ತಾಂಡಾ, ದೊಡ್ಡಿ ಜನತೆಗೆ ಆಹಾರ ಪೊರೈಕೆ

ದೇವದುರ್ಗ.ಮೇ.೨೭- ಪಟ್ಟಣದಲ್ಲಿರುವ ಕೆಎಸ್‌ಎನ್-ಅನ್ನದಾಸೋಹ ಕೇಂದ್ರದಿಂದ ಕೋವಿಡ-೧೯ ರೋಗಿಗಳಿಗೆ ಸೇರಿ ತಾಲೂಕಿನಾದ್ಯಂತ ಇರುವ ಎಲ್ಲಾ ಆಸ್ಪತ್ರೆಯ ವೈದ್ಯರನ್ನೊಳಗೊಂಡಂತೆ ಸಿಬ್ಬಂದಿ, ಪೌರ ಕಾರ್ಮಿಕರು ಸೇರಿದಂತೆ ತಾಲೂಕಿನ ವಿವಿಧ ಹಳ್ಳಿ, ತಾಂಡಾ, ದೊಡ್ಡಿಗಳ ಜನತೆಗೆ ಆಹಾರ ಪೋರೈಕೆ ಮತ್ತು ತಾಲೂಕಿನ ಎಲ್ಲಾ ನಾಗರೀಕರಿಗೆ ೩ ಲಕ್ಷಕ್ಕೂ ಹೆಚ್ಚು ಮಾಸ್ಕ ವಿತರಣೆ ಮಾಡುವ ತೀರ್ಮಾನವನ್ನು ಕೈಗೆತ್ತಿಕೊಳ್ಳಲಾಗಿದೆ.
ಈಗಾಗಲೇ ಪಟ್ಟಣದಾದ್ಯಂತ ಇರುವ ಆಸ್ಪತ್ರೆ, ಪೌರ ಕಾರ್ಮಿಕರಿಗೆ, ಪೋಲೀಸರಿಗೆ ಸೇರಿದಂತೆ ವಿವಿಧ ಸ್ಥರದ ಎಲ್ಲರಿಗೂ ಉಪಹಾರ, ಊಟದ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ಮುಂದುವರೆದ ಭಾಗವಾಗಿ ತಾಲೂಕಿನಲ್ಲಿನ ಎಲ್ಲಾ ೭ ಜಿಲ್ಲಾ ಪಂಚಾಯತಿ ಕ್ಷೇತ್ರಗಳ ವ್ಯಾಪ್ತಿಯ ಎಲ್ಲಾ ಗ್ರಾಮಗಳ ಜನತೆಗೆ ಊಟ ಮತ್ತು ಮಾಸ್ಕ ವಿತರಣೆಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಬುಧವಾರದಂದು ಈ ಕುರಿತಾಗಿ ದೇವದುರ್ಗದ ಶಾಸಕರು ಹಾಗೂ ಕೆಎಸ್‌ಎನ್-ಅನ್ನದಾಸೋಹ ಕೇಂದ್ರದ ಪ್ರಮುಖರು ಹಾಗೂ ೭ ಜಿಲ್ಲಾ ಪಂಚಾಯತಿ ಕ್ಷೇತ್ರ ವ್ಯಾಪ್ತಿಯ ಪ್ರಮುಖರ ಸಭೆಯನ್ನು ಶಾಸಕರು ನಡೆಸಿ, ಮುಂದಿನ ದಿನಗಳಲ್ಲಿ ತಾಲೂಕಿನ ಎಲ್ಲಾ ಗ್ರಾಮಗಳಿಗೆ ಊಟ ಮತ್ತು ಮಾಸ್ಕ ವಿತರಣೆಯ ಜೊತೆಗೆ ಕರೋನಾ ಕುರಿತಾಗಿ ಜಾಗೃತಿ ಮೂಡಿಸುವಂತಹ ಬೃಹತ ಕಾರ್ಯಕ್ಕೆ ಶಾಸಕರು ಮುಂದಾಗಿದ್ದಾರೆ.
ಪ್ರತಿ ನಿತ್ಯ ೧೦ ಸಾವಿರಕ್ಕೂ ಹೆಚ್ಚು ಉತ್ತಮ ಗುಣಮಟ್ಟದ ಊಟ, ಶುದ್ದ ಕುಡಿಯುವ ನೀರಿನೊಂದಿಗೆ ವಾಹನಗಳ ಮುಖಾಂತರ ಹಳ್ಳಿ, ಹಳ್ಳಿಗಳಿಗೆ ತೆರಳಿ ಊಟವನ್ನು ವಿತರಣೆ ಮಾಡಲು ವಿವಿಧ ತಂಡಗಳನ್ನು ರಚಿಸಿದ್ದಾರೆ. ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸುವ ಎಲ್ಲರಿಗೂ ಕೋವಿಶಿಲ್ಡ ಮತ್ತು ಕೋವ್ಯಾಕ್ಸಿನ್ ಲಸಿಕೆ ಹಾಕಿಸಿ, ಉತ್ತಮವಾದ ಮಾಸ್ಕ, ಫೇಸ ಶೀಲ್ಡಗಳನ್ನು ನೀಡಿ, ಸೇವೆ ಮಾಡಲು ಇಂದಿನ ಸಭೆಯಲ್ಲಿ ನಿರ್ಣಯಿಸಲಾಗಿದೆ.