದಾಖಲೆಯು ಹೆಮ್ಮೆಯ ಸಂಗತಿ ಎಂದು ಅವರು ಹೇಳಿದರು.
ಸೂರಿನಿಂದ ಹಲವು ಶತಮಾನಗಳಿಂದ ವಂಚಿತ ಸಮುದಾಯಕ್ಕೆ ಪಕ್ಕಾ ಸೂರು ಕಲ್ಪಿಸುವ ಅಮೃತ ಘಳಿಗೆ ಎಂದು ಬಣ್ಣಿಸಿದ ಅವರು, ನಮ್ಮ ಮತಕ್ಷೇತ್ರದಿಂದ ಸುಮಾರು 25000 ಕ್ಕೂ ಹೆಚ್ಚು ಜನರು ಪ್ರಧಾನಿ ಕಾರ್ಯಕ್ರಮದಲ್ಲಿ ಭಾಗಿಯಾಗುವ ಮೂಲಕ ಸಾಕ್ಷಿಯಾದರು. ಅಲ್ಲದೇ ನಮ್ಮ ವೈಯಕ್ತಿಕವಾಗಿ ಕ್ಷೇತ್ರದ ಜನರಿಗೆ ಖಾಸಗಿ ವಾಹನಗಳ ವ್ಯವಸ್ಥೆ ಮಾಡಲಾಗಿತ್ತು. ನಮ್ಮ ತಾಲ್ಲೂಕಿನಲ್ಲಿ ಒಟ್ಟು 17 ತಾಂಡಾಗಳಿವೆ ಎಂದರು.
ಶಾಸಕ ಎಂ.ವೈ. ಪಾಟೀಲ್ ಅವರ ಟೀಕೆಗೆ ಆಕ್ಷೇಪಿಸಿದ ಮಾಲಿಕಯ್ಯ ಗುತ್ತೇದಾರ್ ಅವರು, ಮತಕ್ಷೇತ್ರದಲ್ಲಿಯೂ ಕೂಡ ತಾಂಡಾಗಳಿವೆ. ಲಂಬಾಣಿ ಸಮುದಾಯದ ನಿವಾಸಿಗಳು ಹಕ್ಕು ಪತ್ರ ಪಡೆಯುತ್ತಾರೆ ಎಂದರೆ ಶಾಸಕರು ಖುಷಿ ಪಡಬೇಕು. ಇಂತಹ ಒಳ್ಳೆಯ ಕಾರ್ಯಕ್ರಮಕ್ಕೆ ಬರುವುದಿಲ್ಲ ಎಂದರೆ ಯಾವುದೇ ಪಕ್ಷದ ಶಾಸಕರಿಗೆ ಶೋಭೆ ತರುವಂತಹುದಲ್ಲ ಎಂದು ಕಿಡಿಕಾರಿದರು.
ಕಾರ್ಯಕ್ರಮಕ್ಕೆ ಬರದೇ ಇರುವುದು ಅವರ ವಿವೇಚನೆಗೆ ಬಿಟ್ಟಿದ್ದು, ಅದರ ಕುರಿತು ಪ್ರತಿಕ್ರಿಯಿಸುವುದಿಲ್ಲ. ಶಿಷ್ಠಾಚಾರದ ಪ್ರಕಾರ ಜಿಲ್ಲಾಡಳಿತ ಶಾಸಕರಿಗೆ ಆಮಂತ್ರಣ ನೀಡಿದೆ. ಅವರೊಬ್ಬರು ಹಿರಿಯ ಶಾಸಕರು. ಅವರ ಪಕ್ಷದ ನಿರ್ದೇಶನದಂತೆ ಹಾಗೆ ಅವರು ಹೇಳಿರಬಹುದು. ಅವರ ಆತ್ಮಸಾಕ್ಷಿಯಾಗಿ ಅಲ್ಲ. ಆದಾಗ್ಯೂ, ಅವರು ಈ ಕುರಿತು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಅವರು ಎಂ.ವೈ. ಪಾಟೀಲ್ ಅವರ ವಿರುದ್ಧ ಕುಟುಕಿದರು.
ಇನ್ನು ಲಂಬಾಣಿ ಸಮುದಾಯದ ಜನರಿಗೆ ಕಂದಾಯ ಗ್ರಾಮಗಳನ್ನಾಗಿ ಪರಿವರ್ತನೆ ಮಾಡಿ ಆ ಸಮುದಾಯಕ್ಕೆ ಮನೆಗಳ ಹಕ್ಕು ಪತ್ರ ನೀಡಲು ಪ್ರಧಾನಿ ಕಾರ್ಯಕ್ರಮವಾಗಿದ್ದರಿಂದ ಅದು ಸರ್ಕಾರಿ ಕಾರ್ಯಕ್ರಮವಾಗಿತ್ತು. ಹೀಗಾಗಿ ಜನರಿಗೆ ಕರೆತರಲು ಅನುಕೂಲ ಆಗಲೆಂಬ ಉದ್ದೇಶದಿಂದ ಸರ್ಕಾರದ ಸಾರಿಗೆ ಸಂಸ್ಥೆಯೊಂದಿಗೆ ಒಪ್ಪಂದದ ಮಾತುಕತೆ ಆಗಿದೆ. ಬಿಜೆಪಿ ಸರ್ಕಾರದಲ್ಲಿ ನಮಗೆ ಮನೆಗಳ ಹಕ್ಕು ಪತ್ರಗಳು ಸಿಗುತ್ತಿವೆ ಎಂದು ಖುಷಿ ಹಾಗೂ ಅಭಿಮಾನದಿಂದ ಅಥವಾ ಪಕ್ಷದ ಮೇಲಿರುವ ಅಭಿಮಾನಪೂರ್ವಕವಾಗಿ ಕಾರ್ಯಕರ್ತರು ಬಸ್‍ಗಳ ಮೇಲೆ ಬಿಜೆಪಿ ಪಕ್ಷದ ಧ್ವಜ ಕಟ್ಟಿರಬಹುದು. ಅದನ್ನೇ ಮಹಾಪರಾಧ ಎಂಬಂತೆ ಶಾಸಕರು ಆಕ್ಷೇಪಿಸಿದ್ದು ಬಾಲಿಶತನದ್ದು ಎಂದು ಅವರು ಟೀಕಿಸಿದರು.
ಹಿಂದೆ ಕಾಂಗ್ರೆಸ್ ಹಾಗೂ ಜೆಡಿಎಸ್ ಅಧಿಕಾರದ ಅವಧಿಯಲ್ಲಿ ಎಷ್ಟೊಂದು ಸರ್ಕಾರದ ಹೆಸರಿನ ಮೇಲೆ ಆಡಳಿತ ಯಂತ್ರವನ್ನು ದುರುಪಯೋಗ ಮಾಡಿಕೊಂಡಿಲ್ಲ? ಎಂದು ಖಾರವಾಗಿ ಪ್ರಶ್ನಿಸಿದ ಅವರು, ಇತ್ತೀಚೆಗೆ ಮದುವೆ ಕಾರ್ಯಕ್ರಮಗಳಲ್ಲಿಯೂ ಸಹ ಕಾಂಗ್ರೆಸ್ಸಿನವರು ಸಮಾವೇಶ ಮಾಡಿ ಅತ್ಯಂತ ಕೀಳು ಮಟ್ಟದ ರಾಜಕೀಯ ಹುಟ್ಟುಹಾಕಿದ್ದು ಸಾರ್ವಜನಿಕ ವಲಯದಲ್ಲಿ ಅಪಹಾಸ್ಯಕ್ಕೆ ಒಳಗಾಗಿದೆ ಎಂದು ಅವರು ಜರಿದರು.
ಸಿದ್ಧರಾಮೋತ್ಸವ, ಆರ್.ಬಿ. ತಿಮ್ಮಾಪೂರ್ ಉತ್ಸವಗಳಲ್ಲಿ ಬಸ್‍ಗಳ ಮೇಲೆ ಕಾಂಗ್ರೆಸ್ ಧ್ವಜ, ಬ್ಯಾನರ್ ಹಾಗೂ ಮುಖಂಡರ ಭಾವಚಿತ್ರಗಳು ರಾರಾಜಿಸಿವೆ. ಹೀಗೆ ಸಾಕಷ್ಟು ಉದಾಹರಣೆಗಳನ್ನು ಕೊಡಬಹುದು. ಆದಾಗ್ಯೂ, ಅಲೆಮಾರಿ ಜನಾಂಗ ಬಂಜಾರಾ ಸಮುದಾಯವು ಸಾಕಷ್ಟು ಸಂಕಷ್ಟಕ್ಕೆ ಒಳಗಾದ ಜನಾಂಗವಾಗಿದ್ದು, ಅವರಿಗೆ ಯಾವುದೇ ತೊಂದರೆ ಆಗದೇ ಖುಷಿಖುಷಿಯಲ್ಲಿ ತಮ್ಮ ಹಕ್ಕುಪತ್ರಗಳನ್ನು ತೆಗೆದುಕೊಂಡು ಹೋಗುವಂತೆ ಬಸ್ ಸೇರಿದಂತೆ ಎಲ್ಲ ರೀತಿಯ ವ್ಯವಸ್ಥೆಗಳನ್ನು ಜಿಲ್ಲಾಡಳಿತ ಮಾಡಿದೆ. ಇದು ನಿಜವಾಗಿಯೂ ಕೇವಲ ಬಂಜಾರಾ ಸಮಾಜಕ್ಕೆ ಅಷ್ಟೇ ಅಲ್ಲ ಎಲ್ಲರಿಗೂ ಖುಷಿ ತರುವಂತಹ ವಿಚಾರ ಎಂದು ಅವರು ಹೇಳಿದರು.