ತಲ್ಲೂರು,ಶೇಷಿರಾವಗೆ ಪ್ರಶಸ್ತಿಪ್ರದಾನ ಜನವರಿಯಲ್ಲಿ ಕಲಾಗ್ರಾಮಕ್ಕೆ ಚಾಲನೆ:ಡಿ.ಮಹೇಂದ್ರ

ಕಲಬುರಗಿ ಡಿ 18:ಕರ್ನಾಟಕ ಲಲಿತಕಲಾ ಅಕಾಡೆಮಿಯಿಂದ ಬರುವ ಜನವರಿಯಲ್ಲಿ ಬೆಂಗಳೂರಿನಲ್ಲಿ ಕಲಾಗ್ರಾಮಕ್ಕೆ ಚಾಲನೆ ನೀಡಲಾಗುವದು ಎಂದು ಅಕಾಡೆಮಿ ಅಧ್ಯಕ್ಷ ಡಿ .ಮಹೇಂದ್ರ ಹೇಳಿದರು.
ಅವರಿಂದು ನಗರದಲ್ಲಿ ದಿ ಐಡಿಯಲ್ ಫೈನ್ ಆರ್ಟ ಸೊಸೈಟಿಯು ಎಂಎಂಕೆ ದೃಶ್ಯಕಲಾ ಮಹಾವಿದ್ಯಾಲಯದಲ್ಲಿ ಏರ್ಪಡಿಸಿದ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.ಮಾರ್ಚನಲ್ಲಿ 3.60 ಕೋಟಿ ರೂ ವೆಚ್ಚದಲ್ಲಿ ಗ್ರಾಫಿಕ್ ಸ್ಟುಡಿಯೋ ತಲೆ ಎತ್ತಲಿದೆ.ಫೆಬ್ರವರಿಯಲ್ಲಿ 10 ದಿನಗಳ ಕಲಾಮಹೋತ್ಸವ ಹಮ್ಮಿಕೊಳ್ಳಲಾಗುವದು ಎಂದರು.ಕಲಬುರಗಿಯ ಕಲಾವಿದರ ಕಲರವ ಅಂತರ್ ರಾಷ್ಟ್ರೀಯ ಮಟ್ಟಕ್ಕೇರಿದ್ದು ಈ ನಾಡಿನ ಸೌಭಾಗ್ಯ.ಪ್ರತಿಭೆಗಳನ್ನು ಗುರುತಿಸಿ ಗೌರವಿಸುವದು ನಮ್ಮ ಸಂಪ್ರದಾಯ ಎಂದರು.
ಪ್ರಶಸ್ತಿ ಪ್ರದಾನ:
ಖ್ಯಾತ ಕಲಾವಿದ ತಲ್ಲೂರು ಎಲ್ .ಎನ್ ಅವರಿಗೆ ಈ ಸಾಲಿನ ದೃಶ್ಯಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಹೆಸರಾಂತ ಕಲಾವಿದ ಶೇಷಿರಾವ ಬಿರಾದಾರರಿಗೆ ಈ ಸಾಲಿನ ದಿ.ಕಲಾವಿದ ಎಂ.ಬಿ ಪಾಟೀಲ ಸ್ಮರಣಾರ್ಥ ಪ್ರಶಸ್ತಿ ಪ್ರದಾನ ಮಾಡಲಾಯಿತು.ಪಿಎಚ್ ಡಿ ಪದವಿ ಪಡೆದ ದಿ ಐಡಿಯಲ್ ಫೈನ್ ಆರ್ಟ ಸಂಸ್ಥೆ ಉಪನ್ಯಾಸಕ ಹನುಮಂತರಾವ ಮಂತಟ್ಟಿ ಅವರನ್ನು ಸನ್ಮಾನಿಸಲಾಯಿತು.
ದೂರದೃಷ್ಠಿಯ ಮನುಷ್ಯ:
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಕಲಾವಿದ ತಲ್ಲೂರು ಎಲ್ .ಎನ್ ಅವರು ಕಾರ್ಯಕ್ರಮ ಸಂಘಟಿಸಿದ ಖ್ಯಾತ ಕಲಾವಿದ ಡಾ. ವಿ.ಜಿ ಅಂದಾನಿಯವರನ್ನು ದೂರದೃಷ್ಠಿಯ ಮನುಷ್ಯ ಎಂದು ಬಣ್ಣಿಸಿದರು.
ವರ್ಣ ಕಿರಣ ಧರ್ಮಗಿರಿ ಸ್ವಾಗತಗೀತೆ ಹಾಡಿದರು. ಚಂದ್ರಹಾಸ ಜಾಲಿಹಾಳ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಹಿರಿಯ ಮತ್ತು ಯುವ ಕಲಾವಿದರು,ಕಲಾಭಿಮಾನಿಗಳು ,ಕಾಲೇಜು ಪ್ರಾಚಾರ್ಯ ರಾಜಶೇಖರ್ ಎಸ್, ಸಂಚಾಲಕ ಗೌತಮ ಅಂದಾನಿ ಸೇರಿದಂತೆ ಸಂಸ್ಥೆಯ ಸದಸ್ಯರು, ಉಪನ್ಯಾಸಕರು ,ವಿದ್ಯಾರ್ಥಿಗಳು ಭಾಗವಹಿಸಿದರು.