ತರಳಬಾಳು ಕೋವಿಡ್ ಕೇರ್ ಸೆಂಟರ್ ಉದ್ಘಾಟನೆ

ದಾವಣಗೆರೆ ಮೇ. 16; ಕೋವಿಡ್ ಸೋಂಕಿತರಿಗಾಗಿ ದಾವಣಗೆರೆ-ಶಿರಮಗೊಂಡನಹಳ್ಳಿ ಮಾರ್ಗದಲ್ಲಿರುವ ತರಳಬಾಳು ವಿದ್ಯಾರ್ಥಿನಿಯರ ವಸತಿ ನಿಲಯವನ್ನು ಕೋವಿಡ್ ಕೇರ್ ಸೆಂಟರ್ ಆಗಿ ವ್ಯವಸ್ಥೆಗೊಳಿಸಲಾಗಿದ್ದು ಸಂಸದ ಜಿ.ಎಂ. ಸಿದ್ದೇಶ್ವರ್ ಉದ್ಘಾಟಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ಜಿ.ಎಂ. ಸಿದ್ದೇಶ್ವರ ಅವರು, ಕೋವಿಡ್ ಸೋಂಕು ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಸೋಂಕಿತರಿಂದ ಇತರರಿಗೆ ರೋಗ ಹರಡುವುದನ್ನು ತಡೆಗಟ್ಟುವ ಸಲುಗಾಗಿ ಜಿಲ್ಲೆಯಲ್ಲಿ ವಿವಿಧೆಡೆ ವ್ಯವಸ್ಥಿತವಾಗಿ ಕೋವಿಡ್ ಕೇರ್ ಸೆಂಟರ್‌ಗಳನ್ನು ಸ್ಥಾಪಿಸಲಾಗುತ್ತಿದೆ. ನಗರಕ್ಕೆ ಸಮೀಪದಲ್ಲಿರುವ ತರಳಬಾಳು ವಿದ್ಯಾರ್ಥಿನಿಯರ ವಸತಿ ನಿಲಯವನ್ನು ಕೋವಿಡ್ ಕೇರ್ ಸೆಂಟರ್ ಆಗಿಸಲು ತರಳಬಾಳು ಜಗದ್ಗುರುಗಳಾದ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಗಳಿಗೆ ಕೋರಿದಾಗ, ಸ್ವಾಮೀಜಿಗಳು, ತಕ್ಷಣವೇ ಒಪ್ಪಿಗೆ ಸೂಚಿಸಿ, ವಸತಿ ನಿಲಯವನ್ನು ಕೋವಿಡ್ ಕೇರ್ ಸೆಂಟರ್‌ಗಾಗಿ ಒದಗಿಸಿದ್ದಾರೆ, ಅಲ್ಲದೆ ಅಗತ್ಯವಿರುವ ಎಲ್ಲ ಸಹಕಾರವನ್ನೂ ನೀಡುವುದಾಗಿ ಹೇಳಿದ್ದಾರೆ. ಜನತೆಯ ಪರವಾಗಿ ಸ್ವಾಮೀಜಿಗಳಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇವೆ. ತರಳಬಾಳು ವಸತಿ ನಿಲಯದ 30 ಕೊಠಡಿಗಳನ್ನು ಒದಗಿಸಿದ್ದು, ಪ್ರತಿ ಕೊಠಡಿಯಲ್ಲಿ 03 ಬೆಡ್ ವ್ಯವಸ್ಥೆ ಇದೆ. ಹೀಗಾಗಿ ಒಟ್ಟು 90 ಜನರಿಗೆ ಕೋವಿಡ್ ಕೇರ್ ಸೆಂಟರ್‌ನಲ್ಲಿ ಸ್ಥಳಾವಕಾಶ ಕಲ್ಪಿಸಬಹುದಾಗಿದೆ. ಅಲ್ಲದೆ ಇಲ್ಲಿನ ವಾತಾವರಣವೂ ಹಿತಕರವಾಗಿದ್ದು, ಬಿಸಿನೀರು, ಉತ್ತಮ ಊಟೋಪಹಾರದ ವ್ಯವಸ್ಥೆ ಒದಗಿಸಲಾಗುವುದು. ಕೋವಿಡ್ ಸೋಂಕಿಗೆ ಒಳಗಾಗಿ, ಮನೆಯಲ್ಲಿ ಒಂದೇ ಶೌಚಾಲಯ, ಬಾತ್‌ರೂಂ ಹೊಂದಿರುವವರು ಹೋಂ ಐಸೋಲೇಷನ್ ನಲ್ಲಿ ಮನೆಯಲ್ಲಿ ಒಂದೇ ಶೌಚಾಲಯ, ಬಾತ್‌ರೂಂ ಹೊಂದಿರುವ ಸೋಂಕಿತರು, ಯಾವುದೇ ಕಾರಣಕ್ಕೂ ಹೋಂ ಐಸೋಲೇಷನ್‌ನಲ್ಲಿ ಇರಬಾರದು. ಇದರಿಂದಾಗಿ ಮನೆಯ ಇತರೆ ಸದಸ್ಯರಿಗೂ ಸೋಂಕು ಹರಡುವ ಸಾಧ್ಯತೆ ಹೆಚ್ಚು. ಹೀಗಾಗಿ ಇಂತಹ ಯಾವುದೇ ರೋಗಲಕ್ಷಣಗಳು ಕಂಡುಬರದ, ಎ-ಸಿಂಮ್ಟಮ್ಯಾಟಿಕ್ ಇದ್ದು, ಮನೆಯಲ್ಲಿ ಸೂಕ್ತ ವ್ಯವಸ್ಥೆ ಇಲ್ಲದವರಿಗೆ, ಇಲ್ಲಿನ ಕೋವಿಡ್ ಕೇರ್ ಸೆಂಟರ್‌ನಲ್ಲಿ ನಿಗಾದಲ್ಲಿ ಇರಿಸಲಾಗುವುದು. ಕೋವಿಡ್ ಕೇರ್ ಸೆಂಟರ್‌ಗೆ ವೈದ್ಯರ ಶಿಫಾರಸಿನ ಮೇರೆಗೆ ದಾಖಲಾಗುವ ಎ-ಸಿಂಮ್ಟಮ್ಯಾಟಿಕ್ ಸೋಂಕಿತರಿಗೆ ಉತ್ತಮ ರೀತಿಯಲ್ಲಿ ಊಟೋಪಹಾರ, ಬಿಸಿನೀರಿನ ವ್ಯವಸ್ಥೆ ಇದೆ. ಸೋಂಕಿತರ ಆರೈಕೆಗಾಗಿ ವೈದ್ಯರು ಹಾಗೂ ನರ್ಸ್ಗಳ ವ್ಯವಸ್ಥೆಯನ್ನು ಮಾಡಲಾಗಿದೆ. ಕೇವಲ ಖಾಸಗಿ ವಸತಿ ನಿಲಯಗಳು ಮಾತ್ರವಲ್ಲದೆ, ಬಿಸಿಎಂ ವಸತಿ ನಿಲಯಗಳು, ಕಲ್ಯಾಣಮಂಟಪಗಳನ್ನು ಕೂಡ ಅವಶ್ಯಕತೆ ಎನಿಸಿದಲ್ಲಿ ಕೋವಿಡ್ ಕೇರ್ ಸೆಂಟರ್‌ಗಳನ್ನಾಗಿ ಬಳಸಿಕೊಳ್ಳುತ್ತೇವೆ ಎಂದು ತಿಳಿಸಿದರು.ಆಕ್ಸಿಜನ್ ಕೊರತೆ ನೀಗಿಸುವ ಸಲುವಾಗಿ ಕೇಂದ್ರ ಸರ್ಕಾರ 84 ಲಕ್ಷ ರೂ. ವೆಚ್ಚದ 10 ಕೆ.ಎಲ್. ಆಕ್ಸಿಜನ್ ಘಟಕ ಮಂಜೂರು ಮಾಡಿದ್ದು, ಈಗಾಗಲೆ ಕಂಪನಿಯೊಂದಿಗೆ ಸಮನ್ವಯ ಸಾಧಿಸಿದ್ದು, 20 ದಿನಗಳೊಳಗೆ ಕಾರ್ಯಾರಂಭವಾಗುವ ಸಾಧ್ಯತೆ ಇದೆ. ಅಲ್ಲದೆ ತಮ್ಮ ತಂದೆ-ತಾಯಿಯವರ ಹೆಸರಿನಲ್ಲಿರುವ ಟ್ರಸ್ಟ್ ವತಿಯಿಂದಲೂ ದಾವಣಗೆರೆ ಹಾಗೂ ಜಗಳೂರಿನಲ್ಲಿ ಆಕ್ಸಿಜನ್ ಘಟಕ ಪ್ರಾರಂಭಿಸಲು ನಿರ್ಧರಿಸಲಾಗಿದೆ. ಸೌರ್ಹಾದ ಬ್ಯಾಂಕ್ ಹಾಗೂ ಯೂನಿಯನ್ ಬ್ಯಾಂಕ್‌ಗಳೊಂದಿಗೆ ಸಭೆ ನಡೆಸಿ ಅವರಿಂದ ಆಕ್ಸಿಜನ್ ಮಷಿನ್ ಖರೀದಿಸಲು ಚರ್ಚೆ ನಡೆಸುತ್ತೇವೆ ಎಂದರು.ಈ ಸಂದರ್ಭದಲ್ಲಿ ಶಾಸಕ ಎಸ್.ಎ ರವೀಂದ್ರನಾಥ್,ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಮೇಯರ್ ಎಸ್.ಟಿ. ವೀರೇಶ್, ಆಯುಕ್ತ ವಿಶ್ವನಾಥ ಮುದಜ್ಜಿ, ಡಿಹೆಚ್‌ಒ ಡಾ. ನಾಗರಾಜ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಸುರೇಶ್ ಬಾರ್ಕಿ, ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ. ನಟರಾಜ್ ಹಾಗೂ ಇತರರು ಉಪಸ್ಥಿತರಿದ್ದರು.