ತಾಂಡಾಗಳು ಕಂದಾಯ ಗ್ರಾಮಗಳಾಗಿ ಪರಿವರ್ತನೆ: ಸಚಿವ ಪ್ರಭು ಚವ್ಹಾಣ ಹರ್ಷ

ಬೀದರ:ಆ.3:ರಾಜ್ಯದಲ್ಲಿ ನೆಲೆಗೊಂಡಿರುವ ದಾಖಲೆರಹಿತ ಜನವಸತಿಗಳಾದ ಲಂಬಾಣಿ ತಾಂಡಾ, ಗೊಲ್ಲರಹಟ್ಟಿ, ವಡ್ಡರಹಟ್ಟಿ, ನಾಯಕರ ಹಟ್ಟಿ, ಕುರುಬರಹಟ್ಟಿ, ಹಾಡಿ, ಮಜರೆ, ದೊಡ್ಡಿ, ಪಾಳ್ಯ, ಕ್ಯಾಂಪ್, ಕಾಲೋನಿಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಿ, ಅಲ್ಲಿನ ನಿವಾಸಿಗಳಿಗೆ ಹಕ್ಕುದಾಖಲೆಗಳನ್ನು ಒದಗಿಸಲು ಮುಂದಾಗಿರುವ ಸರ್ಕಾರದ ನಿರ್ಧಾರಕ್ಕೆ ಪಶು ಸಂಗೋಪನೆ ಸಚಿವರಾದ ಪ್ರಭು ಬಿ.ಚವ್ಹಾಣ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಹಲವೆಡೆ ಲಂಬಾಣಿ ತಾಂಡಾ, ಗೊಲ್ಲರಹಟ್ಟಿ, ವಡ್ಡರ ಹಟ್ಟಿ ಇತ್ಯಾದಿ ದಾಖಲೆರಹಿತ ಜನವಸತಿ ಪ್ರದೇಶಗಳಲ್ಲಿನ ನಿವಾಸಿಗಳು ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಿರುತ್ತಾರೆ. ಇವರಿಗೆ ಹಕ್ಕುಪತ್ರಗಳನ್ನು ನೀಡಿ ಪಡಿತರ ಸೇರಿದಂತೆ ಸರ್ಕಾರದ ಎಲ್ಲ ಸೌಕರ್ಯಗಳನ್ನು ಒದಗಿಸುವಂತೆ ಮುಖ್ಯಮಂತ್ರಿಗಳು ಮತ್ತು ಕಂದಾಯ ಸಚಿವರನ್ನು ಅನೇಕ ಬಾರಿ ಮನವಿ ಮಾಡಿದ್ದೆ. ಹಾಗೆಯೇ ಕೆಲವು ದಿನಗಳ ಹಿಂದೆ ಕಂದಾಯ ಸಚಿವರಾದ ಆರ್.ಅಶೋಕ ಅವರು ಔರಾದ ತಾಲ್ಲೂಕಿನ ವಡಗಾಂವ(ಡಿ) ನಲ್ಲಿ ಗ್ರಾಮ ವಾಸ್ತವ್ಯ ಮಾಡಿದ್ದ ಸಂದರ್ಭದಲ್ಲಿ ಅವರನ್ನು ತಾಂಡಾಗೆ ಕರೆದುಕೊಂಡು ಹೋಗಿ ಅಲ್ಲಿನ ನಿವಾಸಿಗಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದೆ.

ಮುಖ್ಯಮಂತ್ರಿಗಳು ಮತ್ತು ಕಂದಾಯ ಸಚಿವರು ಜನಪರ ಕಾಳಜಿ ಹೊಂದಿದ್ದು, ನನ್ನ ಮನವಿಯನ್ನು ಪರಿಗಣಿಸಿ ದಾಖಲೆರಹಿತ ಜನವಸತಿಗಳನ್ನು ಕಂದಾಯ ಗ್ರಾಮವನ್ನಾಗಿ ಪರಿವರ್ತಿಸಿ, ಅಲ್ಲಿ ವಾಸವಿರುವ ಕುಟುಂಬಸ್ಥರ ಜಾಗಗಳಿಗೆ ಹಕ್ಕು ದಾಖಲೆಯನ್ನು ಒದಗಿಸಲು ಮುಂದಾಗಿದ್ದಾರೆ. ಈ ಕೆಲಸಕ್ಕೆ ಹೆಚ್ಚಿನ ಒತ್ತು ನೀಡಿರುವ ಕಂದಾಯ ಸಚಿವರ ಕಾರ್ಯವನ್ನು ಸಚಿವರು ಮುಕ್ತ ಕಂಠದಿಂದ ಹೊಗಳಿದ್ದಾರೆ.

ತ್ವರಿತಗತಿಯಲ್ಲಿ ಹಕ್ಕುಪತ್ರವನ್ನು ನೀಡಲು ಉಪಗ್ರಹ ಮತ್ತು ದ್ರೋಣ್ ಆಧಾರಿತ ನಕ್ಷೆ, ಇ.ಟಿ.ಎಸ್ ತಂತ್ರಜ್ಞಾನ ಬಳಕೆ ಮಾಡುವಂತೆ ಸೂಚನೆ ನೀಡಲಾಗಿದೆ. ಎಲ್ಲ ಜಿಲ್ಲಾಧಿಕಾರಿಗಳು ಮುತುವರ್ಜಿ ವಹಿಸಿ ಸರ್ಕಾರದ ಆಶಯವನ್ನು ಸಾಕಾರಗೊಳಿಸಲು ಮುಂದಾಗಬೇಕು. ಸರ್ಕಾರದ ನಿರ್ದೇಶನದಂತೆ ಅರ್ಹ ನಿವಾಸಿಗಳಿಗೆ ನಿಗದಿತ ಕಾಲಮಿತಿಯಲ್ಲಿ ಹಕ್ಕುಪತ್ರಗಳನ್ನು ವಿತರಿಸಲು ಕ್ರಮ ವಹಿಸಬೇಕೆಂದು ತಿಳಿಸಿದ್ದಾರೆ.