ತಹಶೀಲ್ದಾರ್, ಪೌರಾಯುಕ್ತರ ನೇತೃತ್ವ ಅಂಗಡಿ-ಮಳಿಗೆಗೆ ದಾಳಿ ಮಾಸ್ಕ್ ಧರಿಸದವರಿಗೆ ದಂಡ

ಪುತ್ತೂರು, ಎ.೨೩- ಕೋವಿಡ್ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವ ಉದ್ದೇಶದಿಂದ ಪುತ್ತೂರಿನಲ್ಲಿ ಅಧಿಕಾರಿಗಳ ತಂಡ ಅಂಗಡಿ, ಮಳಿಗೆಗಳಿಗೆ ದಾಳಿ ನಡೆಸಿ ದಂಡ ವಿಧಿಸುವ ಪ್ರಕ್ರಿಯೆ ಮುಂದುವರಿಸಿದ್ದಾರೆ. ಪುತ್ತೂರು ತಹಶೀಲ್ದಾರ್ ರಮೇಶ್ ಬಾಬು ಮತ್ತು ನಗರಸಭೆಯ ಅಧ್ಯಕ್ಷೆ ರೂಪಾ ಟಿ. ಶೆಟ್ಟಿ ನೇತೃತ್ವದಲ್ಲಿ ಗುರುವಾರ ಕಾರ್ಯಾಚರಣೆ ನಡೆಸಲಾಯಿತು.

ನಗರದ ದರ್ಬೆ, ಕೆಎಸ್‌ಆರ್‌ಟಿಸಿ ಬಸ್ಸು ನಿಲ್ದಾಣ, ಬೊಳುವಾರು ಮತ್ತಿತರ ಪ್ರದೇಶಗಳಲ್ಲಿ ರಮೇಶ್ ಬಾಬು ಮತ್ತು ರೂಪ ಶೆಟ್ಟಿ ನೇತೃತ್ವದಲ್ಲಿ ದಾಳಿ ನಡೆಸಲಾಗುತ್ತಿದ್ದು, ಮಾಸ್ಕ್ ಧರಿಸದವರಿಗೆ ಮತ್ತು ಸಾಮಾಜಿಕ ಅಂತರ ಪಾಲಿಸದವರಿಗೆ ದಂಡ ವಿಧಿಸಿ ಎಚ್ಚರಿಕೆ ನೀಡಲಾಗುತ್ತಿದೆ. ನಗರದಲ್ಲಿ ಗುರುವಾರ ಜನರ ಓಡಾಟ ಎಂದಿಗಿಂತ ಕಡಿಮೆಯಾಗಿತ್ತು. ಆದರೂ ಮಾಸ್ಕ್ ಧರಿಸದೆ ಓಡಾಟ ನಡೆಸುವವರಿಗೇನೂ ಕಡಿಮೆಯಿರಲಿಲ್ಲ.

ಅನಗತ್ಯ ಓಡಾಟ ಬೇಡ: ಎಸಿ

ಏ.೨೧ ರಿಂದ ರಾತ್ರಿ ಕರ್ಫ್ಯೂ ಮತ್ತು ೨೨ ರಿಂದ ವಾಣಿಜ್ಯ ಚಟುವಟಿಕೆಗಳಿಗೆ ನಿರ್ಬಂಧ ವಿಧಿಸಲಾಗಿದೆ. ಈ ಹಿನ್ನಲೆಯಲ್ಲಿ ಬಟ್ಟೆ ಮಳಿಗೆಗಳು, ಚಿನ್ನದ ಅಂಗಡಿಗಳು, ಮೊಬೈಲ್ ಅಂಗಡಿಗಳು, ಇನ್ನಿತರ ವ್ಯವಹಾರ ಮಳಿಗೆಗಳು ಸೇರಿದಂತೆ ಯಾರೂ ವ್ಯವಹಾರ ನಡೆಸಬಾರದು. ಜೀವನಾವಶ್ಯಕ ಪೂರೈಕೆಯ ಅಂಗಡಿಗಳು, ವೈದ್ಯಕೀಯ, ಕೃಷಿ ಮತ್ತು ಕೃಷಿ ಆಧಾರಿತ ಚಟುವಟಿಕೆ, ನಿರ್ಮಾಣ ಕಾಮಗಾರಿ ನಡೆಸಲು ಅನುಮತಿಯಿದೆ. ಆದರೆ, ಇಲ್ಲೂ ಸಾಮಾಜಿಕ ಅಂತರ ಕಾಪಾಡಬೇಕು. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆ, ನಗರಸಭೆ ಮತ್ತು ಸ್ಥಳೀಯಾಡಳಿತ ಸಹಕರಿಸುವಂತೆ ಸೂಚಿಸಿ ದ.ಕ. ಜಿಲ್ಲಾಧಿಕಾರಿಯವರು ಈಗಾಗಲೇ ಹೇಳಿಕೆ ನೀಡಿದ್ದಾರೆ. ಈ ನಿಯಮಾವಳಿಗಳನ್ನು ಪಾಲಿಸಲು ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಪುತ್ತೂರು ಉಪವಿಭಾಗಾಧಿಕಾರಿ ಡಾ. ಯತೀಶ್ ಉಳ್ಳಾಲ್ ವಿನಂತಿಸಿದ್ದಾರೆ

ಶನಿವಾರ ಮತ್ತು ಭಾನುವಾರ ಬಹಳಷ್ಟು ಮದುವೆಗಳು ನಿಗದಿಯಾಗಿವೆ. ಮದುವೆಯಲ್ಲಿ ಪಾಲ್ಗೊಳ್ಳುವವರಿಗೆ ಪಾಸ್ ವಿತರಣೆಯೇ ದೊಡ್ಡ ಸವಾಲಾಗಿದೆ. ಮದುವೆಗೆ ಅನುಮತಿ ನೀಡುವ ಪ್ರಾಧಿಕಾರಗಳಾದ ಪಿಡಿಓ, ನಗರಸಭೆ ಅಧಿಕಾರಿಗಳು ತಮ್ಮ ಮೊಬೈಲ್‌ನಲ್ಲಿ ಅತಿಥಿಗಳ ಪಟ್ಟಿ, ಆಹ್ವಾನ ಪತ್ರಿಕೆ ಫೋಟೋ ತೆಗೆದುಕೊಳ್ಳಬೇಕಿದೆ. ನಿಗದಿತ ಸಮಯದೊಳಗೆ ಮದುವೆ ಮುಗಿಸಿ ಮನೆಗಳಿಗೆ ತೆರಳಬೇಕು. ಇಲ್ಲಿ ಕೋವಿಡ್ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಅನಗತ್ಯ ಓಡಾಟ ನಡೆಸಬಾರದು. ಇತರರು ವಾರಂತ್ಯದಲ್ಲಿ ಮನೆಯಲ್ಲೇ ಇದ್ದುಕೊಂಡು ಅಗತ್ಯ ಪರಿಸ್ಥಿತಿಯಲ್ಲಷ್ಟೇ ಮನೆಯಿಂದ ಹೊರಬರಬಹುದಾಗಿದೆ ಎಂದು ಅವರು ತಿಳಿಸಿದರು.

ಉಪ್ಪಿನಂಗಡಿ ಮಾಸ್ಕ್ ರಹಿತ

ಉಪ್ಪಿನಂಗಡಿಯಲ್ಲಿ ಮಾಸ್ಕ್ ಧರಿಸದೆ ಓಡಾಡುವ ಮಂದಿಗಳು ಹಾಗೂ ಅಂಗಡಿ ಮಾಲಕರು ಯಾವುದೇ ಸಮಸ್ಯೆ ಇಲ್ಲದೆ ನಿರಾತಂಕವಾಗಿದ್ದಾರೆ. ಕೊರೊನಾ ಅಬ್ಬರ ಹೆಚ್ಚಾಗುತ್ತಿದ್ದರೂ ಉಪ್ಪಿನಂಗಡಿ ಪೇಟೆಯಲ್ಲಿ ಮಾತ್ರ ಯಾವುದೇ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸುತ್ತಿಲ್ಲ. ಮಾಸ್ಕ್ ಹಾಕದೆ ವ್ಯಾಪಾರ ಮಾಡುತ್ತಿರುವ ಅಂಗಡಿಗಳ ಮಾಲಕರು ಹಾಗೂ ಗ್ರಾಹಕರು ಕೊರೊನಾ ನಿಯಮಾವಳಿಗಳನ್ನು ಗಾಳಿಗೆ ತೂರಿದ್ದಾರೆ. ಹಾಗಿದ್ದರೂ ಇಲ್ಲಿ ಅಧಿಕಾರಿಗಳು ತಮ್ಮ ಜವಾಬ್ದಾರಿ ಮರೆತಿದ್ದಾರೆ ಎಂಬುವುದು ಈ ಭಾಗದ ಜನತೆಯ ಆರೋಪವಾಗಿದೆ.  ಕೆಲ ಅಂಗಡಿ ಮಾಲಕರೂ ಈ ಬಗ್ಗೆ ಆರೋಪಿಸುತ್ತಿದ್ದು, ಕನಿಷ್ಠ ಮಾಸ್ಕ್ ಧರಿಸುವುದಕ್ಕೂ ಇಲ್ಲಿ ಜನತೆ ಮುಂದಾಗುತ್ತಿಲ್ಲ. ಅಂಗಡಿ ಮಾಲಕರಿಗೂ ಈ ಬಗ್ಗೆ ನಿರ್ಲಕ್ಷ್ಯ. ಗ್ರಾಮೀಣ ಭಾಗದಲ್ಲಿ ಕೊರೊನಾ ಸ್ವಲ್ಪ ಮಟ್ಟಿಗೆ ಕಡಿಮೆ ಇದ್ದರೂ ಸರ್ಕಾರದ ನಿಮಯಗಳನ್ನು ಪಾಲಿಸುವುದು ಜನತೆಯ ಹಾಗೂ ಅಧಿಕಾರಿಗಳ ಕರ್ತವ್ಯ. ಹಾಗಿದ್ದರೂ ಅಧಿಕಾರಿಗಳ ಮೌನ ಯಾಕೆ ಎಂದು ಜನತೆ ಪ್ರಶ್ನಿಸುತ್ತಿದ್ದಾರೆ.