ತವರು ಜಿಲ್ಲೆಗೆ ಸಿಹಿ ಕೊಟ್ಟ ಬಜೆಟ್

ಸಂಜೆವಾಣಿ ನ್ಯೂಸ್
ಮೈಸೂರು: ಫೆ.17:- ಮುಖ್ಯಮಂತ್ರಿ ಸಿದ್ದರಾಮಯ್ಯನವರ 15ನೇ ಬಾರಿ ಬಜೆಟ್‍ನಲ್ಲಿ ಅನೇಕ ಹೊಸ ಯೋಜನೆ ಹಾಗೂ ಬಹು ದಿನದ ಬೇಡಿಕೆಯಾಗಿದ್ದ ಪಾರಂಪರಿಕ ಕಟ್ಟಡಕ್ಕೆ ಅನುದಾನ ನೀಡುವ ಮೂಲಕ ತವರು ಜಿಲ್ಲೆ ಮೈಸೂರಿಗೆ ಸಿಹಿ ಕೊಟ್ಟಿದ್ದಾರೆ.
ಒಟ್ಟಾರೆಯ ಈ ಬಜೆಟ್‍ನಲ್ಲಿ ಸಿಎಂ ತವರು ಕ್ಷೇತ್ರಕ್ಕೆ ಒಟ್ಟು 22ಕ್ಕೂ ಹೆಚ್ಚಿನ ಹೊಸ ಯೋಜನೆಗಳ ಮೂಲಕ 500ಕೋಟಿಗಿಂತಲೂ ಹೆಚ್ಚಿನ ಅನುದಾನವನ್ನು ನೀಡುವ ಮೂಲಕ ಮತ್ತೊಮ್ಮೆ ಮೈಸೂರು ಅಭಿವೃದ್ಧಿಯ ಮುನ್ನುಡಿ ಬರೆದಿದ್ದಾರೆ. ಪ್ರಮುಖವಾಗಿ ಮೈಸೂರಿನ ಶತಮಾನ ಪೂರೈಸಿ ಅವನತಿಯ ಹಾದಿ ತಲುಪಿರುವ ಲ್ಯಾನ್ಸ್ಡೌನ್ ಕಟ್ಟಡ ಹಾಗೂ ದೇವರಾಜ ಮಾರುಕಟ್ಟೆಗಳನ್ನು ಪಾರಂಪರಿಕ ಶೈಲಿಯಲ್ಲೇ ಉಳಿಸಿಕೊಂಡು ಅಭಿವೃದ್ಧಿ ಮಾಡುವುದಾಗಿ ಬಜೆಟ್‍ನಲ್ಲಿ ಘೋಷಿಸುವ ಮೂಲಕ ಅಭಿವೃದ್ಧಿಗೆ ಮುನ್ನುಡಿ ಬರೆದಿದ್ದಾರೆ. ಆದರೆ, ಯಾವುದೇ ಅನುದಾನ ಘೋಷಣೆ ಮಾಡದಿರುವುದು ಅಡ್ಡಗೋಡೆ ಮೇಲೆ ದೀಪವಿಟ್ಟಂತಿದೆ.
ಇನ್ನೂ ಚಾಮರಾಜ ಕ್ಷೇತ್ರದ ಶಾಸಕ ಕೆ.ಹರೀಶ್‍ಗೌಡ ಅವರ ಮನವಿಗೆ ಸ್ಪಂದಿಸಿ 100 ಹಾಸಿಗೆಯುಳ್ಳ ನೆಪೆÇ್ರೀಯುರಾಲಜಿ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸುವುದಕ್ಕೆ ಅನುಮೋದನೆ ನೀಡಿದ್ದಾರೆ. ಮೈಸೂರು ಮೆಡಿಕಲ್ ಕಾಲೇಜಿನ (ಎಂಎಂಸಿಆರ್‍ಐ) ಶತಮಾನೋತ್ಸವದ ನೆನಪಿಗಾಗಿ ಕೆ.ಆರ್. ಆಸ್ಪತ್ರೆ ಆವರಣದಲ್ಲಿ 75 ಕೋಟಿ ವೆಚ್ಚದಲ್ಲಿ ಹೊರ ರೋಗಿ ವಿಭಾಗದ ಕಟ್ಟಡ ನಿರ್ಮಾಣ. ಆಧುನಿಕ ಕ್ರಿಟಿಕಲ್ ಕೇರ್ ಬ್ಲಾಕ್ ಅನ್ನು ಮೈಸೂರಿನಲ್ಲಿ ಸ್ಥಾಪಿಸಲಾಗುವುದು. ಹ್ಯೂಮನ್ ಮಿಲ್ಕ್ ಬ್ಯಾಂಕ್ ಘಟಕವನ್ನು ಮೈಸೂರಿನಲ್ಲಿ ಸ್ಥಾಪನೆ, ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನ ಕಟ್ಟಡ ನಿರ್ಮಾಣೆಕ್ಕೆ 54 ಕೋಟಿ ಹಾಗೂ ಮಹಾರಾಣಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ಹಾಸ್ಟೆಲ್ ಕಟ್ಟಡ ನಿರ್ಮಾಣಕ್ಕೆ 116 ಕೋಟಿ, ನಗರದ ಹೊರವಲಯದಲ್ಲಿ ವಾಹನ ದಟ್ಟಣೆ ಕಡಿಮೆ ಮಾಡಲು ಎನ್.ಹೆಚ್.ಎ.ಐ ಸಹಯೋಗದೊಂದಿಗೆ ಮೇಲಸೇತುವೆ ನಿರ್ಮಾಣ, ಕುಕ್ಕರಹಳ್ಳಿ ಹಾಗೂ ಕೆ.ಆರ್.ಎಸ್. ರಸ್ತೆಯ ರೈಲ್ವೆಯ ಮೇಲು ಸೇತುವೆ ಹಾಗೂ ಕೆಳಸೇತುವೆ ನಿರ್ಮಾಣದ ಘೋಷಣೆ ಮಾಡಲಾಗಿದೆ.
ಬಂಡಿಪಾಳ್ಯ ಎ.ಪಿ.ಎಂ.ಸಿ. ಯಲ್ಲಿ ಶೀತಲಗೃಹವನ್ನು 40 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡುವುದು ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ಬಯೋ-ಸಿಎನ್‍ಜಿ ಪ್ಲೆಂಟ್ ಸ್ಥಾಪಿಸುವುದು. ನಗರಕ್ಕೆ ಪೆರಿಫೆರಲ್ ರಿಂಗ್ ರಸ್ತೆಯನ್ನು ಪಿಪಿಪಿ ಅಥವಾ ಟೌನ್ ಪ್ಲಾನಿಂಗ್ ಮಾದರಿಯಲ್ಲಿ ನಿರ್ಮಿಸಲು ಕಾರ್ಯಸಾಧ್ಯತಾ ವರದಿ ತಯಾರಿಸಲಾಗುವುದು. ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದ ರನ್-ವೇ ವಿಸ್ತರಣೆಗೆ 43 ಕೋಟಿ ಬಿಡುಗಡೆಗೊಳಿಸಿದೆ. ಮೈಸೂರಿನಲ್ಲಿ ವಿಜ್ಞಾನ ಕೇಂದ್ರ/ತಾರಾಲಯ ಹೊಸದಾಗಿ ಸ್ಥಾಪಿಸುವುದು. ಮೈಸೂರು ಸಮೀಪ ಇಂಟಿಗ್ರೇಟೆಡ್ ಟೌನ್‍ಶಿಫ್‍ಗಳನ್ನು ಅಭಿವೃದ್ಧಿಪಡಿಸುವ ಕುರಿತು ಘೋಷಣೆ ಮಾಡಲಾಗಿದೆ. ಹೀಗೆ ಸಿದ್ದರಾಮಯ್ಯನವರ ಸ್ವ ಜಿಲ್ಲೆಗೆ ಅನೇಕ ಕೊಡುಗೆಗಳನ್ನು ನೀಡುವ ಮೂಲಕ ಸಿಹಿಯಾದ ಬಜೆಟ್ ಇದಾಗಿದೆ.
ನಿರೀಕ್ಷೆಗಳಿಗೂ ಹಿನ್ನಡೆ
ಈ ಹಿಂದಿನ ಅವಧಿಯಲ್ಲಿ ಘೋಷಣೆಯಾಗಿರುವ ಉಂಡುವಾಡಿ ಕುಡಿಯುವ ನೀರಿನ ಯೋಜನೆ, ಚಾಮುಂಡಿ ಬೆಟ್ಟದ ಅಭಿವೃದ್ಧಿ ಪ್ರಾಧಿಕಾರಕ್ಕೆ ಯಾವುದೇ ಅನುದಾನ ಘೋಷಿಸಿಲ್ಲ. ಮಾತ್ರವಲ್ಲದೆ ಕೈಗಾರಿಕಾ ಪಟ್ಟಣ ಪ್ರಾಧಿಕಾರ, ಬೃಹತ್ ಮೈಸೂರು ಮಹಾನಗರ ಪಾಲಿಕೆ, ಪ್ರತ್ಯೇಕ ಜಲಮಂಡಳಿ ಸ್ಥಾಪನೆ, ಹೊಸ ತಾಲ್ಲೂಕುಗಳ ಅಭಿವೃದ್ಧಿಗೆ ಅನುದಾನ ಸೇರಿ ಸಾಕಷ್ಟು ನಿರೀಕ್ಷೆಗಳಿಗೆ ಹಿನ್ನಡೆಯಾಗಿದೆ.
ಅರ್ಥಪೂರ್ಣ ಎಲ್ಲರಿಗೂ ಸಲ್ಲುವ ಬಜೆಟ್:
ಸನ್ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿರುವ 2024-25ನೇ ಸಾಲಿನ ಆಯವ್ಯವು ಎಲ್ಲಾ ಕ್ಷೇತ್ರದ ಹಾಗೂ ಎಲ್ಲಾ ಜನರನ್ನು ಗಮನದಲ್ಲಿರಿಸಿಕೊಂಡು ಮಂಡಿಸಿರುತ್ತಾರೆ. ಇದೊಂದು ಅರ್ಥಪೂರ್ಣ ಬಜೆಟ್ ಹಾಗೂ ಎಲ್ಲರಿಗೂ ಸಲ್ಲುವಂತಹ ಬಜೆಟ್ ಆಗಿರುತ್ತದೆ. ಮೈಸೂರಿನ ಹಾಗೂ ಚಾಮರಾಜ ವಿಧಾನಸಭಾ ಕ್ಷೇತ್ರದ ಎಲ್ಲಾ ಜನರ ಪರವಾಗಿ ಸಿಎಂ ಅವರಿಗೆ ಧನ್ಯವಾದ ಸಲ್ಲಿಸುವುದಾಗಿ ಶಾಸಕ ಕೆ.ಹರೀಶ್‍ಗೌಡ ತಿಳಿಸಿದ್ದಾರೆ.
2024-25 ನೇ ಸಾಲಿನ ಆಯವ್ಯದಲ್ಲಿ ಮೈಸೂರು ನಗರಕ್ಕೆ ಹಾಗೂ ಚಾಮರಾಜ ವಿಧಾನಸಭಾ ಕ್ಷೇತ್ರಕ್ಕೆ ಘೋಷಣೆಯಾಗಿರುವ ಹೊಸ ಯೋಜನೆಗಳ ಪೈಕಿ ನೆಫೆÇ್ರೀ ಯುರಾಲಜಿ ಆಸ್ಪತ್ರೆಯ ಉನ್ನತಿಕರಣ, ಎಂ.ಎಂ.ಸಿ.ಆರ್.ಐ ಶತಮಾನೋತ್ಸವ ಆಚರಣೆ ಮಾಡುತ್ತಿರುವ ಈ ವರ್ಷದಲ್ಲಿ ಕೆಆರ್ ಆಸ್ಪತ್ರೆ ಆವರಣದಲ್ಲಿ ಹೊರರೋಗಿ ವಿಭಾಗದ ಕಟ್ಟಡ ನಿರ್ಮಾಣ, ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜು ಹಾಗೂ ಮಹಾರಾಣಿ ಕಾಲೇಜಿನ ಹಾಸ್ಟೆಲ್ ಕಟ್ಟಡದ ನಿರ್ಮಾಣ ಹಾಗೂ ಎಪಿಎಂಸಿಯಲ್ಲಿ ಶೀತಲ ಗೃಹ ನಿರ್ಮಾಣ ಮಾಡುವಂತೆ ಸನ್ಮಾನ್ಯ ಮುಖ್ಯಮಂತ್ರಿ ಅವರನ್ನು ಕೋರಿದರ ಮೇರೆಗೆ, ಮೇಲ್ಕಂಡ ಎಲ್ಲಾ ಯೋಜನೆಗಳನ್ನು ಈ ಆಯವ್ಯಯದಲ್ಲಿ ಘೋಷಣೆ ಮಾಡಿರುವುದಕ್ಕೆ ಮತ್ತೊಮ್ಮೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.
ಸಿಎಂ ತವರಲ್ಲಿ ಪೌರ ಕಾರ್ಮಿಕರ ಸಂಭ್ರಮ
ರಾಜ್ಯದ ಎಲ್ಲಾ ಹೊರಗುತ್ತಿಗೆ ಪೌರಕಾರ್ಮಿಕರನ್ನು ಖಾಯಂ ಮಾಡಿ ಬಜೆಟ್‍ನಲ್ಲಿ ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ಮೈಸೂರು ಮಹಾನಗರಪಾಲಿಕೆ ಮುಂಭಾಗ ಜಮಾವಣೆಗೊಂಡ ನೂರಾರು ಮಂದಿ ಪೌರ ಕಾರ್ಮಿಕರು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಭಾವಚಿತ್ರ ಹಿಡಿದು ಸಂಭ್ರಮಿಸಿ ಸಿಹಿ ವಿತರಿಸಿದರು.
ಸರ್ವ ಜನಾಂಗದ ಬಜೆಟ್:
ಸರ್ವಜನಾಂಗದ ಅಭಿವೃದ್ಧಿ ಪರ ಬಡ್ಜೆಟ್ ಎಂದೂ ಹೇಳಬಹುದೆಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಅಭಿಪ್ರಾಯ ಪಟ್ಟರು.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ವಿಜಯೇಂದ್ರಗೆ ಬಜೆಟ್ ಬಗ್ಗೆ ಎನಾದರೂ ತಿಳಿದಿದೆಯೇ?, ವಿಪಕ್ಷ ನಾಯಕ ಆರ್.ಅಶೋಕ್ ನಿಮಗೆ ಬಜೆಟ್ ಅರಿವಿಲ್ಲ. 33 ಪುಟದ ಬಜೆಟ್ ಬಗ್ಗೆ ತಿಳಿಯಿರಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಬೇಕು. ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಕೇವಲ 50 ನಿಮಿಷದಲ್ಲಿ ಮುಗಿಸಿದಂತೆ ಅಂದುಕೊಂಡಿದ್ದೀರಾ?, ಯಾರೋ ಸಿದ್ದತೆ ಮಾಡಿರುವ ಬಜೆಟ್ ಇದಲ್ಲ. ಸತಃ ಸಿದ್ದರಾಮಯ್ಯ ಅವರೇ ನಿಂತು ಪ್ರತೀ ಒಂದು ಪುಟಗಳನ್ನು ಕುರಿತು ಮಂಡಿಸಿದ್ದಾರೆಂದು ಕಿಡಿಕಾರಿದರು.
ಮೈಸೂರು ಭಾಗಕ್ಕೆ ಅನುದಾನ ನೀಡಿರುವ ಬಗ್ಗೆ ಹೇಳುವುದಾದರೆ, ಕೆ.ಆರ್.ಎಸ್ ಬೃಂದಾವನವನ್ನ ಡಿಸ್ನಿಲ್ಯಾಂಡ್ ಮಾದರಿ ರೂಪುಗೊಳಿಸಲು ಮುಂದಾಗಿದ್ದಾರೆ. ಕಾವೇರಿ ಜಲಾನಯನ ಪ್ರದೇಶದ ಅಭಿವೃದ್ಧಿಗೆ ವಿಶೇಷ ಅನುದಾನ ನೀಡಲು ಮುಂದಾಗಿದ್ದಾರೆ. ಮೈಸೂರು ಮಹಾರಾಣಿ ವಿಜ್ಞಾನ ಕಾಲೇಜಿನ ಅಭಿವೃದ್ಧಿಗೆ ಮುಂದಾಗಿದ್ದಾರೆ. ಇನ್ನು ಮಹಾನಗರ ಪಾಲಿಕೆ ವಿಚಾರಕ್ಕೆ ಬಂದರೆ ಮೂಲ ಸೌಕರ್ಯಕ್ಕೆ 250 ಕೋಟಿ ಅನುದಾನ ಸೇರಿ ಅನೇಕ ಅನುದಾನಗಳನ್ನು ನೀಡಿದ್ದಾರೆ ಎಂದು ಹೇಳಿದರು.
39ಕೋಟಿ ವೆಚ್ಚದಲ್ಲಿ ರಾಜ್ಯದ ಅನೇಕ ಜಿಲ್ಲೆಗೆ ವಿಶೇಷ ಅನುದಾನ ನೀಡಿದ್ದಾರೆ. ಗ್ರಾಮೀಣ ಭಾಗದ ಅನೇಕ ಹಳ್ಳಿಗಳ ಅಭಿವೃದ್ಧಿಗೆ ವಿಶೇಷ ಅನುದಾನ ನೀಡಲಾಗಿದೆ. ರಾಜ್ಯದಲ್ಲಿ ಮೊದಲ ಬಾರಿಗೆ ವಿದ್ಯಾರ್ಥಿಗಳು ಉತ್ತಮ ಸರ್ಟಿಫಿಕೇಟ್ ಪಡೆದಿದ್ದರೆ ಅವರಿಗೆ 2 ಪರ್ಸೆಂಟ್ ಮೀಸಲಾತಿ, ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ವ್ಯವಸ್ಥೆ ಮಾಡಿದ್ದಾರೆ. ಹೀಗೆ ಅನೇಕ ಯೋಜನೆಗಳನ್ನು ಮೈಸೂರು ಭಾಗಕ್ಕೆ ನೀಡಿರುವಾಗ ಬಜೆಟ್ ವಿಚಾರದಲ್ಲಿ ಹಗುರವಾಗಿ ಮಾತನಾಡುವುದು ತಪ್ಪು ಎಂದು ತಿಳಿಸಿದರು.
ಮಾಜಿ ಸಚಿವ ಅಶ್ವತ್ ನಾರಾಯಣ ಸಂಸದ ಪ್ರತಾಪಸಿಂಹ ಅವರನ್ನು ನಾಲ್ವಡಿಯವರಿಗೆ ಹೊಲಿಕೆ ಮಾಡಿರುವ ಕುರಿತು ಪ್ರತಿಕ್ರಯಿಸಿ, ನಾಲ್ವಡಿ ಕೃಷ್ಣರಾಜ ಒಡೆಯರ್ ಬಗ್ಗೆ ನಿಮಗೇನು ತಿಳಿದಿದೆ. ಅವರು ಕೊಟ್ಟ ಕೊಡುಗೆಗಳು ಮತ್ತು ಅಭಿವೃದ್ಧಿ ವಿಚಾರಗಳನ್ನು ಹೊಲಿಕೆ ಮಾಡುವುದು ಸರಿಯಲ್ಲ. ಬಿಜೆಪಿ ಅವರು ಸುಳ್ಳು ಹೇಳುವಲ್ಲಿ ನಿಸ್ಸೀಮರು ಅದೇ ರೀತಿ ಸುಳ್ಳೇ ನಿಮ್ಮ ಮನೆ ದೇವರು ಎಂಬುದು ನಿಮ್ಮ ಇಂತಹ ಹೇಳಿಕೆಗಳಿಂದ ಮತ್ತೆ ರುಜುವಾತಾಗಿದೆ ಎಂದು ಹೇಳಿದರು.