ತಲಾ 75 ಬೈಕ್, ವಾಹನಗಳ ರ್ಯಾಲಿ, 75 ನಿವೃತ್ತ ಸೈನಿಕರಿಗೆ ಸನ್ಮಾನಸ್ವಾತಂತ್ರ್ಯೋತ್ಸವ ಸಂಭ್ರಮ, ಗುರುವಚನ ಪ್ರವಚನ ಅಭಿಯಾನ ಸಮಾರೋಪ 31ಕ್ಕೆ

ಬೀದರ್: ಜು.29:ಲಿಂಗಾಯತ ಮಹಾಮಠವು ಇಲ್ಲಿಯ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗ ಮಂದಿರದಲ್ಲಿ ಜುಲೈ 31 ರಂದು ಬೆಳಿಗ್ಗೆ 11ಕ್ಕೆ ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಪ್ರಯುಕ್ತ ಜಿಲ್ಲೆಯ 75 ಗ್ರಾಮಗಳಲ್ಲಿ ನಡೆಸಿದ ಸ್ವಾತಂತ್ರ್ಯೋತ್ಸವ ಸಂಭ್ರಮ ಮತ್ತು ಗುರುವಚನ ಪ್ರವಚನ ಅಭಿಯಾನದ ಸಮಾರೋಪ ಸಮಾರಂಭ ಹಮ್ಮಿಕೊಂಡಿದೆ.

ಸಮಾರಂಭದಲ್ಲಿ ಜಿಲ್ಲೆಯ 75 ನಿವೃತ್ತ ಸೈನಿಕರಿಗೆ ಸನ್ಮಾನ, ಕ್ರಾಂತಿ ಗೀತೆಗಳ ನೃತ್ಯರೂಪಕ ಪ್ರದರ್ಶನ, 75 ಗ್ರಾಮಗಳ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಣೆಯ ಕಿರುಚಿತ್ರ ಪ್ರದರ್ಶನ ಹಾಗೂ ಲಿಂಗಾಯತ ಸೇವಾ ದಳದ ಉದ್ಘಾಟನೆ ನೆರವೇರಲಿದೆ ಎಂದು ಕಾರ್ಯಕ್ರಮದ ರೂವಾರಿಯಾದ ಲಿಂಗಾಯತ ಮಹಾಮಠದ ಅಕ್ಕ ಅನ್ನಪೂರ್ಣತಾಯಿ ತಿಳಿಸಿದ್ದಾರೆ.

ಅಂದು ಬೆಳಿಗ್ಗೆ 9ಕ್ಕೆ ಸಿಂದೋಲ್ ಕಲ್ಯಾಣ ಮಂಟಪದಿಂದ ರಂಗ ಮಂದಿರದ ವರೆಗೆ ರಾಷ್ಟ್ರಧ್ವಜ ಹಾಗೂ ಧರ್ಮ ಧ್ವಜ ಹೊತ್ತ 75 ಬೈಕ್‍ಗಳು ಹಾಗೂ 75 ಕಾರುಗಳ ರ್ಯಾಲಿ ನಡೆಯಲಿದೆ ಎಂದು ಹೇಳಿದ್ದಾರೆ.

ಕೇಂದ್ರದ ರಾಸಾಯನಿಕ ಹಾಗೂ ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಕಾರ್ಯಕ್ರಮ ಉದ್ಘಾಟಿಸುವರು. ಅಕ್ಕ ಅನ್ನಪೂರ್ಣತಾಯಿ ದಿವ್ಯ ಸಾನಿಧ್ಯ, ಲಿಂಗಾಯತ ಮಹಾಮಠದ ಪ್ರಭುದೇವರು ನೇತೃತ್ವ ವಹಿಸುವರು. ವಿಧಾನ ಪರಿಷತ್ ಸಭಾಪತಿ ರಘುನಾಥರಾವ್ ಮಲ್ಕಾಪುರೆ ಅವರನ್ನು ಅಭಿನಂದಿಸಲಾಗುವುದು ಎಂದು ತಿಳಿಸಿದ್ದಾರೆ.

ಪಶು ಸಂಗೋಪನೆ ಸಚಿವ ಪ್ರಭು ಚವಾಣ್ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ರಾಜ್ಯ ಕೈಗಾರಿಕೆ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಾ. ಶೈಲೇಂದ್ರ ಬೆಲ್ದಾಳೆ, ಶಾಸಕರಾದ ಈಶ್ವರ ಖಂಡ್ರೆ, ರಾಜಶೇಖರ ಪಾಟೀಲ, ಬಂಡೆಪ್ಪ ಕಾಶೆಂಪುರ, ರಹೀಂಖಾನ್, ಶರಣು ಸಲಗರ, ಬಿಡಿಎ ಅಧ್ಯಕ್ಷ ಬಾಬುವಾಲಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಅಶೋಕಕುಮಾರ ಕರಂಜಿ, ಕಲ್ಯಾಣ ಕರ್ನಾಟಕ ಸೈನಿಕ ತರಬೇತಿ ಕೇಂದ್ರದ ಅಧ್ಯಕ್ಷ ಶರಣಪ್ಪ ಸಿಕೇನಪುರ ಪಾಲ್ಗೊಳ್ಳುವರು.

ಹಿರಿಯ ಪ್ರತಕರ್ತ ಶಿವಶರಣಪ್ಪ ವಾಲಿ, ಮುಖಂಡರಾದ ಗುರುನಾಥ ಕೊಳ್ಳೂರ, ಸುರೇಶ ಚನಶೆಟ್ಟಿ, ಬಸವಕುಮಾರ ಪಾಟೀಲ, ರೇವಣಸಿದ್ದಪ್ಪ ಜಲಾದೆ, ಮಡಿವಾಳಪ್ಪ ಮಂಗಲಗಿ, ರಾಜು ಕೋಟೆ, ರಾಜಶೇಖರ ಯಂಕಂಜಿ, ಆನಂದ ದೇವಪ್ಪ, ವಿರೂಪಾಕ್ಷ ಗಾದಗಿ ಉಪಸ್ಥಿತರಿರುವರು ಎಂದು ಹೇಳಿದ್ದಾರೆ.

ಸಮಾರೋಪ ಸಮಾರಂಭಕ್ಕೆ ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದ್ದಾರೆ.


ಅಭಿಯಾನ ಯಶಸ್ವಿ: ಅಕ್ಕ ಅನ್ನಪೂರ್ಣತಾಯಿ

ಬೀದರ್: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಲಿಂಗಾಯತ ಮಹಾಮಠದ ವತಿಯಿಂದ ಪ್ರಭುದೇವರ ನೇತೃತ್ವದಲ್ಲಿ ಜಿಲ್ಲೆಯ 75 ಗ್ರಾಮಗಳಲ್ಲಿ ಹಮ್ಮಿಕೊಂಡಿದ್ದ ಆಝಾದಿ ಕಾ ಅಮೃತ ಮಹೋತ್ಸವ ಹಾಗೂ ಗುರುವಚನ ಪ್ರವಚನ ಅಭಿಯಾನ ಯಶಸ್ವಿಯಾಗಿದೆ ಎಂದು ಲಿಂಗಾಯತ ಮಹಾಮಠದ ಅಕ್ಕ ಅನ್ನಪೂರ್ಣತಾಯಿ ತಿಳಿಸಿದ್ದಾರೆ.

ದಿನಕ್ಕೆ ಒಂದು ಗ್ರಾಮದಂತೆ ಜಿಲ್ಲೆಯ ಆಯ್ದ 75 ಗ್ರಾಮಗಳಲ್ಲಿ ಸ್ವಾತಂತ್ರ್ಯ ಹೋರಾಟಗಾರರು, ಶರಣರ ತ್ಯಾಗ, ಬಲಿದಾನ ಹಾಗೂ ವಚನ ಸಾಹಿತ್ಯದ ಅರಿವು ಮೂಡಿಸಲಾಗಿದೆ. ಜನರಲ್ಲಿ ದೇಶಭಕ್ತಿ, ದೇಶಾಭಿಮಾನ ಜಾಗೃತಗೊಳಿಸಲಾಗಿದೆ. ಅಭಿಯಾನದ ಭಾಗವಾಗಿ 75 ಯುವಕರು ರಕ್ತದಾನ ಮಾಡಿ ದೇಶ ಪ್ರೇಮ ಮೆರೆದಿದ್ದಾರೆ ಎಂದು ಹೇಳಿದ್ದಾರೆ.


ವಿಡಿಯೊ ಸಂದೇಶ ಕಳುಹಿಸಿದ ಮುಖ್ಯಮಂತ್ರಿ

ಬೀದರ್: ಸ್ವಾತಂತ್ರ್ಯೋತ್ಸವ ಸಂಭ್ರಮ ಮತ್ತು ಗುರುವಚನ ಪ್ರವಚನ ಅಭಿಯಾನದ ಸಮಾರೋಪ ಸಮಾರಂಭದ ಪ್ರಯುಕ್ತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಲಿಂಗಾಯತ ಮಹಾಮಠದ ಅಕ್ಕ ಅನ್ನಪೂರ್ಣತಾಯಿ ಅವರಿಗೆ ವಿಡಿಯೊ ಸಂದೇಶ ಕಳುಹಿಸಿದ್ದಾರೆ.

ಅಕ್ಕ ಅನ್ನಪೂರ್ಣತಾಯಿ ಹಾಗೂ ಪ್ರಭುದೇವರ ನೇತೃತ್ವದಲ್ಲಿ ದೇಶದಲ್ಲೇ ಮೊದಲ ಬಾರಿಗೆ ಬೀದರ್ ಜಿಲ್ಲೆಯಲ್ಲಿ ಸ್ವಾತಂತ್ರ್ಯ ಹೋರಾಟ ಹಾಗೂ ಶರಣರ ಸಂದೇಶಗಳ ಬಗ್ಗೆ ಯುವಜನರಲ್ಲಿ ಅರಿವು ಮೂಡಿಸುವ 75 ದಿನಗಳ ವಿನೂತನ ಅಭಿಯಾನ ನಡೆದಿದೆ. ಅಭಿಯಾನವು ಎಲ್ಲರಿಗೆ ಪ್ರೇರಣಾದಾಯಕವಾಗಿದೆ ಎಂದು ಸಂದೇಶದಲ್ಲಿ ಹೇಳಿದ್ದಾರೆ.

ನಾನು ಅಭಿಯಾನದ ಸಮಾರೋಪದಲ್ಲಿ ಭಾಗವಹಿಸಬೇಕಿತ್ತು. ಅನಿವಾರ್ಯ ಕಾರಣಗಳಿಂದ ಪಾಲ್ಗೊಳ್ಳಲು ಆಗುತ್ತಿಲ್ಲ. ಅಕ್ಕ ಅನ್ನಪೂರ್ಣತಾಯಿ ಹಾಗೂ ಪ್ರಭುದೇವರಿಗೆ ನನ್ನ ಅಭಿನಂದನೆಗಳು ಎಂದು ತಿಳಿಸಿದ್ದಾರೆ.