ತವರಿನಲ್ಲಿ ತಡ ರಾತ್ರಿ ವರೆಗೂ ಅದ್ಧೂರಿ ಸತ್ಕಾರ

ಭಾಲ್ಕಿ:ಮೇ.15: ಭಾಲ್ಕಿ ಕ್ಷೇತ್ರದ ಶಾಸಕರಾಗಿ ಸತತ ನಾಲ್ಕನೆಯ ಬಾರಿಗೆ ಅಭೂತಪೂರ್ವ ಗೆಲುವು ಸಾಧಿಸಿರುವ ಈಶ್ವರ ಖಂಡ್ರೆ ಅವರನ್ನು ತಾಲೂಕಿನಲ್ಲಿ ಭರ್ಜರಿಯಾಗಿ ಸ್ವಾಗತ ಕೋರಲಾಯಿತು.

ಪಟ್ಟಣ ಸೇರಿ ವಿವಿಧೆಡೆ ಶನಿವಾರ ತಡರಾತ್ರಿ ವರೆಗೂ ಕಾರ್ಯಕರ್ತರು, ಅಭಿಮಾನಿಗಳು ನಾಲ್ಕನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿರುವ ಈಶ್ವರ ಖಂಡ್ರೆ ಅವರನ್ನು ಸನ್ಮಾನಿಸಿ, ಪಟಾಕಿ ಸಿಡಿಸಿ, ಘೋಷಣೆ ಕೂಗಿ ಪ್ರೀತಿ, ಅಭಿಮಾನ ಮೆರೆದರು.

ಬೀದರ್‍ನ ಬಿ.ವಿ.ಭೂಮರಡ್ಡಿ ಕಾಲೇಜಿನಲ್ಲಿ ನಡೆದ ಮತ ಏಣಿಕೆ ಕೇಂದ್ರದಲ್ಲಿ ಮಧ್ಯಾಹ್ನದ ಹೊತ್ತಿಗೆ ಫಲಿತಾಂಶ ಖಚಿತವಾಗುತ್ತಲೇ ಕಾರ್ಯಕರ್ತರು, ಅಭಿಮಾನಿಗಳು ಖಂಡ್ರೆ ಅವರನ್ನು ಭೇಟಿಯಾಗಿ ಅಭಿನಂದಿಸಿದರು.

ಅಲ್ಲಿಂದ ಅವರು ಭಾಲ್ಕಿಗೆ ಬರುವುದು ಖಚಿತ ಮಾಹಿತಿ ಪಡೆದ ಕಾರ್ಯಕರ್ತರು, ಅಭಿಮಾನಿಗಳು ರಸ್ತೆ ಮಾರ್ಗದ ಅಲ್ಲಲ್ಲಿ ಖಂಡ್ರೆ ಅವರನ್ನು ಸತ್ಕರಿಸಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಗೆಲುವಿನೊಂದಿಗೆ ಖಂಡ್ರೆ ಕ್ಷೇತ್ರಕ್ಕೆ ಕಾಲಿಡುತ್ತಲೇ ಆರಾಧ್ಯದೈವ ಮೈಲಾರ ಮಲ್ಲಣ ದೇವರ ದರುಶನ ಪಡೆದರು. ನಂತರ ಸೇವಾನಗರ, ಧನ್ನೂರು(ಎಚ್), ಹಲಬರ್ಗಾ, ತೇಗಂಪೂರ್, ಕೋನಮೇಳಕುಂದಾ, ಕರಡ್ಯಾಳ, ತಳವಾಡ(ಕೆ), ಕದಲಾಬಾದ್, ಧಾರಜವಾಡಿ ಸೇರಿ ಮುಂತಾದ ಕಡೆಗಳಲ್ಲಿ ಸನ್ಮಾನ ಸ್ವೀಕರಿಸಿ ಭಾಲ್ಕಿ ಪಟ್ಟಣಕ್ಕೆ ತಡ ರಾತ್ರಿ 1 ಗಂಟೆಗೆ ಆಗಮಿಸಿದರು.

ಆದರೂ ಕೂಡ ಕಾರ್ಯಕರ್ತರು ಸಮಯವನ್ನು ಲೆಕ್ಕಿಸದೇ ತಮ್ಮ ನೆಚ್ಚಿನ ನಾಯಕನ ಸನ್ಮಾನಕ್ಕೆ ಕಾದು ನಿಂತಿದ್ದರು. ಶಿವಾಜಿ ವೃತ್ತ, ಸುಭಾಷ ಚೌಕ್, ಮಹಾತ್ಮ ಗಾಂಧಿ ವೃತ್ತ, ಅಂಬೇಡ್ಕರ್ ವೃತ್ತಗಳಲ್ಲಿ ಕಾರ್ಯಕರ್ತರು, ಅಭಿಮಾನಿಗಳು, ಮಹಿಳೆಯರು ನೆರೆದು ಶಾಸಕ ಖಂಡ್ರೆ ಅವರನ್ನು ಆರುತಿ ಬೆಳಗಿ, ಸನ್ಮಾನಿಸಿ ಅಭಿನಂದಿಸಿದರು.


ಹಿರೇಮಠ ಸಂಸ್ಥಾನದಲ್ಲಿ ಸತ್ಕಾರ

ತಡ ರಾತ್ರಿ 2 ಗಂಟೆ ಸುಮಾರಿಗೆ ಹಿರೇಮಠ ಸಂಸ್ಥಾನಕ್ಕೆ ಭೇಟಿ ನೀಡಿದ ಶಾಸಕ ಈಶ್ವರ ಖಂಡ್ರೆ ಅವರನ್ನು ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಸತ್ಕರಿಸಿ ಶುಭ ಕೋರಿದರು. ಈ ಸಂದರ್ಭದಲ್ಲಿ ಬಸವೇಶ್ವರ ಬ್ಯಾಂಕ್‍ನ ಅಧ್ಯಕ್ಷ ಶಶಿಧರ ಕೋಸಂಬೆ, ವಕೀಲ ನೀಲಕಂಠ ಬಿರಾದಾರ್, ಪ್ರಮುಖರಾದ ಟಿಂಕು ರಾಜಭವನ, ಧನರಾಜ ಬಂಬುಳಗೆ, ಬಾಬು ಬೆಲ್ದಾಳ, ರಮೇಶ ಪಟ್ನೆ, ಲೋಕೇಶ ಭೂರೆ, ಬಾಬು ಲಾಧಾ, ವೈಜಿನಾಥ ಪಂಚಾಳ ಸೇರಿದಂತೆ ಹಲವರು ಇದ್ದರು.