ತಳವಾರ-ಪರಿವಾರ ಎಸ್‍ಟಿ ಮೀಸಲು | ಸರ್ಕಾರದ ವಿರುದ್ಧ ಹೋರಾಟ ಚುರುಕು ಆ. 31ಕ್ಕೆ ಬುಡಕಟ್ಟು ವೇಷ ಧರಿಸಿ ಪ್ರತಿಭಟನೆ

ವಿಜಯಪುರ, ಆ.30-ತಳವಾರ ಮತ್ತು ಪರಿವಾರ ಎಸ್‍ಟಿ ಮೀಸಲಿಗೆ ಸಂಬಂಧಿಸಿದಂತೆ ಸರ್ಕಾರದ ವಿಳಂಬ ನೀತಿ ಖಂಡಿಸಿ ಆ. 31 ರಂದು ಸಮುದಾಯದ ಸಾವಿರಾರು ಜನ ಬುಡಕಟ್ಟು ವೇಷ ಧರಿಸಿ ಹೋರಾಟ ಹಮ್ಮಿಕೊಂಡಿದ್ದಾರೆ.
ಮೀಸಲಾತಿ ಸೇರ್ಪಡೆಗೆ ಸಂಬಂಧಿಸಿದಂತೆ ತಳವಾರ ಹಾಗೂ ಪರಿವಾರ ಸಮಾಜದಿಂದ ದಿನೇ ದಿನೇ ಹೋರಾಟ ಚುರುಕುಗೊಳ್ಳುತ್ತಿದ್ದು ಈಗಾಗಲೇ ರಕ್ತ ದಾನ ಉಚಿತ ಶಿಬಿರ, ಪತ್ರ ಚಳವಳಿ, ಪ್ರತಿಭಟನೆ ಸೇರಿದಂತೆ ಹಲವು ಹೋರಾಟಗಳನ್ನು ಹಮ್ಮಿಕೊಂಡಿರುವ ಎರಡೂ ಸಮುದಾಯದ ನಾಯಕರು ಇದೀಗ ಸಮುದಾಯದ ಸಾಂಪ್ರದಾಯಿಕ ಆಚರಣೆ ಮೂಲಕ ಸರ್ಕಾರದ ಗಮನ ಸೆಳೆಯುಲು ಮುಂದಾಗಿದ್ದಾರೆ.
ಈ ನಿಟ್ಟಿನಲ್ಲಿ ಕಳೆದ ಹದಿನೈದು ದಿನಗಳಿಂದ ಹಳ್ಳಿ ಹಳ್ಳಿಗಳಲ್ಲಿ ಜಾಗೃತಿ ಹಮ್ಮಿಕೊಂಡಿದ್ದು ಬೇವಿನ ಉಡುಗೆ, ದೊಣ್ಣೆ ಹಿಡಿದು ಹೋರಾಟದಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡುತ್ತಿದ್ದಾರೆ. ಆ ಕುರಿತ ವಿಡಿಯೋ ಸಹ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿಬಿಡಲಾಗುತ್ತಿದೆ.
ಹೋರಾಟಕ್ಕೆ ಸಂಬಂಸಿದಂತೆ ಸಮುದಾಯದ ಮುಖಂಡರಾದ ಮಾಜಿ ಶಾಸಕ ಶರಣಪ್ಪ ಸುಣಗಾರ ಹಾಗೂ ಶಿವಾಜಿ ಮೆಟಗಾರ ಅವರು ಪತ್ರಿಕಾ ಹೇಳಿಕೆ ನೀಡಿದ್ದು, ಕೇಂದ್ರ ಸರ್ಕಾರ ಈಗಾಗಲೇ ತಳವಾರ ಮತ್ತು ಪರಿವಾರ ಸಮುದಾಯವನ್ನು ಎಸ್‍ಟಿಗೆ ಸೇರ್ಪಡೆ ಮಾಡಲು ರಾಜ್ಯ ಪತ್ರ ಹೊರಡಿಸಿದೆ. ಆದರೆ, ರಾಜ್ಯ ಸರ್ಕಾರ ಅನವಶ್ಯಕ ಗೊಂದಲ ಸೃಷ್ಟಿಸುತ್ತಿದೆ. ರಾಜ್ಯದ ತಳವಾರ ಮತ್ತು ಪರಿವಾರ ಸಮುದಾಯವನ್ನು ಅಂಬಿಗ, ಕೋಳಿ, ಕಬ್ಬಲಿಗ ಮತ್ತು ಗಂಗಾಮತ ಸಮುದಾಯದ ಜತೆ ತಳಕು ಹಾಕಿ ಮೀಸಲಾತಿಯಿಂದ ವಂಚಿತಗೊಳ್ಳುವ ಹುನ್ನಾರ ನಡೆಸಿದೆ. ಇದರಲ್ಲಿ ಸಮಾಜ ಕಲ್ಯಾಣ ಇಲಾಖೆ ಸಚಿವರ ಪಾತ್ರ ಪ್ರಮುಖವಾಗಿದೆ. ಹೀಗಾಗಿ ಹೋರಾಟದ ಮೂಲಕ ಹಕ್ಕು ಪಡೆಯುವ ಅನಿವಾರ್ಯತೆ ಎದುರಾಗಿದೆ ಎಂದು ಜಂಟಿಯಾಗಿ ತಿಳಿಸಿದ್ದಾರೆ.
ತಳವಾರ ಮತ್ತು ಪರಿವಾರ ಎಂಬುದು ನಾಯಕ ಮತ್ತು ನಾಯಕಡ ಸಮುದಾಯದ ಪರ್ಯಾಯ ಪದ ಎಂದು ರಾಜ್ಯ ಪತ್ರದಲ್ಲಿ ಸ್ಪಷ್ಟವಾಗಿ ನಮೂದಿಸಲಾಗಿದೆ. ಆದರೆ, ರಾಜ್ಯ ಸರ್ಕಾರ ತಳವಾರ ಮತ್ತು ಪರಿವಾರ ಎಂಬುದು ಪ್ರತ್ಯೇಕ ಜಾತಿ ಎಂಬಂತೆ ಬಿಂಬಿಸುತ್ತಿದೆ. ರಾಜ್ಯದಲ್ಲಿ ತಳವಾರ ಎಂಬುದು ಒಂದೇ ಜಾತಿ. ಅದು ನಾಯಕ ಮತ್ತು ನಾಯಕಡ ಜಾತಿಯ ಮೂಲ ಎಂಬುವು ಕುಲಶಾಸ್ತ್ರೀಯ ಅಧ್ಯಯನ ಸಹ ಸ್ಪಷ್ಟವಾಗಿದೆ ಹೇಳಿದೆ. ಅದಾಗ್ಯೂ ಅನವಶ್ಯಕ ಗೊಂದಲ ಸೃಷ್ಟಿಸಿ ಮೀಸಲಾತಿಯಿಂದ ವಂಚಿತಗೊಳಿಸುತ್ತಿರುವುದು ತೀವ್ರ ಖಂಡನೀಯ. ಈ ನಿಟ್ಟಿನಲ್ಲಿ ಹಂತ ಹಂತವಾಗಿ ಹೋರಾಟ ರೂಪಿಸಲಾಗುತ್ತಿದ್ದು ಬರುವ ಅಧಿವೇಶನದ ಹೊತ್ತಿಗೆ ಹೋರಾಟ ರಾಜ್ಯವ್ಯಾಪಿ ವಿಸ್ತರಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಕಳೆದ ನಾಲ್ಕು ತಿಂಗಳಿಂದ ಸಮುದಾಯದವರು ಜಾತಿ ಪ್ರಮಾಣ ಪತ್ರಕ್ಕಾಗಿ ಕಚೇರಿಗೆ ಅಲೆದಾಡುತ್ತಿದ್ದಾರೆ. ಶಾಲೆ-ಕಾಲೇಜ್ ಪ್ರವೇಶ ಪ್ರಕ್ರಿಯೆ ಆರಂಭಗೊಂಡಿದ್ದು ಅಧಿಕಾರಿಗಳು ಸ್ಪಷ್ಟಿಕರಣ ನೆಪದಲ್ಲಿ ಪ್ರಮಾಣ ಪತ್ರ ತಡೆಹಿಡಿದಿದ್ದಾರೆ. ಇದರಿಂದ ಸಾಮಾನ್ಯ ವರ್ಗದಡಿ ಪ್ರವೇಶ ಪಡೆಯುವ ಅನಿವಾರ್ಯತೆ ಎದುರಾಗಿದೆ. ಹೀಗಾಗಿ ಉಗ್ರ ಹೋರಾಟಕ್ಕೆ ಅಣಿಯಾಗುವ ಅನಿವಾರ್ಯತೆ ಎದುರಾಗಿದೆ ಎಂದು ಸಮಾಜದ ಮುಖಂಡರುಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.