ತಹಶೀಲ್ದಾರ್‌ಗೆ ಸ್ವಾಗತ

ಕೋಲಾರ, ಏ. ೧- ಸಂಘ ಸಂಸ್ಥೆಗಳ ಮುಖೇನ ನೌಕರರು, ಹಿರಿಯರು ಜನಾಂಗದ ಅರ್ಹ ಫಲಾನುಭವಿಗಳಿಗೆ ಆಸರೆಯಾಗಬೇಕು. ಭವಿಷ್ಯದ ಉಜ್ವಲತೆಗೆ ಶಿಕ್ಷಣ ಸಾಧನವಾಗಿರುವಾಗ ಅವಕಾಶ ವಂಚಿತ ಹಾಗೂ ಮಾಹಿತಿ ಕೊರತೆ ಎದುರಿಸುತ್ತಿರುವ ವಿದ್ಯಾರ್ಥಿ ಸಂಕುಲಕ್ಕೆ ಮಾರ್ಗದರ್ಶಿಗಳಾಗಬೇಕು ಎಂದು ತಹಶೀಲ್ದಾರ್ ರವಿ ಅಭಿಪ್ರಾಯಪಟ್ಟರು.
ಇತ್ತೀಚೆಗೆ ಮುಳಬಾಗಿಲು ತಾಲ್ಲೂಕಿಗೆ ತಹಸೀಲ್ದಾರ್ ಆಗಿ ಆಗಮಿಸಿರುವ ಅವರನ್ನು ಭೋವಿ ಜನಾಂಗದ ಸರ್ಕಾರಿ ನೌಕರರ ಸಂಘ ಹಾಗೂ ಯುವ ವೇದಿಕೆಯ ಹಿರಿಯರು ನೀಡಿದ ಸ್ವಾಗತ ಸ್ವೀಕರಿಸಿ ಮಾತನಾಡಿದರು.
ತಾವು ಕಾರ್ಯನಿರ್ವಹಿಸಿದ ಕಡೆ ಎಲ್ಲರ ವಿಶ್ವಾಸ ಪಡೆದಿದ್ದು, ನೌಕರರ ಹಾಗೂ ಜನಾಂಗದವರ ಸಹಕಾರದಿಂದ ನನ್ನ ಕಾರ್ಯಕ್ಷೇತ್ರದ ಜವಾಬ್ದಾರಿ ಹೆಚ್ಚಾಗಿದೆ. ತಾಲ್ಲೂಕಿನಲ್ಲಿ ಜನಾಂಗದವರು ಬಹು ದಿನಗಳಿಂದ ಎದುರಿಸುತ್ತಿರುವ ಸಮಸ್ಯೆಗಳನ್ನು ಆದ್ಯತೆ ಮೇರೆಗೆ ಕಂದಾಯ ವ್ಯಾಪ್ತಿಯಲ್ಲಿ ಈಡೇರಿಸುವ ಭರವಸೆ ನೀಡಿದರು.
ವಿದ್ಯಾರ್ಥಿಗಳ ವಿಚಾರವಾಗಿ ಮಾತನಾಡಿ, ನಾವು ಅನುಭವಿಸಿದ ಕಷ್ಟ ಈಗಿರುವ ಮಕ್ಕಳಿಗೆ ಬೇಡ ಅವರೆಲ್ಲ ಶೈಕ್ಷಣಿಕ ಪ್ರಗತಿ ಸಾಧಿಸಿ ನನ್ನ ಹಾಗೆ ಉತ್ತಮ ಹುದ್ದೆಗಳನ್ನು ಪಡೆಯುವಂತಾಗಬೇಕು ಅದಕ್ಕಾಗಿ ಹಲವು ಪ್ರಯತ್ನಗಳ ಅಗತ್ಯತೆ ಇದೆ ನಾವೆಲ್ಲ ಸೇರಿ ಕ್ರಿಯಾಯೋಜನೆ ರೂಪಿಸೋಣ ಸಮಾಜ ಕಟ್ಟುವ ಕೆಲಸಕ್ಕೆ ನನ್ನ ಪೂರ್ಣ ಸಹಕಾರದ ಜೊತೆಗೆ ಇತರೆ ಇಲಾಖೆಗಳ ಅಧಿಕಾರಿಗಳಿಗೆ ಶಿಫಾರಸ್ಸು ಮಾಡುವ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.
ತಾಲ್ಲೂಕು ಭೋವಿ ನೌಕರರ ಸಂಘದ ಅಧ್ಯಕ್ಷ ನಾರಾಯಣಪ್ಪ ಮಾತನಾಡಿ, ನೌಕರರಿಂದ ಜನಾಂಗದಲ್ಲಿ ಸಮನ್ವಯತೆ ಇದೆ. ಬಡ ವಿದ್ಯಾರ್ಥಿಗಳ ಹಿತ ಚಿಂತನೆಗಳಿಗೆ ರೂಪಿಸಿರುವ ಕಾರ್ಯಗಳನ್ನು ವಿವರಿಸಿ ಒಬ್ಬ ಪ್ರಾಮಾಣಿಕ ಹಾಗೂ ವಿಶ್ವಾಸಾರ್ಹ ಅಧಿಕಾರಿ ತಾಲ್ಲೂಕಿನ ಉನ್ನತ ಹುದ್ದೆಯಲ್ಲಿರುವುದು ಜನಾಂಗದ ಹೆಮ್ಮೆ ಎಂದರು.