ತಹಶೀಲ್ದಾರ್, ಇಓರಿಂದ ಪ್ರತ್ಯೇಕ ಹಕ್ಕುಪತ್ರ – ಗೊಂದಲ ಪರಿಹಾರಕ್ಕೆ ಕ್ರಮ’ : ಶಾಸಕ ಕೆ.ಬಿ.ಅಶೋಕನಾಯ್ಕ್


ಶಿವಮೊಗ್ಗ, ಸೆ. 8: ‘ಕೆಲ ಹಳ್ಳಿಗಳಲ್ಲಿ ಒಂದೇ ನಿವೇಶನಕ್ಕೆ ತಹಶೀಲ್ದಾರ್ ಹಾಗೂ ತಾಲೂಕು ಪಂಚಾಯ್ತಿ ಕಾರ್ಯ ನಿರ್ವಹಣಾಧಿಕಾರಿಗಳು, ಪ್ರತ್ಯೇಕ ವ್ಯಕ್ತಿಗಳಿಗೆ ಹಕ್ಕುಪತ್ರ ವಿತರಣೆ ಮಾಡಿರುವ ಪ್ರಕರಣಗಳ ಪರಿಶೀಲನೆ ನಡೆಸಿ, ಕಾಲಮಿತಿಯಲ್ಲಿ ಗೊಂದಲ ನಿವಾರಣೆಗೆ ಕ್ರಮಕೈಗೊಳ್ಳಲಾಗುವುದು’ ಎಂದು ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಶಾಸಕ ಕೆ.ಬಿ.ಅಶೋಕನಾಯ್ಕ್ರವರು ತಿಳಿಸಿದ್ದಾರೆ.
ನಗರದ ತಾಲೂಕು ಪಂಚಾಯ್ತಿ ಕಚೇರಿ ಸಭಾಂಗಣದಲ್ಲಿ ಈ ಸ್ವತ್ತು ಹಾಗೂ ಸ್ವಚ್ಚ ಭಾರತ್ ಕುರಿತಂತೆ ಗ್ರಾಮ ಪಂಚಾಯ್ತಿ ಪಿಡಿಓ ಹಾಗೂ ತಾ.ಪಂ. ಹಿರಿಯ ಅಧಿಕಾರಿಗಳ ಜೊತೆ ಆಯೋಜಿಸಲಾಗಿದ್ದ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ಇದಕ್ಕೂ ಮೊದಲು ತಾ.ಪಂ. ಸದಸ್ಯ ಟಾಟಾ ಸ್ವಾಮಿರವರು ಮಾತನಾಡಿ, ‘ಬಸಾಪುರ ಮೊದಲಾದ ಗ್ರಾಮಗಳಲ್ಲಿ ಸುಮಾರು ಒಂದೂವರೆ, ಎರಡು ದಶಕಗಳ ಹಿಂದೆ ನಿವೇಶನಗಳಿಗೆ ನೀಡಲಾದ ಹಕ್ಕುಪತ್ರ ಸದ್ಯ ಗೊಂದಲ ಸೃಷ್ಟಿಸಿವೆ. ಒಂದೇ ನಿವೇಶನಕ್ಕೆ ತಹಶೀಲ್ದಾರ್ ಹಾಗೂ ಇಓರವರು ಪ್ರತ್ಯೇಕ ವ್ಯಕ್ತಿಗಳಿಗೆ ಹಕ್ಕುಪತ್ರ ನೀಡಿದ್ದಾರೆ.
ಕೆಲ ಪ್ರಕರಣಗಳಲ್ಲಿ ಇಂತಹ ನಿವೇಶನಗಳಲ್ಲಿ ಮತ್ತ್ಯಾರೋ ಮನೆ ಕಟ್ಟಿಕೊಂಡು ವಾಸಿಸುತ್ತಿದ್ದಾರೆ. ಬಹುತೇಕ ನೆರೆ ಸಂತ್ರಸ್ತರಿಗೆ ಈ ಹಕ್ಕುಪತ್ರ ನೀಡಲಾಗಿದೆ. ಈ ಗೊಂದಲ ಸರಿಪಡಿಸಿ, ಮನೆ ಕಟ್ಟಿಕೊಂಡು ವಾಸಿಸುತ್ತಿರುವವರಿಗೆ ನಿವೇಶನ ಒಡೆತನ ಹಕ್ಕು ನೀಡಬೇಕು’ ಎಂದು ಮನವಿ ಮಾಡಿದರು.
ಜಿಲ್ಲಾ ಪಂಚಾಯ್ತಿ ಸದಸ್ಯ ತಮ್ಮಡಿಹಳ್ಳಿ ನಾಗರಾಜ್ ಮಾತನಾಡಿ, ‘ಚೆನ್ನಳ್ಳಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಮನೆ ಕಟ್ಟಿಕೊಂಡು ಹಲವು ದಶಕಗಳಿಂದ ವಾಸಿಸುತ್ತಿರುವವರಿಗೆ ಇಲ್ಲಿಯವರೆಗೂ ಹಕ್ಕುಪತ್ರ ನೀಡಿಲ್ಲ. ಇವರಿಗೆ ಎಲ್ಲ ರೀತಿಯ ಮೂಲಸೌಕರ್ಯ ಕಲ್ಪಿಸಲಾಗಿದೆ. ಅರ್ಹ ನಿವಾಸಿಗಳಿಗೆ ವಾಸ ಸ್ಥಳದ ಹಕ್ಕುಪತ್ರ ನೀಡಬೇಕು’ ಎಂದು ಹೇಳಿದರು.
ತಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀಧರ್ರವರು ಮಾತನಾಡಿ, ‘ಅದೆಷ್ಟೊ ಗ್ರಾಮಸ್ಥರು ವಾಸಸ್ಥಳಕ್ಕೆ ನೀಡಲಾಗಿದ್ದ ಹಕ್ಕುಪತ್ರಗಳನ್ನೇ ನಾನಾ ಕಾರಣಗಳಿಂದ ಕಳೆದುಕೊಂಡಿದ್ದಾರೆ. ಇಂತಹವರಿಗೆ ಹೊಸದಾಗಿ ಹಕ್ಕುಪತ್ರ ನೀಡಲು ಅಗತ್ಯ ಕ್ರಮಕೈಗೊಳ್ಳಬೇಕಾಗಿದೆ’ ಎಂದು ತಿಳಿಸಿದರು.
ಇಓ ಡಾ.ಎಸ್.ಕಲ್ಲಪ್ಪರವರು ಮಾತನಾಡಿ, ‘ಕಳೆದ ಹಲವು ದಶಕಗಳ ಹಿಂದೆಯೇ ಖಾಸಗಿ ಜಾಗದಲ್ಲಿ ಮನೆ ನಿರ್ಮಿಸಿಕೊಂಡವರ ಮಾಹಿತಿ ಸಂಗ್ರಹಿಸಿ, ಅವರಿಗೆ ನಿಯಮಾನುಸಾರ ಹಕ್ಕುಪತ್ರ ನೀಡಿಕೆ ಬಗ್ಗೆ ಪರಿಶೀಲನೆ ನಡೆಸಲಾಗುವುದು. ಈ ಕುರಿತಂತೆ ಪಿಡಿಓಗಳಿಂದ ವರದಿ ಸಂಗ್ರಹಿಸಲಾಗುತ್ತಿದೆ’ ಎಂದರು.
ಚರ್ಚೆ: ಅಭಿಪ್ರಾಯ ಆಲಿಸಿದ ಕೆ.ಬಿ.ಅಶೋಕನಾಯ್ಕ್ರವರು ಮಾತನಾಡಿ, ‘ಎಲ್ಲ ಪಿಡಿಓಗಳ ಈ ಬಗ್ಗೆ ಕಾಲಮಿತಿಯಲ್ಲಿ ಇಓರವರಿಗೆ ವರದಿ ಸಲ್ಲಿಸಬೇಕು. ಈ ಸಂಬಂಧ ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ, ತಹಶೀಲ್ದಾರ್, ಇಓರವರ ಸಭೆ ನಡೆಸಲಾಗುವುದು. ಅರ್ಹರಿಗೆ ಹಕ್ಕುಪತ್ರ ವಿತರಣೆಗೆ ಕ್ರಮಕೈಗೊಳ್ಳಲಾಗುವುದು’ ಎಂದು ತಿಳಿಸಿದರು.
ಸಭೆಯಲ್ಲಿ ತಾಲೂಕು ಪಂಚಾಯ್ತಿ ಅಧ್ಯಕ್ಷೆ ಗೀತಾ ಜಯಶೇಖರ್, ಉಪಾಧ್ಯಕ್ಷೆ ನಿರ್ಮಲ ಮೋಹನ್ಕುಮಾರ್, ಜಿಲ್ಲಾ ಪಂಚಾಯ್ತಿ ಸದಸ್ಯೆ ಸೌಮ್ಯ ಭೋಜ್ಯನಾಯ್ಕ್, ಹೇಮಾವತಿ ಶಿವನಂಜಪ್ಪ, ತಾ.ಪಂ. ಸದಸ್ಯರಾದ ಹುಬ್ಬನಹಳ್ಳಿ ಮಹೇಶ್ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.