ತಳವಾರ್ ಸಮಾಜಕ್ಕೆ ಹುಸಿಭರವಸೆ: ಸೆ. 17ರಂದು ಮುಖ್ಯಮಂತ್ರಿಗಳಿಗೆ ಕಪ್ಪು ಬಾವುಟದೊಂದಿಗೆ ಪ್ರತಿಭಟನೆ

ಕಲಬುರಗಿ,ಸೆ.13: ಭರವಸೆ ಹುಸಿಯಾಗಿದ್ದರಿಂದ ನಗರಕ್ಕೆ ಸೆಪ್ಟೆಂಬರ್ 17ರಂದು ಆಗಮಿಸಲಿರುವ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಕಪ್ಪು ಬಾವುಟ ತೋರಿಸಿ ಪ್ರತಿಭಟನೆ ಮಾಡಲಾಗುವುದು ಎಂದು ಕರ್ನಾಟಕ ರಾಜ್ಯ ತಳವಾರ್ ಎಸ್.ಟಿ. ಹೋರಾಟ ಸಮಿತಿಯ ರಾಜ್ಯಾಧ್ಯಕ್ಷ ಡಾ. ಸರ್ದಾರ್ ರಾಯಪ್ಪ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಬಿಜೆಪಿ ಸರ್ಕಾರವು ಕೋಲಿ ಸಮಾಜದ ಪರ್ಯಾಯ ಪದಗಳನ್ನು ಎಸ್‍ಟಿಗೆ ಸೇರಿಸುವುದಾಗಿ ಪದೇ ಪದೇ ಹುಸಿ ಭರವಸೆಗಳನ್ನು ನೀಡುತ್ತ ಬಂದಿದೆ. ಅದಕ್ಕಾಗಿ ಇಂತಹ ಹೋರಾಟ ರೂಪಿಸಲಾಗಿದೆ ಎಂದರು.
ಚುನಾವಣೆಯ ಸಂದರ್ಭದಲ್ಲಿ ಪದೇ ಪದೇ ಕೋಲಿ ಕಬ್ಬಲಿಗ ಮತ್ತು ತಳವಾರ್ ಸಮಾಜಗಳಿಗೆ ಎಸ್‍ಟಿ ಮಾಡುತ್ತೇವೆ ಎಂದು ಹೇಳಿಕೆ ನೀಡಿದ್ದು, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಸಂಸದ ಡಾ. ಉಮೇಶ್ ಜಾಧವ್ ಸೇರಿದಂತೆ ಬಿಜೆಪಿ ನಾಯಕರು ನೀಡಿದ ಭರವಸೆ ಹುಸಿಹಾಗಿದ್ದು, ಸಮಾಜಕ್ಕೆ ಸುಳ್ಳು ಹೇಳಿ ಮೋಸ ಮಾಡಲಾಗುತ್ತಿದೆ ಎಂದು ಅವರು ಆರೋಪಿಸಿದರು.
ಚಿಂಚೋಳಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಸಮಾಜಕ್ಕೆ ಮೋಸ ಮಾಡಿ ಮತ ಪಡೆದ ಬಿಜೆಪಿ, ಲೋಕಸಭಾ ಚುನಾವಣೆಯಲ್ಲಿಯೂ ಸಹ ಅದೇ ಸುಳ್ಳು ಭರವಸೆ ನೀಡಲಾಗಿದೆ. ಕೆಲವೇ ಹೊತ್ತಿನಲ್ಲಿ ಎಸ್‍ಟಿ ಪ್ರಮಾಣಪತ್ರ ನೀಡುವುದಾಗಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹಾಗೂ ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ್ ಅವರೂ ಸಹ ಹೇಳಿಕೆ ನೀಡಿದ್ದು ಸುಳ್ಳಾಗಿದೆ. ಚುನಾವಣೆಯಲ್ಲಿ ಗೆದ್ದ ನಂತರ ಬಿಜೆಪಿ ನಾಯಕರು ಬಾಯಿ ಮುಚ್ಚಿಕೊಂಡಿದ್ದಾರೆ ಎಂದು ಕಿಡಿಕಾರಿದ ಅವರು, ಮುಖ್ಯಮಂತ್ರಿಗಳು ಕೊಟ್ಟ ಭರವಸೆಯನ್ನು ಉಳಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಗಿರೀಶ್ ತುಂಬಗಿ, ಬಾಪುಗೌಡ, ಸಂತೋಷ್ ಎಸ್. ತಳವಾರ್, ಅಶೋಕ್ ಕಂಕಿ, ಸಾಯಬಣ್ಣ ಎಸ್. ತಳವಾರ್, ಪ್ರೇಮ್ ಕೋಳಿ ಮುಂತಾದವರು ಉಪಸ್ಥಿತರಿದ್ದರು.