ತರಳಬಾಳು ಶ್ರೀಗಳ ಪೀಠತ್ಯಾಗಕ್ಕೆ ಒತ್ತಾಯ

ದಾವಣಗೆರೆ. ನ.೭; ಸಿರಿಗೆರೆ ತರಳಬಾಳು ಪೀಠಾಧಿಪತಿಗಳಾದ ಶ್ರೀ ಡಾ.ಶಿವಮೂರ್ತಿ
ಶಿವಾಚಾರ್ಯ ಸ್ವಾಮೀಜಿಯವರು ಪೀಠತ್ಯಾಗ ಮಾಡಿ ಉತ್ತರಾಧಿಕಾರಿ ನೇಮಕ ಮಾಡಬೇಕು ಎಂದು ತರಳಬಾಳು ಪೀಠ ಉಳಿಸಿ ಜಾಗೃತಿ ಸಮಿತಿಯ ಮುಖಂಡರು  ಒತ್ತಾಯಿಸಿದ್ದಾರೆ.ಪತ್ರಿಕಾಗೋಷ್ಠಿಯಲ್ಲಿಂದು ಶ್ರೀಗಳ ಕಾರ್ಯವೈಖರಿ ಖಂಡಿಸಿ ಸಮಿತಿಯ ಮುಖಂಡರಾದ ಮುದೇಗೌಡ್ರ ವೀರಭದ್ರಪ್ಪ ಮಾತನಾಡಿ ಸಮಾಜದ ಬೈಲಾ ಪ್ರಕಾರ ಹಿರಿಯ ಶ್ರೀಗಳ ಆಶಯದಂತೆ ೬೦ ವರ್ಷ ಮೇಲ್ಪಟ್ಟವರು ಪೀಠಾಧಿಪತಿಯಾಗಿ ಮುಂದುವರೆಯುವಂತಿಲ್ಲ ಹಾಗಾಗಿ ಪೀಠತ್ಯಾಗ ಮಾಡಬೇಕು.ಈ ಬಗ್ಗೆ ಶ್ರೀಗಳಿಗೆ ನಾಲ್ಕೈದು ಪತ್ರ ಬರೆದಿದ್ದೇವೆ ಆದರೆ ಅದಕ್ಕೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಹಾಲಿ ಶ್ರೀಗಳಿಗೆ 75 ವರ್ಷವಾಗಿದೆ ಹಿಂದಿನ ಶ್ರೀಗಳಾದ ಶಿವಕುಮಾರ ಶಿವಾಚಾರ್ಯರು ಪ್ರಜಾಪ್ರಭುತ್ವ ರೀತಿಯಲ್ಲಿ ಅವರ ೫೦ ನೇ ವಯಸ್ಸಿನಲ್ಲಿ ಪೀಠತ್ಯಾಗ ಮಾಡಿ ಹಾಲಿ ಶ್ರೀಗಳನ್ನು ಸಮಾಜಕ್ಕೆ ಪರಿಚಯಿಸಿ ಪಟ್ಟ ಕಟ್ಟಿ ವಿಶ್ರಾಂತಿ ಪಡೆದರು.ಅದರಂತೆ ಹಾಲಿ ಶ್ರೀಗಳು ಉತ್ತರಾಧಿಕಾರಿ ನೇಮಕಮಾಡಬೇಕು.ಸಮಾಜ ಬಾಂಧವರು ಹಾಗೂ ಭಕ್ತರ ಸಮಕ್ಷಮದಲ್ಲಿ ನೂತನ ಪೀಠಾಧಿಪತಿಗಳನ್ನು ಆಯ್ಕೆಮಾಡಬೇಕು ಎಂದು ಆಗ್ರಹಿಸಿದರು.ವಕೀಲರಾದ ಎಂ.ಸಿದ್ದಯ್ಯನವರು ಮಾತನಾಡಿ ನಮ್ಮ ಹೊರಾಟ ಮಠದ ಮೇಲೆ ಅಲ್ಲ ಪೀಠಾಧಿಪತಿಗಳಾಗಿ ಸುಧೀರ್ಘ 43 ವರ್ಷಗಳಿಂದ ಸರ್ವಾಧಿಕಾರಿಯಂತೆ ವರ್ತಿಸುತ್ತಿರುವ ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯವರ ವರ್ತನೆಯ ಮೇಲೆ ಎಂದು ಸ್ಪಷ್ಟಪಡಿಸಿದರು.ಭಕ್ತ ಸಮುದಾಯ ಶ್ರೀಮಠದ ಬಗ್ಗೆ ಅಪಾರ ಗೌರವ ಅಭಿಮಾನ ಹೊಂದಿದ್ದಾರೆ ಆದರೆ ಶ್ರೀ ಮಠದ ಸಂಪರ್ಕ ಸುಲಭವಾಗಿ ಭಕ್ತ ಸಮುದಾಯಕ್ಕೆ ಸಿಗುತ್ತಿಲ್ಲ ಇದರಿಂದ ಭಕ್ತರು ತಮ್ಮ ಕಷ್ಟಸುಖ ಹೇಳಿಕೊಳ್ಳಲು ಸಾಧ್ಯವಾಗುತ್ತಿಲ್ಲ.ಅನಾಥ ಪ್ರಜ್ಞೆ ಭಕ್ತಸಮುದಾಯದಲ್ಲಿ ಹುಟ್ಟಿಕೊಂಡಿದೆ ಸಮಾಜದಲ್ಲಿ ವಿಚಾರವಾದಿಗಳು, ಪರಿಣತರು ಇದ್ದರೂ ಕೂಡ ಅವರನ್ನು ಸಮರ್ಥವಾಗಿ ಬಳಸಿಕೊಳ್ಳುತ್ತಿಲ್ಲ ಏಕಮುಖ ನಿರ್ಧಾರಗಳಿಂದ ಎಲ್ಲರನ್ನೂ ದೂರವಿಟ್ಟಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.ಸಮಾಜದ ಸಮಸ್ಯೆ ಬೀದಿಗೆ ಬಂದಿರುವುದಕ್ಕೆ ಶ್ರೀಗಳೇ ಕಾರಣ.ನಮಗೆ ಬೆದರಿಕೆ ಕೆರಗಳು ಬಂದರೂ ಕೂಡ ಅದಕ್ಕೆ ಅವರೇ ಕಾರಣ ಎಂದರು.
ಸಮಿತಿಯ ಮುಖಂಡ ಶಿವನಕೆರೆ ಬಸವಲಿಂಗಪ್ಪ ಮಾತನಾಡಿ ಶ್ರೀಗಳು ಶಿಕ್ಷಣ ಸಂಸ್ಥೆಗಳನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ ಸಮಾಜದ ಬಡವರಿಗೆ ನೆರವಾಗುವ ಶಿಕ್ಷಣ ಸಂಸ್ಥೆಗಳ ಬದಲಾಗಿ ಕೇವಲ ಆದಾಯ ತರುವಂತಹ ಕಲ್ಯಾಣಮಂಟಪಗಳನ್ನು ಅದ್ದೂರಿ ದೇವಾಲಯಗಳನ್ನು ಸ್ಥಾಪನೆ ಮಾಡಿದ್ದಾರೆ. ಅನೇಕ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಕರಿಲ್ಲದಂತಹ ಸ್ಥಿತಿ ಎದುರಾಗಿದೆ.ಭಕ್ತರ ಹಣವನ್ನು ಅದ್ದೂರಿ ಕಟ್ಟಡಗಳ ನಿರ್ಮಾಣಕ್ಕೆ ಮುಂದಾಗಿದ್ದಾರೆ ಎಂದರು.ಸಮಿತಿಯ ಶಾಂತಗಂಗಾಧರ್ ಹಾಗೂ ಮಾದನಬಾವಿ ರುದ್ರಪ್ಪಗೌಡ ಮಾತನಾಡಿ ಶ್ರೀಗಳ ಕಾರ್ಯವೈಖರಿ ಪ್ರಶ್ನಿಸಿದವರನ್ನು ಕೆಟ್ಟವರಂತೆ ಬಿಂಬಿಸಲಾಗುತ್ತಿದೆ.ಮಠದ ವಿರೋಧಿಗಳು ಸಮಾಜವಿರೋಧಿಗಳು ಎಂಬ ಹಣೇಪಟ್ಟಿ ಕಟ್ಟುತ್ತಾರೆ ಕೆಲವರ ಬಗ್ಗೆ ಶ್ರೀಗಳು ಇಲ್ಲಸಲ್ಲದ ಆರೋಪ ಮಾಡಿ ಬಾಯಿಮುಚ್ವಿಸುವ ಕೆಲಸ ಮಾಡುತ್ತಿದ್ದಾರೆ.ಸರ್ವಾಧಿಕಾರಿಯಂತೆ ವರ್ತಿಸುತ್ತಾರೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಆನಗೋಡು ನಂಜುಂಡಪ್ಪ ಮತ್ತಿತರರಿದ್ದರು.