ತಾಂಡಾ ಅಭಿವೃದ್ಧಿಗೆ ಬಿಡುಗಡೆಯಾದ 5 ಕೋಟಿ ರೂ.ಗುಳುಂ:ಯಾಕಾಪೂರ ಆರೋಪ

ಚಿಂಚೋಳಿ,ನ.19-ತಾಲ್ಲೂಕಿನ ಹಿಂದುಳಿದ ತಾಂಡಾಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಲು, ವಿಶೇಷವಾಗಿ ರಸ್ತೆಗಳ ನಿರ್ಮಾಣಕ್ಕಾಗಿ ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದಿಂದ 2018-2019ರ ಆರ್ಥಿಕ ವರ್ಷದಿಂದ ಇಲ್ಲಿಯವರೆಗೆ ಬಿಡುಗಡೆಯಾದ ಸುಮಾರು 5 ಕೋಟಿ ರೂಪಾಯಿಗಳನ್ನು ಶಾಸಕ ಡಾ.ಅವಿನಾಶ ಜಾಧವ ಹಾಗೂ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಗಮ (ಕೆ.ಆರ್.ಐ.ಡಿ.ಎಲ್)ದ ಅಧಿಕಾರಿಗಳು ಸೇರಿ ಗುಳುಂ ಮಾಡಿದ್ದಾರೆ ಎಂದು ಜೆಡಿಎಸ್ ಹಿರಿಮ ಮುಖಂಡ ಸಂಜೀವನ್ ಆರ್.ಯಾಕಾಪೂರ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ 5 ಕೋಟಿ ರೂಪಾಯಿ ಅನುದಾನದಲ್ಲಿ ಯಾವುದೇ ಅತ್ಯಾವಶ್ಯಕ ಕಾಮಗಾರಿಗಳನ್ನು ಗುರುತಿಸದೆ ಅನುದಾನ ದುರ್ಬಳಕೆ ಮಾಡುವ ದುರುದ್ದೇಶದಿಂದ ಅನಾವಶಕ ಕೆಲಸಗಳನ್ನು ಮಾಡಿದ ಹಾಗೆ ಅಂದಾಜು ಪಟ್ಟಿಯನ್ನು ಸಿದ್ದಪಡಿಸಲಾಗಿದೆ. ಪ್ರತಿ ಕಾಮಗಾರಿಗೆ 40 ರಿಂದ 50 ಲಕ್ಷ ರೂಗಳ ಅಂದಾಜು ಪಟ್ಟಿ ಸಿದ್ದಪಡಿಸಲಾಗಿದೆ. ಆಶ್ಚರ್ಯಕರ ಸಂಗತಿಯೆಂದರೆ ಇಷ್ಟೊಂದು ದೊಡ್ಡ ಅನುದಾನದಲ್ಲಿ ರಸ್ತೆಗಳಿಗೆ ಮುರುಮ್ ಮಾತ್ರ ಹಾಕಲು ಅಂದಾಜು ಪಟ್ಟಿ ಸಿದ್ದಪಡಿಸಲಾಗಿದೆ. ಹೀಗೆ ಒಟ್ಟು 11 ಕಾಮಗಾರಿಗಳನ್ನು ಆಯ್ಕೆ ಮಾಡಲಾಗಿದೆ. ಎಲ್ಲ ಕಾಮಗಾರಿಗಳಲ್ಲಿ ಕೇವಲ ಮುರುಮ್ ಹಾಕುವ ಕೆಲಸಕ್ಕೆ 40 ರಿಂದ 50 ಲಕ್ಷ ರೂಗಳನ್ನು ಖರ್ಚು ಮಾಡಲಾಗಿದೆ. ವಿಶೇಷವೆಂದರೆ ಈ 11 ಕಾಮಗಾರಿಗಳು ಕಳೆದ ಹಲವಾರು ವರ್ಷಗಳಿಂದ ಡಾಂಬರೀಕರಣದ ರಸ್ತೆಗಳಾಗಿವೆ ಎಂದು ಹೇಳಿದರು.
ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ, ಶಾಸಕ ರಾಜು ಕುಡಚಿ, ಅವರು ಸಹ ಇದರಲ್ಲಿ ಶಾಮೀಲಾಗಿದ್ದಾರೆ ಎಂದು ಆರೋಪಿಸಿದ ಯಾಕಾಪೂರ ಅವರು, 20 ದಿನಗಳ ಹಿಂದೆ ಬೆಂಗಳೂರಿನಿಂದ ಕೆ.ಆರ್.ಐ.ಡಿ.ಎಲ್. ವ್ಯವಸ್ಥಾಹಕ ನಿರ್ದೇಶಕರ ಕಚೇರಿಯ ನಿವೃತ್ತ ಕಾರ್ಯಪಾಲಕ ಅಭಿಯಂತರರು ಹಾಗೂ ಕಲಬುರಗಿಯ ಕೆ.ಆರ್.ಐ.ಡಿ.ಎಲ್. ಅಧೀಕ್ಷಕ ಅಭಿಯಂತರರ ನೇತೃತ್ವದಲ್ಲಿ ತನಿಖೆಯಾಗಿದೆ. ಆದರೆ ಇದುವರೆಗೆ ಯಾರ ವಿರುದ್ಧವು ಕ್ರಮ ಜರುಗಿಸಿಲ್ಲ. ಈ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ನಡೆದಿದೆ ಎಂದು ದೂರಿದರು.
ಈ ಅವ್ಯವಹಾರದಲ್ಲಿ ಶಾಮೀಲಾದ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಸಂಪೂರ್ಣ ಅನುದಾನ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದ ಯಾಕಾಪೂರ ಅವರು ವಿಳಂಭ ಮಾಡಿದರೆ ಜೆಡಿಎಸ್ ಉಗ್ರ ಹೋರಾಟ ಮಾಡಲಿದೆ ಎಂದು ಎಚ್ಚರಿಸಿದರು.
ಜವಿಶಂಕರ ರೆಡ್ಡಿ ಮುತ್ತಂಗಿ, ವಿಷ್ಣುಕಾಂತ ಮೂಲಗಿ, ಹಣಮಂತ ಪೂಜಾರಿ, ದೌಲಪ್ಪ ಸುಣಗಾರ ಸೇರಿದಂತೆ ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.