ತರಾತುರಿ ರಾಷ್ಟ್ರೀಯ ಶಿಕ್ಷಣ ನೀತಿ ಹೇರಿಕೆ ವಿರೋಧಿಸಿ ಆಂದೋಲನ

ಮೈಸೂರು, ನ.11:- ರಾಷ್ಟ್ರೀಯ ಶಿಕ್ಷಣ ನೀತಿ-20202ರ ಅಪ್ರಜಾತಾಂತ್ರಿಕ ಹಾಗೂ ತರಾತುರಿಯ ಹೇರಿಕೆಯನ್ನು ವಿರೋಧಿಸಿ ಎಐಡಿಎಸ್ ಓ ನೇತೃತ್ವದಲ್ಲಿ ರಾಜ್ಯಾದ್ಯಂತ ವಿದ್ಯಾರ್ಥಿಗಳ ಆಂದೋಲನ ನಡೆದಿದ್ದು ಮೈಸೂರಿನಲ್ಲಿಯೂ ಆಂದೋಲನ ನಡೆಯಿತು.
ಜಿಲ್ಲಾಧಿಕಾರಿಗಳ ಕಛೇರಿ ಎದುರು ನಡೆದ ಆಂದೋಲನದಲ್ಲಿ ಪಾಲ್ಗೊಂಡ ಮೈಸೂರು ಜಿಲ್ಲೆಯ ಉಪಾಧ್ಯಕ್ಷೆ ಆಸ್ಯಾ ಮಾತನಾಡಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ದಿಢೀರ್ ತಂದಿದ್ದೇ ಮೊದಲೆಯ ತಪ್ಪು, ಯಾರನ್ನು ಕೇಳಿ ಹೇಳುತ್ತಿದ್ದೀರಿ, ವಿದ್ಯಾರ್ಥಿಗಳ ಪರಿಸ್ಥಿತಿ ಹೇಗಿತ್ತು. ಇದನ್ನು ಗಮನಕ್ಕೆ ತೆಗೆದುಕೊಂಡಿಲ್ಲ. ಇದು ಅವೈಜ್ಞಾನಿಕ, ಇದು ಸರ್ವಾಧಿಕಾರಿ ಧೋರಣೆ. ಇದನ್ನು ಒಪ್ಪಲ್ಲ, ಆರ್ಥಿಕ ಸಂಕಷ್ಟದಿಂದ ಬಂದಂತಹ ವಿದ್ಯಾರ್ಥಿಗಳಿಗೆ ಕಳೆದ ಬಾರಿ ಬಸ್ ಪಾಸ್ ಮಾಡಿಸಿಕೊಂಡು 20 ದಿನವೂ ಓಡಾಡಿಲ್ಲ. ಈ ವರ್ಷ ಮತ್ತೆ ಬಸ್ ಪಾಸ್ ಮಾಡಿಸಿಕೊಳ್ಳಿ ಅಂತ ಕಡ್ಡಾಯ ಮಾಡಿ ನಮ್ಮ ಬಳಿ ಹಣ ವಸೂಲಿ ಮಾಡಿದ್ದಾರೆ. ಅವರು ನಮಗೆ ಹಣವನ್ನು ವಾಪಸ್ ಕೊಡಬೇಕು. ಹಣ ವಾಪಸ್ ಕೊಡುವ ತನಕ ನಾವು ನಿಲ್ಲಬಾರದು. ಇದು ನಮ್ಮ ಧೋರಣೆಯಾಗಬೇಕು. ಹೋರಾಟದ ಒಂದು ದಾರಿಯಾಗಬೇಕು ಎಂದರು.
ನೂತನ ಶಿಕ್ಷಣ ನೀತಿ ನಾಲ್ಕು ವರ್ಷ ಅಂತ ಹೇಳಿದ್ದಾರೆ. ಅವರು ಬಂದು ಹೇಳಬೇಕು ಏನಿದೆ ಅಂತ, ಅವರಿಗೇ ಗೊತ್ತಿಲ್ಲ, ಶಿಕ್ಷಣ ಮಂತ್ರಿಗಳು ಬಂದು ಹೇಳುತ್ತಾರೆ ಡಿಜಿಟಲೀಕರಣ ಮಾಡುತ್ತೇವೆ ಅಂತ ಏನು ಡಿಜಿಟಲೀಕರಣ ,ಮಣ್ಣು ಮಾಡೋದು ಇವರು ಎಂದು ಆಕ್ರೋಶ ವ್ಯಕ್ತಪಡಿಸಿದರು. ನಾಲ್ಕು ವರ್ಷ ಪದವಿ, ಒಂದು ವರ್ಷ ಮಾಸ್ಟರ್ ಡಿಗ್ರಿ ಎಂದು ಹೇಳುತ್ತಿದ್ದಾರೆ. ಪಾಲಿಸಿಗೋಸ್ಕರ ಪಾಲಿಸಿ ಮಾಡಬೇಕಾ? ಖಾಸಗಿಯವರಿಗೆ ಸಹಾಯ ಮಾಡಲಿ ಎಂದು ಮಾಡಬೇಕಾ? ಎಂದು ಪ್ರಶ್ನಿಸಿದರು. ಇದೇ ವೇಳೆ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಬೇಡಿಕೆಯ ಮನವಿ ನೀಡಿದರು.
ಈ ಸಂದರ್ಭ ಅಧ್ಯಕ್ಷ ಸುಭಾಶ್ ಜಯಪ್ಪ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.