
ಹರಪನಹಳ್ಳಿ.ಏ.೫ : 50 ಕೆರೆಗಳಿಗೆ ತುಂಗಭದ್ರಾ ನದಿ ನೀರು ತುಂಬಿಸುವ ಯೋಜನೆ ಈಚೆಗೆ ತರಾತುರಿಯಲ್ಲಿ ಉದ್ಘಾಟಿಸಿ ತಾಲ್ಲೂಕಿನ ಜನರ ದಿಕ್ಕು ತಪ್ಪಿಸಿದ್ದಾರೆ ಎಂದು ಆರೋಪಿಸಿದ ಕಾಂಗ್ರೆಸ್ ಮುಖಂಡರು ಪಕ್ಷದ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಯೋಜನೆಯ ರಿಯಾಲಿಟಿ ಚೆಕ್ ವಿಡಿಯೊ ಪ್ರದರ್ಶಿಸಿದರು.ಕೆಪಿಸಿಸಿ ಸದಸ್ಯೆ ಎಂ.ಪಿ.ವೀಣಾ ಮಹಾಂತೇಶ್, ಮಾಜಿ ಶಾಸಕ ದಿವಂಗತ ಎಂ.ಪಿ.ರವೀAದ್ರ ಅವಧಿಯಲ್ಲಿ ಮಂಜೂರಾಗಿ ಅನುದಾನ ಬಿಡುಗಡೆಯಾಗಿದ್ದ 50 ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿ ಈವರೆಗೂ ಪೂರ್ಣಗೊಂಡಿಲ್ಲ. 4 ವರ್ಷ ಸುಮ್ಮನಿದ್ದ ಶಾಸಕ ಕರುಣಾಕರರೆಡ್ಡಿ ಅವರು ನೀತಿ ಸಂಹಿತೆ ಜಾರಿಗೆ ಇನ್ನೆರಡು ದಿನ ಬಾಕಿ ಇರುವಾಗ ತರಾತುರಿಯಲ್ಲಿ ಯೋಜನೆ ಉದ್ಘಾಟಿಸಿ, ತಾಲ್ಲೂಕಿನ ಜನರಿಗೆ ಮೋಸ ಮಾಡಿದ್ದಾರೆ. ಅಪೂರ್ಣ ಕಾಮಗಾರಿ ಉದ್ಘಾಟಿಸುವಲ್ಲಿ ಬಿಜೆಪಿಯವರು ನಿಸ್ಸೀಮರು ಎಂದು ಟೀಕಿಸಿದರು.ಗುತ್ತಿಗೆಪಡೆದ ಎಲ್‌ಎನ್‌ಟಿ ಕಂಪನಿಯವರು 50 ಕೆರೆಗಳಿಗೆ ಸರಿಯಾದ ಪೈಪ್‌ಲೈನ್ ಮಾಡಿಲ್ಲ. ಕಂಚಿಕೇರೆ, ಗುಂಡಗತ್ತಿ, ತಲವಾಗಲು, ಬಿಕ್ಕಿಕಟ್ಟೆ, ನಾಗಲಾಪುರ, ನಿಚ್ಚವ್ವನಹಳ್ಳಿ, ಹಿಕ್ಕಿಂಗೇರಿ, ಬಾಗಳಿ, ಮುತ್ತಿಗಿ, ಮಾಡ್ಲಗೇರೆ, ಕನ್ನನಾಯ್ಕನಹಳ್ಳಿ ಸೇರಿ 11 ಗ್ರಾಮದ ಕೆರೆಗಳಿಗೆ ಈವರೆಗೂ ಪೈಪ್‌ಲೈನ್ ಪಾಯಿಂಟ್ ಮಾಡಿಲ್ಲ. ಈಗ ಚಾಲನೆ ಕೊಟ್ಟಿರುವ 9 ಕೆರೆಗಳಲ್ಲಿ ಪೈಪ್‌ಗಳು ಒಡೆದು ಸೋರಿಕೆಯಾಗುತ್ತಿವೆ. ಮಳೆಗಾಲದಲ್ಲಿ ನೀರು ಸಂಗ್ರಹವಾಗಿದ್ದ 24 ಕೆರೆಗಳಿಗೆ ಈ ಯೋಜನೆಯಿಂದ ಒಂದು ಹನಿ ನೀರು ಸಹ ಹರಿದುಬಂದಿಲ್ಲ ಎಂದು ಆರೋಪಿಸಿದರು.ತಾಲ್ಲೂಕಿನ ಜನರ ಮತ್ತೊಂದು ಮಹತ್ವಾಕಾಂಕ್ಷೆಯ 54 ಕೋಟಿ ಅನುದಾನದ ಗರ್ಭಗುಡಿ ಬ್ರಿಡ್ಜ್ ಕಂ ಬ್ಯಾರೆಜ್ ಯೋಜನೆಯ ಕಾಮಗಾರಿ 6 ವರ್ಷದಿಂದ ಆಮೆಗತಿಯಲ್ಲಿ ಸಾಗಿದೆ. ಏತನೀರಾವರಿ ಬಗ್ಗೆ ಶಾಸಕರು ಯೋಜಿಸಿಲ್ಲ. ಮುಂದಿನ ಚುನಾವಣೆಯಲ್ಲಿ ಅವರಿಗೆ ಜನರು ತಕ್ಕಪಾಠ ಕಲಿಸಬೇಕು ಎಂದರು.ಈ ಸಂದರ್ಭದಲ್ಲಿ ಮುಖಂಡರಾದ ಕವಿತಾ ವಾಗೀಶ್, ಸಿದ್ದಲಿಂಗನಗೌಡ, ಟಿ.ಎಚ್.ಎಂ ಮಹೇಶ್, ರಾಜನಾಯ್ಕ, ದೇವರ ತಿಮ್ಲಾಪುರ ನಾಗರಾಜ್, ಸಂಕಳ್ಳಿ ಶಿವಣ್ಣ, ಬಸವರಾಜ್, ದಾದಾಪೀರ್, ಮನೋಜ್ ಇತರರಿದ್ದರು.