ತಳವಾರ ಸಮಾಜಕ್ಕೆ ನೀಡಿದ ಭರವಸೆ ಸರಕಾರ ಈಡೇರಿಸಿದೆ : ಸಚಿವ ಕೋಟಾ ಶ್ರೀನಿವಾಸ ಪೂಜಾರಿ

ಅಥಣಿ:ನ.14: ಕೇಂದ್ರ ಸರ್ಕಾರದ ಸೂಚನೆ, ರಾಜ್ಯ ಸರ್ಕಾರ ನಿರ್ದೇಶನದಂತೆ ಯಾವುದೇ ಗೊಂದಲಗಳು ಇಲ್ಲದೆ ತಳವಾರ ಸಮುದಾಯಕ್ಕೆ ಎಸ್ಟಿ ಪ್ರಮಾಣ ಪತ್ರ ನೀಡಬೇಕು ಎಂದು ಆಯಾ ತಾಲೂಕಿನ ತಹಶೀಲ್ದಾರ್ ಸೂಚನೆ ನೀಡಿಲಾಗಿದೆ, ರಾಜ್ಯ ಸರಕಾರ ನೀಡಿದ ಭರವಸೆಯಂತೆ ತಳವಾರ ಸಮಾಜ ಬಂಧುಗಳಿಗೆ ಎಸ್.ಟಿ ಮೀಸಲಾತಿ ಸೌಲಭ್ಯ ಕಲ್ಪಿಸಿಕೊಟ್ಟಿದೆ ಎಂದು ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.
ಅವರು ಅಥಣಿ, ಕಾಗವಾಡ ತಾಲೂಕುಗಳ ತಳವಾರ ಸಮಾಜ ಬಾಂಧವರು ರವಿವಾರ ಅಥಣಿಯ ಕೃಷ್ಣಾ ರೈತ ಭವನದಲ್ಲಿ ಆಯೋಜಿಸಿದ್ದ ತಳವಾರ ಸಮಾಜಧ ಬೃಹತ್ ಸಮಾವೇಶ ಉದ್ಘಾಟಿಸಿ ಮಾತನಾಡುತ್ತಿದ್ದರು,
ಅವರು ಮುಂದೆ ಮಾತನಾಡುತ್ತಾ ಬಸವಕಲ್ಯಾಣ ಹಾಗೂ ಸಿಂದಗಿ ಉಪ ಚುನಾವಣೆಗಳಲ್ಲಿ ನಿರ್ಣಾಯಕ ಮತದಾರರಾಗಿದ್ದ ತಳವಾರ ಸಮಾಜ ಬಂಧುಗಳು ಅಂದಿನ ಮುಖ್ಯಮಂತ್ರಿ ಬಿಎಸ್.ವೈ ಹಾಗೂ ಇಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇವರಿಗೆ ಕಳೆದ 40 ವರ್ಷಗಳಿಂದ ಎಸ್.ಟಿ ಮೀಸಲಾತಿ ನೀಡಬೇಕು ಎಂದು ಹೋರಾಟ ಮಾಡಿಕೊಂಡು ಬಂದಿರುವ ನಮಗೆ ನಿಮ್ಮ ಅಧಿಕಾರವಧಿಯಲ್ಲಿ ಎಸ್.ಟಿ. ಮೀಸಲಾತಿ ನೀಡುವ ಭರವಸೆ ನೀಡಬೇಕು ಎಂದು ಪಟ್ಟು ಹಿಡಿದಿದ್ದರು ಎಂದ ಅವರು ಈ ಸಮಾಜದ ಬೇಡಿಕೆ ಈಡೇರಿಸುತ್ತೇವೆ ಎಂದು ನಮ್ಮ ನಾಯಕರಾದ ಬಿಎಸ್‍ವೈ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದರು ಎಂದರು.
ತಳವಾರ ಸಮಾಜದ ಸತತ ಪ್ರಯತ್ನದ ಫಲವಾಗಿಯೇ ಮುಖ್ಯಮಂತ್ರಿ ಎಸ್.ಟಿ ಮೀಸಲಾತಿಯನ್ನು ಶೇ.3 ರಿಂದ ಶೇ.7 ಕ್ಕೆ ಹೆಚ್ಚಿಸಿದರು ಮತ್ತು ತಳವಾರ ಸಮಾಜಕ್ಕೆ ಎಸ್.ಟಿ ಸೌಲಭ್ಯ ಕೊಟ್ಟರು ಎಂದ ಅವರು ಲಕ್ಷ್ಮಣ ಸವದಿಯವರ ಸತತ ಪ್ರಯತ್ನದ ಫಲವಾಗಿಯೇ ತಳವಾರ ಸಮಾಜಕ್ಕೆ ಈ ಮೀಸಲಾತಿ ದೊರಕಿದ್ದರಿಂದಲೇ ಮೊಟ್ಟ ಮೊದಲ ಬಾರಿಗೆ ಸಮಾಜ ಕಲ್ಯಾಣ ಸಚಿವನಾಗಿ ಅಥಣಿಗೆ ಆಗಮಿಸಿ ತಳವಾರ ಸಮಾಜದ ಸಮಾವೇಶದಲ್ಲಿ ಪಾಲ್ಗೊಂಡು ಸಾಂಕೇತಿಕವಾಗಿ 11 ಜನ ತಳವಾರ ಬಂಧುಗಳಿಗೆ ಜಾತಿ ಪ್ರಮಾಣ ಪತ್ರ ನೀಡಿದ್ದೇನೆ ಹಾಗೂ ಹಿಂದುಳಿದ ಸಮುದಾಯದ ಅಭಿವೃದ್ಧಿಗೆ ರಾಜಕೀಯ, ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಶಕ್ತಿ ಹೆಚ್ಚಾಗಲು ಈ ಮೀಸಲಾತಿ ತಳವಾರ ಸಮುದಾಯಕ್ಕೆ ಅನಕೂಲವಾಗಲಿದೆ ಎಂದರು.

ಸಮಾವೇಶದ ಅಧ್ಯಕ್ಷತೆ ವಹಿಸಿದ ಮಾಜಿ ಡಿಸಿಎಂ ಹಾಗೂ ವಿಧಾನ ಪರಿಷತ್ ಸದಸ್ಯ ಲಕ್ಷ್ಮಣ ಸವದಿ ಅವರು ಮಾತನಾಡಿ 40 ವರ್ಷಗಳ ತಳವಾರ ಸಮಾಜದ ಹೋರಾಟಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಇವರ ಪ್ರಬಲ ಇಚ್ಛಾ ಶಕ್ತಿಯೇ ಕಾರಣ ಎಂದರು. ಬಸವಕಲ್ಯಾಣ ಉಪ ಚುನಾವಣೆಯಲ್ಲಿ ಒಂದು ರಾಷ್ಟ್ರೀಯ ಪಕ್ಷದ ಅಭ್ಯರ್ಥಿಯಾಗಿ ತಳವಾರ ಸಮಾಜದ ಬಂಧು ಸ್ಪರ್ಧೆ ಮಾಡಿದ್ದರು , ಅಂದು ಚುನಾವಣೆಯ ಸಂದರ್ಭದಲ್ಲಿ ನನ್ನ ಮೇಲೆ ವಿಶ್ವಾಸ ಇಟ್ಟು ಬಿಜೆಪಿಗೆ ಮತ ಚಲಾಯಿಸಿ ಇದೇ ಸರಕಾರದ ಅವಧಿಯಲ್ಲಿ ತಳವಾರ ಸಮಾಜಕ್ಕೆ ಎಸ್.ಟಿ ಮೀಸಲಾತಿ ಸೌಲಭ್ಯ ಕಲ್ಪಿಸಿಕೊಡುತ್ತೇವೆ ಎಂದು ಸರಕಾರದ ಪರವಾಗಿ ನಾನು ಭರವಸೆ ನೀಡಿದ್ದೆ ಎಂದ ಅವರು ಅಂದಿನಿಂದಲೇ ನಾನು ತಳವಾರ ಸಮಾಜಕ್ಕೆ ಮೀಸಲಾತಿ ಸೌಲಭ್ಯ ಕೊಡಿಸುವ ನಿಟ್ಟಿನಲ್ಲಿ ಪ್ರಯತ್ನ ಪ್ರಾರಂಭಿಸಿದೆ ಇದರ ಪರಿಣಾಮ ಇಂದು ಅವರಿಗೆ ಈ ಮೀಸಲಾತಿ ಸೌಲಭ್ಯ ದೊರಕಿದೆ ಎಂದರು.
ನಾನು ಬಿಜೆಪಿಯ ರಾಜ್ಯ ಘಟಕದ ಉಪಾಧ್ಯಕ್ಷನಾದ ಸಂದರ್ಭದಲ್ಲಿ ಅಥಣಿಯ ತಳವಾರ ಸಮಾಜ ಬಂಧುಗಳು ಸತ್ಕರಿಸಲು ನನ್ನ ಮನೆಗೆ ಆಗಮಿಸಿದಾಗ ಅವರಿಂದ ಸತ್ಕಾರ ಸ್ವೀಕರಿಸದೇ ನಿಮ್ಮ ಸಮಾಜಕ್ಕೆ ಎಂದು ಎಸ್.ಟಿ ಮೀಸಲಾತಿ ಸೌಲಭ್ಯ ಸಿಗುತ್ತದೆಯೋ ಅಂದು ನಿಮ್ಮಿಂದ ಸತ್ಕಾರ ಸ್ವೀಕರಿಸುತ್ತೇನೆ ಎಂದು ಬಹಿರಂಗವಾಗಿಯೇ ಹೇಳಿದ್ದೆ. ಇಂದು ಆ ಸಮುದಾಯದ ಕನಸು ನನಸಾಗಿದ್ದು, ಅವರಿಗೆ ಪ್ರಮಾಣ ಪತ್ರ ವಿತರಿಸುವ ಸಮಾವೇಶದಲ್ಲಿಯೇ ತಳವಾರ ಬಂಧುಗಳಿಂದ ಸತ್ಕಾರ ಸ್ವೀಕರಿಸುದ್ದೇನೆ ಎಂದ ಅವರು ಇಡೀ ರಾಜ್ಯದಲ್ಲಿಯೇ ಇದೇ ಮೊದಲ ಬಾರಿಗೆ ಸಮಾಜ ಕಲ್ಯಾಣ ಸಚಿವರಿಂದ ಎಸ್.ಟಿ ಮೀಸಲಾತಿ ಪ್ರಮಾಣ ಪತ್ರ ವಿತರಿಸಲಾಗಿದೆ ಎಂದು ಹೇಳಿದರು.
ಸಮಾವೇಶದಲ್ಲಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯ ಲಕ್ಷ್ಮಣ ಸವದಿ ಇವರನ್ನು ತಳವಾರ ಬಂಧುಗಳು ಸತ್ಕರಿಸಿದರು ಮತ್ತು ತಳವಾರ ಬಂಧುಗಳಿಗೆ ಸಾಂಕೇತಿಕವಾಗಿ ಸಚಿವರು ಪ್ರಮಾಣ ಪತ್ರ ವಿತರಿಸಿದರು. ಸಾನಿಧ್ಯ ವಹಿಸಿದ್ದ ತೆಲಸಂಗ ವೀರಕ್ತ ಮಠದ ಶ್ರೀ ವೀರೇಶ ದೇವರು ಮಾತನಾಡಿದರು.
ಈ ಸಮಾವೇಶದಲ್ಲಿ ಸಾವಿರಾರು ಸಂಖ್ಯೆಯಲ್ಲಿ ತಳವಾರ ಸಮಾಜ ಬಂಧುಗಳು ಪಾಲ್ಗೊಂಡಿದ್ದರು.

ಮೀಸಲಾತಿ ಹೋರಾಟದಲ್ಲಿ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಅವರ ಪಾತ್ರ ಮಹತ್ವದ್ದಾಗಿದೆ, ನಾನು ಅವರು ಇನ್ನೂ ಉನ್ನತ ಸ್ಥಾನ ಅಲಂಕರಿಸಲಿ ಎಂಬ ನನ್ನ ಆಸೆಯಾಗಿದೆ, ಅವರಿಗೆ ನೀವೆಲ್ಲರೂ ಆಶೀರ್ವದಿಸಬೇಕು ಹಲವಾರು ವರ್ಷಗಳಿಂದ ತುಳಿತಕ್ಕೆ ಒಳಗಾಗಿದ್ದ ಸಮಾಜಕ್ಕೆ ಸಾಮಾಜಿಕ ನ್ಯಾಯ ಸಿಕ್ಕಾಗ ಅವರುಗಳ ತೋರುವ ಧನ್ಯತಾಭಾವ ನೋಡಿ ನನ್ನ ಹೃದಯ ತುಂಬಿ ಬಂದಿದೆ ತಳವಾರ ಸಮುದಾಯದ ಬಹುದಿನಗಳ ಬೇಡಿಕೆಯನ್ನು ಈಡೇರಿಸಲಾಗಿದೆ, ರಾಜಕೀಯ, ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಶಕ್ತಿ ಹೆಚ್ಚಾಗಲು ಈ ಮೀಸಲಾತಿ ತಳವಾರ ಸಮುದಾಯಕ್ಕೆ ಅನಕೂಲವಾಗಲಿದೆ
ಕೋಟಾ ಶ್ರೀನಿವಾಸ ಪೂಜಾರಿ
ಸಮಾಜ ಕಲ್ಯಾಣ ಸಚಿವರು