ತೆರಿಗೆ ವಂಚನೆ ಪ್ರಕರಣ: ಡಿಕೆಶಿ ನಿರಾಳ

ಬೆಂಗಳೂರು, ಏ.5- ತೆರಿಗೆ ವಂಚನೆ ಪ್ರಕರಣ ಮತ್ತು ಸಾಕ್ಷ್ಯ ನಾಶ ಆರೋಪಕ್ಕೆ ಗುರಿಯಾಗಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೈಕೋರ್ಟ್ ಸಿಹಿ ಸುದ್ದಿ ನೀಡಿದೆ.
ಆದಾಯ ತೆರಿಗೆ ಇಲಾಖೆ ಸಲ್ಲಿಸಿದ್ದ ಮೇಲ್ಮನವಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ವಿಶೇಷ ನ್ಯಾಯಾಲಯ ನೀಡಿದ್ದ ತೀರ್ಪನ್ನು ಎತ್ತಹಿಡಿದಿದೆ.

ಡಿ.ಕೆ. ಶಿವಕುಮಾರ್ ಅವರ ವಿರುದ್ಧದ ತೆರಿಗೆ ವಂಚನೆಗೆ ಸಂಬಂಧಿಸಿದ ಮೂರು ಪ್ರಕರಣಗಳನ್ನು ವಿಶೇಷ ನ್ಯಾಯಾಲಯ ವಜಾಗೊಳಿಸಿತ್ತು. ಕೆಳ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ಆದಾಯ ತೆರಿಗೆ ಇಲಾಖೆ ಹೈಕೋರ್ಟ್ ಗೆ ಮೊರೆ ಹೋಗಿತ್ತು.

ಡಿಕೆ ಶಿವಕುಮಾರ್ ಅವರಿಂದ ತೆರಿಗೆ ವಂಚನೆ ನಡೆದಿದೆ ಎಂದು ಆರೋಪಿಸಿದ್ದ ಐಟಿ ಇಲಾಖೆ ಅಧಿಕಾರಿಗಳು, ದಾಳಿ ನಡೆದಾಗ ಮಾಜಿ ಸಚಿವರು ಕಾಗದ ಪತ್ರಗಳನ್ನು ಹರಿದು ದಾಖಲೆ ನಾಶ ಮಾಡಿದ್ದಾರೆಂದು ಆರೋಪಿಸಿತ್ತು. ಅಲ್ಲದೆ ವಿಶೇಷ ನ್ಯಾಯಾಲಯ ತನ್ನ ವ್ಯಾಪ್ತಿ ಮೀರಿ ಆರೋಪಿಯನ್ನು ದೊಷಮುಕ್ತರಾಗಿ ಘೋಷಿಸಿದೆ ಎಂದು ದೂರಿತ್ತು.

ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ಹಾ ಅವರು, ಈ ಮೂರು ಪ್ರಕರಣಗಳಿಗೆ ಸಂಬಂಧಿಸಿದಂತೆ ಶಿವಕುಮಾರ್ ಅವರ ವಿರುದ್ಧ ಆದಾಯ ತೆರಿಗೆ ಇಲಾಖೆ ಸಲ್ಲಿಸಿದ್ದ ಮೇಲ್ಮನವಿಗಳನ್ನು ವಜಾಗೊಳಿಸಿ, ವಿಶೇಷ ನ್ಯಾಯಾಲಯದ ತೀರ್ಪು ಎತ್ತಿ ಹಿಡಿದಿದೆ.