ತಳವಾರ್ ಸಮುದಾಯಕ್ಕೆ ಎಸ್‍ಟಿ ಪ್ರಮಾಣಪತ್ರ: ಮುಖ್ಯಮಂತ್ರಿ ಮೌನ ಮುರಿಯದಿದ್ದರೆ ಉಗ್ರ ಹೋರಾಟದ ಬೆದರಿಕೆ

ಕಲಬುರಗಿ.ಸೆ.20: ಈ ಹಿಂದೆ ಕೊಟ್ಟ ಮಾತಿಗೆ ತಪ್ಪಿದ ಸರ್ಕಾರದ ನೀತಿಯನ್ನು ಖಂಡಿಸಿ ಕರ್ನಾಟಕ ರಾಜ್ಯ ಕೋಲಿ, ಕಬ್ಬಲಿಗ ಎಸ್‍ಟಿ ಹೋರಾಟ ಸಮಿತಿ ಕಳೆದ 16ರಂದು ನಗರದ ಜಗತ್ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಅರೆಬೆತ್ತಲೆ ಮೆರವಣಿಗೆ ಮಾಡಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರೂ ಸಹ ಮುಖ್ಯಮಂತ್ರಿಗಳು ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ಪಾಲ್ಗೊಂಡು ಹೋದರೂ ಸಹ ಬೇಡಿಕೆಗಳ ಕುರಿತು ಮೌನವಹಿಸಿದ್ದಾರೆ. ಮುಖ್ಯಮಂತ್ರಿಗಳು ಮೌನ ಮುರಿಯದೇ ಇದ್ದಲ್ಲಿ ಉಗ್ರ ಹೋರಾಟವನ್ನು ಹಂತ, ಹಂತವಾಗಿ ರೂಪಿಸಲಾಗುವುದು ಎಂದು ಸಮಿತಿಯ ರಾಜ್ಯಾಧ್ಯಕ್ಷ ಲಚ್ಚಪ್ಪ ಎಸ್. ಜಮಾದಾರ್ ಅವರು ಇಲ್ಲಿ ಎಚ್ಚರಿಸಿದರು.
ಮಂಗಳವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿಗಳು ಮೌನ ವಹಿಸುವ ಮೂಲಕ ಸಮಾಜಕ್ಕೆ ಅನ್ಯಾಯ ಮಾಡಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.
ಜಿಲ್ಲೆಯ ಶಾಸಕರಾದ ದತ್ತಾತ್ರೇಯ್ ಸಿ. ಪಾಟೀಲ್ ರೇವೂರ್, ರಾಜಕುಮಾರ್ ಪಾಟೀಲ್ ತೆಲ್ಕೂರ್, ಡಾ. ಅವಿನಾಶ್ ಜಾಧವ್, ಸುಭಾಷ್ ಆರ್. ಗುತ್ತೇದಾರ್ ಹಾಗೂ ಸಂಸದ ಡಾ. ಉಮೇಶ್ ಜಾಧವ್ ಮುಂತಾದವರೆಲ್ಲರೂ ಕೋಲಿ ಸಮಾಜದ ಮತಗಳನ್ನು ಪಡೆದುಕೊಂಡು ಆಯ್ಕೆಯಾಗಿದ್ದಾಎ. ಆದ್ದರಿಂದ ಬೇಡಿಕೆಗಳ ಕುರಿತು ಮುಖ್ಯಮಂತ್ರಿಗಳಿಗೆ ಒತ್ತಾಯಿಸಿ ಸ್ಪಂದಿಸಬೇಕು ಎಂದು ಅವರು ಒತ್ತಾಯಿಸಿದರು.
ಅಧಿವೇಶನದ ಸದನದಲ್ಲಿಯೂ ಆಡಳಿತ ಪಕ್ಷದ ಶಾಸಕರು ಧ್ವನಿ ಎತ್ತಬೇಕು. ಇಲ್ಲದೇ ಹೋದಲ್ಲಿ ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಾಗುವುದು ಎಂದು ಅವರು ಎಚ್ಚರಿಸಿದರು. ಸುದ್ದಿಗೋಷ್ಠಿಯಲ್ಲಿ ಅಮೃತ್ ಡಿಗ್ಗಿ, ವಿಜಯಕುಮಾರ್ ಹದಗಲ್, ಬಸವರಾಜ್ ಚಿನ್ಮಳ್ಳಿ, ರಾಮಲಿಂಗ್ ಬಾನರ್, ಶರಣಪ್ಪ ನಾಟೀಕಾರ್, ರಮೇಶ್ ಹೊನ್ನಾಳ್, ನಾಗೇಂದ್ರ ನಿಂಗಮಪಳ್ಳಿ, ವೈಜನಾಥ್ ಜಮಾದಾರ್, ಅಂಬಾರಾಯ್ ಜವಳಗಿ ಮುಂತಾದವರು ಉಪಸ್ಥಿತರಿದ್ದರು.