ತಲೆಸುತ್ತಿಗೆ ಮನೆಮದ್ದು

ಕೆಲವೊಮ್ಮೆ ಸರಿಯಾದ ಹೊತ್ತಿಗೆ ಆಹಾರ ತೆಗೆದುಕೊಳ್ಳದಿದ್ದರೆ, ದೇಹದಲ್ಲಿ ನೀರಿನಂಶ ಕಡಿಮೆಯಾದಾಗ ತಲೆಸುತ್ತು ಕಡಿಮೆಯಾಗುವುದು, ಈ ರೀತಿ ಸಮಸ್ಯೆ ಉಂಟಾದಾಗ ಯಾವುದೇ ಔಷಧಿ ಬೇಕಾಗಿಲ್ಲ, ಚೆನ್ನಾಗಿ ತಿಂದು, ನೀರು ಕುಡಿದರೆ ಸಾಕು ಈ ಸಮಸ್ಯೆ ಇಲ್ಲವಾಗುವುದು.ಆರೋಗ್ಯ ಸಮಸ್ಯೆಯಿಲ್ಲದೆ ಒತ್ತಡ ಹಾಗೂ ದೇಹ ಬಳಲಿಕೆಯಿಂದಾಗಿ ತಲೆಸುತ್ತು ಸಮಸ್ಯೆ ಬರುತ್ತಿದ್ದರೆ ಈ ಮನೆಮದ್ದು ಪ್ರಯತ್ನಿಸಬಹುದು.

ಆಹಾರ ಸೇವಿಸಿದಾಗ ರಕ್ತದೊತ್ತಡ ಕಡಿಮೆಯಾಗುವುದು, ಇದರಿಂದ ಕೂಡ ತಲೆಸುತ್ತು ಬಂದಂತೆ ಅನಿಸಬಹುದು. ಈ ರೀತಿಯ ಸಮಸ್ಯೆಯನ್ನು ಪೋಸ್ಟ್‌ಪ್ರಾಂಡಿಯಲ್ ಹೈಪೋಟೆನ್ಷನ್ ಎಂದು ಕರೆಯುತ್ತಾರೆ. ಊಟಕ್ಕೆ 15 ನಿಮಿಷ ಮುಂಚೆ ನೀರು ಕುಡಿಯುವುದರಿಂದ ಈ ಸಮಸ್ಯೆ ಇಲ್ಲವಾಗಿಸಬಹುದು.

ತುಂಬಾ ಹೊತ್ತು ಬಿಸಿ ನೀರಿನಲ್ಲಿ ಸ್ನಾನ ಮಾಡಬೇಡಿ
ಬಿಸಿ ನೀರಿನಲ್ಲಿ ಸ್ನಾನ ಮಾಡಲು ತುಂಬಾ ಹಿತ ಅನಿಸಿದರೂ, ತುಂಬಾ ಹೊತ್ತು ಬಿಸಿ ನೀರಿನ ಸ್ನಾನ ಮಾಡುವುದು ಒಳ್ಳೆಯದಲ್ಲ. ಏಕೆಂದರೆ ತುಂಬಾ ಹೊತ್ತು ಬಿಸಿ ನೀರಿನಲ್ಲಿ ಸ್ನಾನ ಮಾಡುವುದರಿಂದ ರಕ್ತನಾಳಗಳು ಹಿಗ್ಗಿ, ರಕ್ತದೊತ್ತಡ ಕಡಿಮೆಯಾಗುವುದು, ಇದರಿಂದ ತಲೆಸುತ್ತು ಉಂಟಾಗುವ ಸಾಧ್ಯತೆ ಇದೆ. ಆದ್ದರಿಂದ ಬಿಸಿ ನೀರಿನ ಸ್ನಾನವನ್ನು 10 ನಿಮಿಷಕ್ಕೆ ಸೀಮಿತಗೊಳಿಸಿ, ಇನ್ನು ತುಂಬಾ ಬಿಸಿ ನೀರು ಮೈಗೆ ಹಾಕಿಕೊಳ್ಳುವ ಬದಲಿಗೆ ಉಗುರು ಬೆಚ್ಚಗಿನ ನೀರಿನಿಂದ ಸ್ನಾನ ಮಾಡಿ. ಈ ರೀತಿಯ ಸ್ನಾನ ಆರೋಗ್ಯಕ್ಕೆ ಮಾತ್ರವಲ್ಲ, ತ್ವಚೆಗೂ ಒಳ್ಳೆಯದು.

ಮಲಬದ್ಧತೆ ಸಮಸ್ಯೆ ಕೂಡ ತಲೆಸುತ್ತು ಬರಲು ಒಂದು ಕಾರಣವಾಗಿದೆ. ದೇಹದಲ್ಲಿ ಜೀರ್ಣಕ್ರಿಯೆ ಸರಿಯಾಗಿ ನಡೆಯದಿದ್ದರೆ, ಥೈರಾಯ್ಡ್‌ನಂಥ ಆರೋಗ್ಯ ಸಮಸ್ಯೆವಿದ್ದಾಗ ಮಲಬದ್ಧತೆ ಸಮಸ್ಯೆ ಉಂಟಾಗುವುದು. ಮಲಬದ್ಧತೆ ಸಮಸ್ಯೆ ಇರುವವರಲ್ಲಿ ತಲೆಸುತ್ತು ಕಂಡು ಬರುವುದು. ಮಲವಿಸರ್ಜನೆಗೆ ಹೋದಾಗ ಮಲ ಸುಲಭವಾಗಿ ಹೋಗದೆ ಬಿಗಿಯಾದಾಗ ತಲೆಸುತ್ತು ಉಂಟಾಗುವುದು. ಶುಂಠಿ ಟೀ ಮಲಬದ್ಧತೆ ಸಮಸ್ಯೆ ಕಡಿಮೆ ಮಾಡುವಲ್ಲಿ ಸಹಕಾರಿಯಾಗಿದೆ.

ಧಾನ್ಯಗಳನ್ನು ಹೆಚ್ಚಾಗಿ ಸೇವಿಸಿ
ಸಂಸ್ಕರಿಸಿದ ಆಹಾರಗಳು ಬೇಗನೆ ಜೀರ್ಣವಾಗುತ್ತದೆ. ಅನ್ನ, ಆಲೂಗಡ್ಡೆ ಈ ರೀತಿಯ ಆಹಾರಗಳನ್ನು ತಿಂದಾಗ ಬೇಗ ಜೀರ್ಣವಾಗುವುದು. ಇದರಿಂದ ದೇಹದಲ್ಲಿ ಸಕ್ಕರೆಯಂಶ ಬೇಗನೆ ಹೆಚ್ಚಾಗುವುದು ಹಾಗೂ ಸ್ವಲ್ಪ ಹೊತ್ತಿನಲ್ಲಿ ತುಂಬಾ ಕಡಿಮೆಯಾಗುವುದು. ದೇಹದಲ್ಲಿ ಸಕ್ಕರೆಯಂಶದಲ್ಲಿ ವ್ಯತ್ಯಾಸ ಉಂಟಾದರೆ ತಲೆಸುತ್ತು ಉಂಟಾಗುವುದು. ಆದ್ದರಿಂದ ದಾನ್ಯಗಳನ್ನು ನಿಮ್ಮ ಆಹಾರಕ್ರಮದಲ್ಲಿ ಸೇರಿಸಿ. ಇದು ನಿಧಾನಕ್ಕೆ ಜೀರ್ಣವಾಗುವುದರಿಂದ ದೇಹದಲ್ಲಿ ಸಕ್ಕರೆಯಂಶ ನಿಯಂತ್ರಣದಲ್ಲಿರುತ್ತದೆ. ಇನ್ನು ತೆಳು ಮಾಂಸ, ಮೀನು ಇವುಗಳನ್ನು ಸೇವಿಸಿದರೆ ಒಳ್ಳೆಯದು.

ದೇಹದಲ್ಲಿ ಸಕ್ಕರೆಯಂಶ ಕಡಿಮೆಯಾದಾಗ ತಲೆಸುತ್ತು ಉಂಟಾಗುವುದು. ಊಟಕ್ಕೆ ಮುಂಚೆ ಒಂದು ಲೋಟ ನೀರಿನಲ್ಲಿ ಒಂದು ಚಮಚ ವಿನೆಗರ್‌ ಹಾಕಿ ಕುಡಿಯುವುದರಿಂದ ತಲೆಸುತ್ತು ಕಡಿಮೆಯಾಗುವುದು. ಯಾವುದಾದರೂ ಆರೋಗ್ಯ ಸಮಸ್ಯೆ ಇರುವವರು ವೈದ್ಯರ ಸಲಹೆ ಪಡೆಯದೆ ಈ ಟಿಪ್ಸ್ ಪಾಲಿಸಬೇಡಿ. ಆರೋಗ್ಯವಾಗಿರುವವರು ದಿನದಲ್ಲಿ ಒಮ್ಮೆ ಆ್ಯಪಲ್ ಸಿಡರ್ ವಿನೆಗರ್ ನೀರಿನಲ್ಲಿ ಹಾಕಿ ಕುಡಿದರೆ ಅನೇಕ ಆರೋಗ್ಯಕರ ಗುಣಗಳನ್ನು ಪಡೆಯಬಹುದು.

ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳಿ
ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳುವ ಮೂಲಕ ತಲೆಸುತ್ತು ಕಡಿಮೆ ಮಾಡಬಹುದಾಗಿದೆ.

 • ತಲೆಸುತ್ತು ಬಂದಾಗ ಅಂಗಾತ ಮಲಗಿ ಕಣ್ಣುಗಳನ್ನು ಮುಚ್ಚಿ. ಇದರಿಂದ ವಿಶ್ರಾಂತಿಯ ಅನುಭವ ಉಂಟಾಗುವುದು.
 • ಆಕ್ಯೂಪಂಕ್ಷರ್ ಚಿಕಿತ್ಸೆ ಪಡದರೆ ತಲೆಸುತ್ತು ಕಡಿಮೆಯಾಗುವುದು.
 • ಸಾಕಷ್ಟು ನೀರು ಕುಡಿಯಿರಿ
 • ಮದ್ಯಪಾನ, ತಂಬಾಕು ಸೇವನೆ ಇವುಗಳನ್ನು ಮಾಡಬಾರದು.
 • ಸಾಕಷ್ಟು ನಿದ್ದೆ ಮಾಡಿ.

ಕಾರಣ

 • ಮದ್ಯಪಾನ ಮಾಡಿದಾಗ
 • ರಕ್ತದೊತ್ತಡ ಕಡಿಮೆಯಾದಾಗ

ದೇಹದಲ್ಲಿ ಸಕ್ಕರೆಯಂಶ ಕಡಿಮೆಯಾದಾಗ

 • ಪಾರ್ಶ್ವವಾಯು
 • ದೇಹದಲ್ಲಿ ನೀರಿನಂಶ ಕಡಿಮೆಯಾದಾಗ
 • ಯಾವುದಾದರೂ ಕಾಯಿಲೆ ಇದ್ದಾಗ ಅಥವಾ ಹೃದಯಾಘಾತವಾಗಾಗ
 • ಕಿವಿಯಲ್ಲಿ ಸೋಂಕು ಉಂಟಾದಾಗ
 • ನಿದ್ದೆ ಕಡಿಮೆಯಾದಾಗ
 • ಮಲಬದ್ಧತೆ ಸಮಸ್ಯೆ ಕಾಡಿದಾಗ