ತಲೆಮಾರು ಆಸ್ತಿ ಹೇಳಿಕೆ ರಮೇಶ್ ಸ್ಪಷ್ಟನೆ

ಬೆಂಗಳೂರು,ಜು.೨೨- ಗಾಂಧಿ ಕುಟುಂಬದ ಹೆಸರೇಳಿಕೊಂಡು ೨-೩ ತಲೆಮಾರಿಗಾಗುವಷ್ಟು ಸಂಪತ್ತು ಮಾಡಿಕೊಂಡಿದ್ದೇವೆ. ಈಗ ಗಾಂಧಿ ಕುಟುಂಬದ ಋಣ ತೀರಿಸುವ ಸಂದರ್ಭ ಬಂದಿದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಮಾಜಿ ವಿಧಾನಸಭಾಧ್ಯಕ್ಷ ರಮೇಶ್‌ಕುಮಾರ್, ತಮ್ಮ ಹೇಳಿಕೆಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೆ ವಿವಾದ ಹುಟ್ಟು ಹಾಕಲಾಗಿದೆ.ಪೂರ್ತಿ ಭಾಷಣ ನೋಡಿದ್ದರೆ ನನ್ನ ಮಾತಿನ ಉದ್ದೇಶ ತಿಳಿಯುತ್ತದೆ ಎಂದಿದ್ದಾರೆ.
ಕಾಂಗ್ರೆಸ್ ಪ್ರತಿಭಟನೆ ಸಂದರ್ಭದಲ್ಲಿ ತಾವು ಆಡಿದ ವಿವಾದಾತ್ಮಕ ಮಾತಿನ ಬಗ್ಗೆ ಫೇಸ್‌ಬುಕ್ ಮೂಲಕ ಸ್ಪಷ್ಟನೆ ನೀಡಿರುವ ಅವರು, ಎಲ್ಲವನ್ನೂ ಪಕ್ಷ ರಾಜಕಾರಣಕ್ಕೆ ಸೀಮಿತವಾಗಿ ನೋಡುವ ವಿಚಿತ್ರ ಸನ್ನಿವೇಶದಲ್ಲಿ ನಾವಿದ್ದೇವೆ. ಆ ಭಾಷಣದುದ್ದಕ್ಕೂ ನಾನು ದೇಶವನ್ನು ನಾಡಿನ ಜನತೆಯನ್ನುದ್ದೇಶಿಸಿ ಮಾತನಾಡಿದ್ದೇನೆಯೇ ಹೊರತು ಕಾಂಗ್ರೆಸ್ ನಾಯಕರನ್ನುದ್ದೇಶಿಸಿ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸ್ವಾತಂತ್ರ್ಯ ಬಂದಾಗ ಹಸಿವಿನಲ್ಲಿದ್ದ ದೇಶ ಇಂದು ಈ ಪ್ರಮಾಣದ ಸುಭದ್ರತೆಯನ್ನು ಕಂಡಿದ್ದರಲ್ಲಿ ಕಾಂಗ್ರೆಸ್ ಪಕ್ಷದ ಪಾತ್ರದ ಕುರಿತು ದೇಶ ಮರೆತರೆ ಅದು ದುರದೃಷ್ಟಕರ. ಅದೇ ರೀತಿ ದೇಶದ ಅಭಿವೃದ್ಧಿಯಲ್ಲಿ ನೆಹರು-ಗಾಂಧಿ ಕುಟುಂಬದ ಪಾತ್ರವನ್ನು ಹೇಳುವುದು ನನ್ನ ಉದ್ದೇಶವಾಗಿತ್ತು ಎಂದು ಹೇಳಿದ್ದಾರೆ.
ಹಸಿವು, ಬಡತನ, ಅನಕ್ಷರತೆಯಲ್ಲಿದ್ದ ದೇಶ ಇಂದು ಹಲವು ತಲೆಮಾರುಗಳತನಕ ಕದಲಿಸಲಾಗದ ಶಕ್ತಿಯನ್ನು ಪಡೆದುಕೊಂಡಿದ್ದರೆ ಅದಕ್ಕೆ ಇಬ್ಬರು ಹುತಾತ್ಮತರನ್ನು ಹೊಂದಿರುವ ಗಾಂಧಿ ಕುಟುಂಬದ ತ್ಯಾಗವೂ ಇದೆ. ಹುಸಿ ದೇಶಭಕ್ತರ ರೀತಿಯಲ್ಲ. ದೇಶದ ಅಖಂಡತೆಗೆ, ಅಭಿವೃದ್ಧಿಗೆ ಗುಂಡಿಗೆ ಬಲಿಯಾದ ಇಬ್ಬರು ಒಂದೇ ಕುಟುಂಬದಲ್ಲಿರುವ ಉದಾಹರಣೆ ಇಡೀ ಪ್ರಪಂಚದಲ್ಲಿಲ್ಲ. ದೇಶದ ಉದ್ಯಮಿಗಳು, ಕೈಗಾರಿಕಾ ಕ್ಷೇತ್ರದವರು, ರಾಜಕಾರಣಿಗಳು ಎಲ್ಲರನ್ನೂ ಸೇರಿಸಿ ಋಣಿಯಾಗಿರಬೇಕು ಹೇಳಿದ್ದೆ ವಿನಃ ಕಾಂಗ್ರೆಸ್ ಪಕ್ಷದವರು ಮಾಡಿಕೊಂಡಿದ್ದಾರೆ ಎಂದು ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಆ ಕುಟುಂಬ ದೇಶಕ್ಕಾಗಿ ದಶಕಗಟ್ಟಲೆ ಜೈಲಿನಲ್ಲಿತ್ತು. ಅವರ ಕುರಿತ ಕುತ್ಸಿತ ಮನೋಭಾವ ದುರಂತವಲ್ಲದೆ ಬೇರೇನೂ ಇಲ್ಲ. ಇಡೀ ದೇಶ ಸೋನಿಯಾಗಾಂಧಿಯವರ ಜತೆ ನಿಲ್ಲಬೇಕು ಎಂಬುದು ನನ್ನ ಅಭಿಲಾಷೆ. ಇಷ್ಟೇ ವಿಚಾರ ಇದನ್ನು ನಾನು ೧೦೦ ಸಾರಿ ಹೇಳುತ್ತೇನೆ. ಪುರಾವೆಗಳೊಂದಿಗೆ, ತರ್ಕದೊಂದಿಗೆ, ಅಂತಃಕರಣದೊಂದಿಗೆ ಈ ಸತ್ಯವನ್ನು ಯಾರಿಂದಲೂ ಅಳಿಸಿ ಹಾಕಲು ಸಾಧ್ಯವಿಲ್ಲ ಎಂದು ರಮೇಶ್‌ಕುಮಾರ್ ತಿಳಿಸಿದ್ದಾರೆ.