‘ತಹಶೀಲ್ದಾರ್’ ಹೆಸರಲ್ಲೂ ನಕಲಿ ಫೇಸ್ಬುಕ್ ಖಾತೆ ಹಣದ ಬೇಡಿಕೆ: ಸೈಬರ್ ಕ್ರೈಮ್‌ಗೆ ದೂರು

ಪುತ್ತೂರು, ಮೇ ೨೮- ಪುತ್ತೂರು ತಾಲೂಕು ಕಾರ್ಯ ನಿರ್ವಾಹಕ ದಂಡಾಧಿಕಾರಿಯವರೂ ಆಗಿರುವ ತಹಶೀಲ್ದಾರ್ ಟಿ. ರಮೇಶ್ ಬಾಬು ಅವರ ಹೆಸರಿನಲ್ಲಿ ನಕಲಿ ಫೇಸ್ಬುಕ್ ಖಾತೆ ತೆರೆದು ಹಣಕ್ಕೆ ಬೇಡಿಕೆ ನೀಡಿರುವ ಪ್ರಕರಣ ನಡೆದಿದ್ದು, ಈ ಕುರಿತು ಅವರು ಗುರುವಾರ ಮಂಗಳೂರು ಸೈಬರ್ ಕ್ರೈಮ್‌ಗೆ ದೂರು ನೀಡಿದ್ದಾರೆ.
ತಹಶೀಲ್ದಾರ್ ರಮೇಶ್ ಬಾಬು ಹೆಸರಿನಲ್ಲಿ ಇತ್ತೀಚೆಗೆ ಯಾರೋ ಫೇಸ್ಬುಕ್ ಖಾತೆ ತೆರೆದಿದ್ದು, ಹಲವರಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಲಾಗಿತ್ತು. ರಿಕ್ವೆಸ್ಟ್ ಒಪ್ಪಿದ ಗ್ರಾಮ ಕರಣಿಕರು, ಸಾಮಾಜಿಕ ಕಾರ್ಯಕರ್ತರು ಸಹಿತ ಹಲವರಿಗೆ ಇದೇ ಫೇಸ್ಬುಕ್ ಅಕೌಂಟಿನಿಂದ ಸಂದೇಶ ಕಳುಹಿಸಿ ತುರ್ತಾಗಿ ಹಣ ಬೇಕಿರುವುದರಿಂದ ತಕ್ಷಣ ಗೂಗಲ್ ಪೇ ಮಾಡುವಂತೆ ಕೇಳಲಾಗಿತ್ತು. ಈ ಮಾಹಿತಿ ಅರಿತ ತಹಶೀಲ್ದಾರರು ತನ್ನ ಹೆಸರಿನಲ್ಲಿ ಯಾರೋ ನಕಲಿ ಖಾತೆ ತೆರೆದು ಹಣಕ್ಕೆ ಬೇಡಿಕೆ ಇಟ್ಟಿರುವ ಕುರಿತು ದೂರು ನೀಡಿ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.