ತಲಾ ಎರಡು ಸಸಿ ನೆಡಿ: ಹಾವಗಿಲಿಂಗೇಶ್ವರ ಶ್ರೀ ಸಲಹೆ

ಬೀದರ್:ಜೂ.11: ವಿಶ್ವ ಪರಿಸರ ದಿನಾಚರಣೆ ನಿಮಿತ್ತ ಭಾಲ್ಕಿ ತಾಲ್ಲೂಕಿನ ಹಲಬರ್ಗಾ ಗ್ರಾಮದ ರಾಚೋಟೇಶ್ವರ ಸಂಸ್ಥಾನ ಮಠದ ಆವರಣದಲ್ಲಿ ಇರುವ ಕರಿಬಸವೇಶ್ವರ ಉದ್ಯಾನದಲ್ಲಿ ಸೋಮವಾರ ಸಸಿ ನೆಡಲಾಯಿತು.
ಗಿಡ-ಮರಗಳಿದ್ದರೆ ಸಕಾಲಕ್ಕೆ ಮಳೆಯಾಗುತ್ತದೆ. ಉತ್ತಮ ಬೆಳೆ ಬರುತ್ತದೆ. ವಾತಾವರಣವೂ ತಂಪಾಗಿರುತ್ತದೆ ಎಂದು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಮಠದ ಪೀಠಾಧಿಪತಿ ಹಾವಗಿಲಿಂಗೇಶ್ವರ ಶಿವಾಚಾರ್ಯ ನುಡಿದರು.
ವರ್ಷದಿಂದ ವರ್ಷಕ್ಕೆ ತಾಪಮಾನದಲ್ಲಿ ಆಗುತ್ತಿರುವ ಏರಿಕೆ, ಮಳೆ ಕೊರತೆ ಹಾಗೂ ನೀರಿನ ಸಮಸ್ಯೆಗೆ ಅರಣ್ಯ ನಾಶವೇ ಕಾರಣವಾಗಿದೆ ಎಂದು ತಿಳಿಸಿದರು.
ಉತ್ತಮ ಪರಿಸರವಿದ್ದರೆ ಮಾತ್ರ ಜೀವ ಸಂಕುಲಕ್ಕೆ ಉಳಿಗಾಲ ಇದೆ. ಹೀಗಾಗಿ ಎಲ್ಲರೂ ಪರಿಸರ ಕಾಳಜಿ ವಹಿಸಬೇಕು. ತಲಾ ಎರಡು ಸಸಿಗಳನ್ನು ನೆಟ್ಟು ಬೆಳೆಸಬೇಕು ಎಂದು ಸಲಹೆ ಮಾಡಿದರು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚಂದ್ರಕಾಂತ ಫುಲೆ, ಪ್ರಮುಖರಾದ ಮಂಜುನಾಥ ಪಾಟೀಲ, ಶಿವಕುಮಾರ ಪಾಟೀಲ ತೇಗಂಪುರ, ಘಾಳೆಪ್ಪ ನಾಗೂರೆ, ಮಹೇಶ ಪಾಟೀಲ, ರಾಜು ಕುಂಬಾರ, ಮಾರುತಿ ಸೂರ್ಯವಂಶಿ, ಚೇತನ್ ಕುಂಬಾರ, ಆಕಾಶ ನಾಗೂರೆ, ಮಲ್ಲಿಕಾರ್ಜುನ ಸ್ವಾಮಿ, ವಿಶಾಲ್ ನಾಗೂರೆ ಇದ್ದರು.