ತಳ ಸಮುದಾಯ ಜಾಗೃತಿಗೆ ಸಾಹಿತಿ ಜಾಣಗೆರೆ ಕರೆ

ಬೆಂಗಳೂರು, ಮಾ. ೧೬- ನಮ್ಮನ್ನು ಆಳುವ ಸರ್ಕಾರಗಳು ಸುಳ್ಳು ಅಂಕಿ ಅಂಶಗಳನ್ನು ನೀಡಿ ದೇಶದಲ್ಲಿ ಲಕ್ಷಾಂತರ ಜನ ಬಡತನ ರೇಖೆಗಿಂತ ಮೇಲೆತ್ತಿದ್ದೀವಿ ಎಂದು ಸುಳ್ಳು ಹೇಳುತ್ತಿವೆ. ಇಂತಹ ಹೊತ್ತಿನಲ್ಲಿ ತಳ ಸಮುದಾಯಗಳನ್ನು ಜಾಗೃತಗೊಳಿಸಬೇಕಿದೆ ಎಂದು ಹಿರಿಯ ಪತ್ರಕರ್ತ ಹಾಗೂ ಸಾಹಿತಿ ಜಾಣಗೆರೆ ವೆಂಕಟರಾಮಯ್ಯ ಹೇಳಿದರು.
ದಿವ್ಯ ಚೇತನ ಚಾರಿಟಬಲ್ ಟ್ರಸ್ಟ್ ಆಯೋಜಿಸಿದ್ದ ಟ್ರಸ್ಟ್ ನ ವಾರ್ಷಿಕೋತ್ಸವ ಹಾಗೂ ವಿವಿಧ ಸಾಧಕರಿಗೆ ಸಮಾಜಸೇವಾ ರತ್ನ ಪ್ರಶಸ್ತಿ ವಿತರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಪ್ರಶಸ್ತಿಗಳು ಇಂದು ಮೌಲ್ಯ ಕಳೆದುಕೊಂಡಿವೆ. ಅರ್ಜಿ ಕರೆದು, ಹಣ ಪಡೆದು ಪ್ರಶಸ್ತಿ ನೀಡುವ ಕೆಟ್ಟ ಪರಿಪಾಠ ಶುರುವಾಗಿದೆ. ಇದು ಸರಿಯಲ್ಲ. ಸಾಧಕರನ್ನು ನಾವು ಹುಡುಕಿ ಪ್ರೋತ್ಸಾಹಿಸಬೇಕು. ಆಗ ಪ್ರಶಸ್ತಿಗಳಿಗೆ ಮೌಲ್ಯ ಹೆಚ್ಚಾಗುತ್ತದೆ ಎಂದರು.
ನಮ್ಮ ನಡುವಿನ ಆದಿವಾಸಿಗಳಿಗೆ ಇಂದಿಗೂ ಬದುಕು ಹಕ್ಕುಗಳು ಸಿಗುತ್ತಿಲ್ಲ. ಇಂತಹ ಹೊತ್ತಿನಲ್ಲಿ ಸಂಘ ಸಂಸ್ಥೆಗಳು ಇಂತಹ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಅರಿವು ಮೂಡಿಸಬೇಕಿದೆ. ಇಂದು ಬರ ಕೂಡ ತಾಂಡವವಾಡುತ್ತಿದೆ. ಇಂದು ಎಲ್ಲವನ್ನೂ ವೈಜ್ಞಾನಿಕ ನೆಲೆಯಲ್ಲಿ ಯೋಚಿಸಲಾಗುತ್ತಿದೆ. ಅದರ ಪರಿಣಾಮವೇ ಬರ ಎದುರಾಗಿರುವುದು. ಆದರೆ ಇಂದು ನೈಸರ್ಗಿಕ ನೆಲೆಯಲ್ಲಿ ಕೂಡ ನಮ್ಮ ಯೋಚನೆ, ಯೋಜನೆಗಳು ಇರಬೇಕು. ಆಗ ಮಾತ್ರ ಮನುಷ್ಯನ ಬದುಕು ಸಾರ್ಥಕವಾಗಲು ಸಾಧ್ಯ ಎಂದು ಭಾಷಾಂತರ ಇಲಾಖೆ ನಿರ್ದೇಶಕ ವೆಂಕಟೇಶ್ ಹೇಳಿದರು.
ಶಿಡ್ಲೆಕೋಣ ವಾಲ್ಮೀಕಿ ಆಶ್ರಮದ ಶ್ರೀ ಸಂಜಯಕುಮಾರ ಸ್ವಾಮೀಜಿ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದರು ಉಡುಪಿ ಶನೇಶ್ವರ ಧರ್ಮದರ್ಶಿ ಅಶೋಕ್ ಶೆಟ್ಟರ್, ಹಿರಿಯ ವಕೀಲ ಸಣ್ಣ ನಾಯಕ್, ಟ್ರಸ್ಟ್ ಅಧ್ಯಕ್ಷ ರಾಮು, ಸಮಾಜ ಸೇವಕರಾದ ಕೆಂಚನೂರು ಶಂಕರ್, ಎಂ.ವಿ.ಶಂಕರಪ್ಪ, ನಿವೃತ್ತ ಅಧಿಕಾರಿ ಕೆಂಪರಾಮಯ್ಯ ಮತ್ತಿತರರು ಉಪಸ್ಥಿತರಿದ್ದರು.