ತಲೆ ತೆಗೆಯಿರಿ ಎಂದವರು ಅಂದರ್

ಯಾದಗಿರಿ,ಆ೯:ಕೋಮು ಭಾವನೆಗೆ ಧಕ್ಕೆ ತರುವ ರೀಲ್ಸ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟ ಹಿನ್ನೆಲೆಯಲ್ಲಿ ಕಿರಾತಕ ಯುವಕರಿಬ್ಬರ ಕೇಸ್ ದಾಖಲಿಸಿ ಯಾದಗಿರಿ ಪೊಲೀಸರು ಬಂಧಿಸಿದ್ದಾರೆ.ಪ್ರವಾದಿ ಮೊಹಮ್ಮದ್ ಪೈಗಂಬರ್ ಬಗ್ಗೆ ಅವಹೇಳನ ಮಾಡಿದವರ ತಲೆ ತೆಗೆಯಿರಿ ಎಂದು ಯುವಕರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದರು. ಈ ಬಗ್ಗೆ ಮಾಡಿರುವ ರೀಲ್ಸ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಹೀಗಾಗಿ ಯಾದಗಿರಿ ನಗರದ ಅಕ್ಬರ್ ಸೈಯದ್ ಬಹದ್ದೂರ್ (೨೩) ಹಾಗೂ ಎಂಡಿ ಅಯಾಜ್‌ನನ್ನು (೨೧) ಪೊಲೀಸರು ಬಂಧಿಸಿದ್ದಾರೆ.ನೀರಜ್ ಅತ್ರಿ ಎಂಬವರು ಈ ಯುವಕರು ಮಾಡಿದ ರೀಲ್ಸ್ ಅನ್ನು ಪ್ರಧಾನ ಮಂತ್ರಿಗಳಿಗೆ ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದರು. ಅಷ್ಟೇ ಅಲ್ಲದೇ ಹಲವು ಮಂದಿ ಕರ್ನಾಟಕ ಡಿಜಿಪಿ ಖಾತೆಗೆ ಟ್ಯಾಗ್ ಮಾಡಿ ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದರು. ಇದಾದ ಬಳಿಕ ಇಬ್ಬರು ಯುವಕರ ವಿರುದ್ಧ ಯಾದಗಿರಿ ಗ್ರಾಮೀಣ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ನಾವು ಅಹ್ಲೇ ಸುನ್ನತ್ ಜಮಾತ್‌ನವರಾಗಿದ್ದೇವೆ. ನಮಗೆ ಬಾಲ್ಯದಿಂದ ಇದನ್ನೇ ಕಲಿಸಿಕೊಡಲಾಗಿದೆ ಎಂದಿರುವ ಯುವಕರು, ಜೀವನದಲ್ಲಿ ಎಲ್ಲಾ ಕಷ್ಟವನ್ನು ಎದುರಿಸಿ. ಆದರೆ ಪೈಗಂಬರ್ ಅವರ ಬಗ್ಗೆ ಅವಹೇಳನ ಮಾಡಿದರೆ ಅಂತಹವರ ದೇಹದಿಂದ ರುಂಡವನ್ನು ಬೇರ್ಪಡಿಸಿ ಎಂದು ರೀಲ್ಸ್‌ನಲ್ಲಿ ಹೇಳಿದ್ದಾರೆ.
ಮುಸಲ್ಮಾನರ ಮೇಲೆ ದೌರ್ಜನ್ಯ ಎಸಗುವವರೇ, ಯುವತಿರನ್ನು ಬುಟ್ಟಿಗೆ ಹಾಕಿಕೊಂಡು ಗಂಡಸು ಎಂದುಕೊಳ್ಳುವವರೇ, ಮುಸ್ಲಿಮರನ್ನೇ ಟಾರ್ಗೆಟ್ ಮಾಡುವವರೇ ನೀವು ಗಂಡಸರೇ ಆಗಿದರೆ ೧೫ ನಿಮಿಷ ಮೈದಾನಕ್ಕೆ ಬನ್ನಿ ಎಂದು ಸವಾಲು ಹಾಕಿದ್ದಾರೆ. ಎಷ್ಟು ಹಾರಾಡ್ತೀರಾ ಹಾರಾಡಿ, ಈ ಜಗತ್ತಿನಲ್ಲಿ ಕುರಾನ್ ಬಹಳ ಸ್ಪಷ್ಟವಾಗಿ ಹೇಳುತ್ತಿದೆ, ಕಾಫಿರ್ (ಹಿಂದು) ಕೊನೆಗೆ ನಿಮ್ಮ ಸ್ಥಾನ ನರಕ ಎಂದು ಯುವಕರು ರೀಲ್‌ನಲ್ಲಿ ಹೇಳಿರುವುದು ಕಂಡುಬಂದಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಯಾದಗಿರಿ ಎಸ್‌ಪಿ ಡಾ.ಸಿಬಿ ವೇದಮೂರ್ತಿ ಕೋಮು ಸಾಮರಸ್ಯಕ್ಕೆ ಧಕ್ಕೆ ತರುವ ವೀಡಿಯೊ ಸಂದೇಶಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ ಯುವಕರಿಬ್ಬರನ್ನು ಬಂಧಿಸಲಾಗಿದೆ. ಈ ಬಗ್ಗೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಯಾರೂ ಕೋಮು ಭಾವನೆಗೆ ಧಕ್ಕೆ ತರುವ ವಿಡಿಯೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.