
(ಸಂಜೆವಾಣಿ ವಾರ್ತೆ)
ಬಾಗಲಕೋಟೆ ,ಆ.2 : ಇಂದಿನ ತಂತ್ರಜ್ಞಾನ ಯುಗದಲ್ಲಿ ಗ್ರಂಥಾಲಯಗಳನ್ನು ಡಿಜಿಟಲೀಕರಣಗೊಳಿಸುವುದು ಅನಿವಾರ್ಯವಾಗಿದೆ. ಅದಕ್ಕಾಗಿ ವಿಶೇಷ ತರಬೇತಿ ಪಡೆದ ನೀವು ಗ್ರಂಥಾಲಯಗಳನ್ನು ಅಭಿವೃದ್ದಿ ಪಡಿಸಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಎನ್.ವಾಯ್ ಬಸರಿಗಿಡದ ಹೇಳಿದರು.
ಅವರು ನವನಗರದ ಜಿಲ್ಲಾ ತರಬೇತಿ ಸಂಸ್ಥೆಯಲ್ಲಿ ಆಯೋಜಿಸಲಾಗಿದ್ದ, ಗ್ರಾಮೀಣ ಮತ್ತು ಪಂಚಾಯತ್ ರಾಜ್ ಇಲಾಖೆಯ ಗ್ರಾಮ ಪಂಚಾಯತ್ ಗ್ರಂಥಾಲಯ ಮೇಲ್ವೀಚಾರಕರಿಗೆ ಗ್ರಾಂಥಾಲಯಗಳ ಮೇಲ್ವಿಚಾರಣೆ ಮತ್ತು ನಿರ್ವಹಣೆ ಬಗ್ಗೆ ನಡೆದ ಐದು ದಿನಗಳ ತರಬೇತಿ ಕಾರ್ಯಕ್ರಮದ ಮುಕ್ತಾಯ ಸಭೆಯಲ್ಲಿ ಮಾತನಾಡುತ್ತಾ, ಮೋಬೈಲ್ ಬಂದಾಗಿನಿಂದ ಓದುವವರ ಸಂಖ್ಯೆ ಕಡಿಮೆಯಾಗಿದ್ದು, ಓದುಗರ ಆಕರ್ಷಣೆಗಾಗಿ ಇಂದು ಡಿಜಿಟಲ್ ಗ್ರಂಥಾಲಯಗಳನ್ನು ಪ್ರಾರಂಭಿಸಲಾಗುತ್ತಿದ್ದು, ಜಿಲ್ಲೆಯ 195 ಗ್ರಾಮ ಪಂಚಾಯತಗಳ ಪೈಕಿ ಕೇವಲ 15 ಗ್ರಾಮ ಪಂಚಾಯತಗಳಿಗೆ ಈ ಸೌಲಭ್ಯವಿಲ್ಲ ಮತ್ತು 21 ಗ್ರಂಥಾಲಯಗಳ ಮೇಲ್ವಿಚಾರಕರ ಕೊರತೆ ಇದೆ ಎಂದರು. ಈಗ 180 ಗ್ರಾಮ ಪಂಚಾಯತಗಳ ಗ್ರಂಥಾಲಯ ಮೇಲ್ವಿಚಾರಕರಿಗೆ ಡಿಜಿಟಲ್ ತರಬೇತಿ ನೀಡಲಾಗುತ್ತಿದ್ದು ಇದನ್ನು ಸದುಪಯೋಗ ಪಡಿಸಿಕೊಳ್ಳಬೆಕು ಎಂದು ಹೇಳಿದರು.
ಸರಕಾರದ ನಿರ್ದೇಶನದಂತೆ ಪ್ರತಿಯೊಂದು ಗ್ರಂಥಾಲಯಕ್ಕೂ ಇನ್ನೊಂದು ಕಂಪ್ಯೂಟರ್ ಕೊಡಲಾಗುತ್ತಿದ್ದು ಮತ್ತು ಓದುಗರ ಆಕರ್ಷಣೆಗಾಗಿ ಕೇರಂ ಮತ್ತು ಚೇಸ್ ಕ್ರೀಡಾ ಸಾಮಗ್ರಿಗಳ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಹೇಳಿದರು.
ಗ್ರಂಥಾಲಯ ಮೇಲ್ವಿಚಾರಕರು, ಶಾಲಾಮಕ್ಕಳಿಗೆ, ವೃದ್ದಓದುಗರಿಗೆ, ಮಹಿಳೆಯರಿಗೆ, ಅಂಗÀವಿಕಲರಿಗೆ ಓದಲು ಅನುವು ಮಾಡಿಕೊಡಬೇಕು ಮತ್ತು ಕೊಟ್ಟ ಪುಸ್ತಕಗಳನ್ನು ಮರಳಿಸಿಕೊಂಡು ಅಚ್ಚುಕಟ್ಟಾಗಿ ಇಡಬೇಕು ಎಂದರು. ಏನಾದರು ಅಡಚಣೆಯಾದಾಗ ಗ್ರಾಮ ಪಂಚಾಯತ ಪಿಡಿಓ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸಿಕೊಳ್ಳಬೆಕು. ಅಲ್ಲಿ ತೆರಿಗೆಯಿಂದ ಬಂದ ಹಣವನ್ನು ಇಂತಹ ಕಾರ್ಯಗಳಿಗೆ ಬಳಸಿಕೊಳ್ಳುವ ಅವಕಾಶ ಇದೆ ಎಂದರು.
ಗ್ರಂಥಾಲಯಗಳ ಮುಖ್ಯಸ್ಥ ಯಮನೂರಪ್ಪ ಮಾತನಾಡುತ್ತಾ, ಗ್ರಾಮೀಣ ಮಟ್ಟದಲ್ಲಿ ಗ್ರಂಥಾಲಯಗಳು ಹೆಚ್ಚು ಕಾರ್ಯ ನಿರ್ವಹಿಸುತ್ತಿದ್ದು, ಜಿಲ್ಲೆಯ ಜಮಖಂಡಿ ತಾಲೂಕಿನ ಸಾವಳಗಿ ಗ್ರಂಥಾಲಯವು ಜಿಲ್ಲೆಯಲ್ಲಿಯೇ ಪ್ರಥಮ ಸ್ಥಾನ ಪಡೆದಿದೆ ಎಂದರು. ಅಧ್ಯಕ್ಷತೆ ವಹಿಸಿದ ಪ್ರಾಚಾರ್ಯ ಎಮ್.ಎಸ್ ನಟರಾಜ ಮಾತನಾಡಿ ಕಳೆದ ಎರಡು-ಮೂರು ತಿಂಗಳುಗಳಿಂದ ತರಬೇತಿ ನೀಡಬೇಕೆಂಬ ಉದ್ದೇಶವಿತ್ತು. ಕಾರಣಾಂತರಗಳಿಂದ ಮೂಂದೂಡಲ್ಪಟ್ಟು ಈಗ ಮೂರು ಹಂತಗಳಲ್ಲಿ ತರಬೇತಿ ನಡೆಸಲಾಗುತ್ತಿದೆ ಎಂದರು. ಕಾರ್ಯಕ್ರಮದಲ್ಲಿ ಸಹಾಯಕ ಯೋಜನಾಧಿಕಾರಿ ಭೀಮಪ್ಪ ತಳವಾರ, ಉಪಪ್ರಾಚಾರ್ಯ ಮಲ್ಲಿಕಾರ್ಜುನ ಗುಡೂರ, ಜಿಲ್ಲಾ ಪಂಚಾಯತನ ಸಹಾಯಕ ನೀರ್ದೇಶಕ ವೆಂಕಟೇಶ ತಿಮ್ಮನಾಯಕ, ತರಬೇತುದಾರ ಮಂಗಲಾ ಸೇರಿದಂತೆ ಮುಂತಾದವರು ಇದ್ದರು.