ತರಬಹಳ್ಳಿ ವಿವಿಧ ಕಾಮಗಾರಿಗೆ ಎಂಟಿಬಿ ಚಾಲನೆ

ಹೊಸಕೋಟೆ,ಮಾ.೧೨-ಆಂಧ್ರದ ರಾಯಲಸೀಮ ರೀತಿಯಲ್ಲಿ ಹೊಸಕೋಟೆ ಕ್ಷೇತ್ರದಲ್ಲಿ ಮತದಾರರನ್ನು ಎದುರಿಸಿ ನಡೆಸುತ್ತಿದ್ದ ರಿಗ್ಗಿಂಗ್ ರಾಜಕಾರಣಕ್ಕೆ ಬ್ರೇಕ್ ಹಾಕಿದ್ದು ನಾನು. ೨೦೨೩ರಲ್ಲಿ ಜನ ನಮ್ಮನ್ನು ಗೆಲ್ಲಿಸಿ ಜನರ ಸೇವೆ ಮಾಡಲು ಅವಕಾಶ ಕಲ್ಪಿಸಿಕೊಡುತ್ತಾರೆ ಸಚಿವ ಎಂ.ಟಿ.ಬಿ. ನಾಗರಾಜ್ ತಿಳಿಸಿದ್ದಾರೆ.
ತಾಲ್ಲೂಕಿನ ಜಡಿಗೇನಹಳ್ಳಿ ಹೋಬಳಿಯ ತರಬಹಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ನಂತರ ಮಾತನಾಡಿದರು.
ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರು ಮತಗಟ್ಟೆಗಳಿಗೆ ಬಂದು ಮತದಾನ ಮಾಡುತ್ತಿರಲಿಲ್ಲ, ಬದಲಿಗೆ ಏಜೆಂಟರೇ ರಿಗ್ಗಿಂಗ್ ಮಾಡಿ ಚುನಾವಣೆ ನಡೆಸುತ್ತಿದ್ದರು. ೯೦ರ ದಶಕದಲ್ಲಿ ಬಚ್ಚೇಗೌಡರ ಕುಟುಂಬ ಆಂದ್ರದ ರಾಯಲಸೀಮ ರೀತಿಯಲ್ಲಿ ರಿಗ್ಗಿಂಗ್ ಮತ್ತು ದೌರ್ಜನ್ಯ ರಾಜಕಾರಣದಿಂದ ಭಯಭೀತಿ ಉಂಟು ಮಾಡುತ್ತಿದ್ದರು. ಎಸ್.ಎಂ. ಕೃಷ್ಣ ಅವರು ಹೊಸಕೋಟೆ ಕ್ಷೇತ್ರಕ್ಕೆ ನನ್ನ ಕರೆತಂದ ನಂತರ ಇವೆಲ್ಲದಕ್ಕೂ ಬ್ರೇಕ್ ಬಿದ್ದಿದೆ. ನಾನು ಈ ಕ್ಷೇತ್ರಕ್ಕೆ ಬಂದ ನಂತರ ಜೀರೋದಲ್ಲಿದ್ದಂತಹ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿ ಹೀರೋ ಮಾಡಿದೆ. ಸಮ್ಮಿಶ್ರ ಸರಕಾರದಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ನೀಡುತ್ತಿಲ್ಲವೆಂದು ರಾಜೀನಾಮೆ ನೀಡಿದೆ ಎಂದರು.
ವಿಜಯ ಸಂಕಲ್ಪ ರಥಯಾತ್ರೆ :
ಮಾರ್ಚ್ ೧೨ರ ಭಾನುವಾರ ಬೆಳಿಗ್ಗೆ ೮-೩೦ಕ್ಕೆ ಬಿಜೆಪಿ ವಿಜಯ ಸಂಕಲ್ಪ ರಥಯಾತ್ರೆ ಅಂಗವಾಗಿ ಹೊಸಕೋಟೆ ಟೋಲ್‌ನಿಂದ ಅವಿಮುಕ್ತೇಶ್ವರ ದೇವಾಸ್ಥನದವರೆಗೆ ಸುಮಾರು ೪೦೦ ರಿಂದ ೬೦೦ ಬೈಕ್‌ಗಳೊಂದಿಗೆ ಬೈಕ್ ರ್‍ಯಾಲಿ ಹಮ್ಮಿಕೊಂಡಿದ್ದು ಕಾರ್‍ಯಕ್ರಮದಲ್ಲಿ ವಿವಿಧ ಕಲಾತಂಡಗಳೊಂದಿಗೆ ಸಚಿವರಾದ ಅಶೋಕ್, ಸುಧಾಕರ್, ಅಶ್ವಥ್ ನಾರಾಯಣ್, ಮುನಿರತ್ನಂ, ವಿಧಾನಪರಿಷತ್ ಸದಸ್ಯರಾದ ಛಲವಾದಿ ನಾರಾಯಣಸ್ವಾಮಿ, ಯುವ ಮುಖಂಡ ನಿತೀಶ್ ಪುರುಷೋತ್ತಮ್ ಸೇರಿದಂತೆ ಅನೇಕರು ಈ ಕಾರ್‍ಯಕ್ರಮದಲ್ಲಿ ಭಾಗವಹಿಸಿ ಹೊಸಕೋಟೆ ಕ್ಷೇತ್ರದಲ್ಲಿ ಯಶಸ್ವಿಯಾಗಿ ಬಿಜೆಪಿ ವಿಜಯ ಸಂಕಲ್ಪ ರಥಯಾತ್ರೆಯನ್ನು ನಡೆಸಿ ಬಿಜೆಪಿ ಪಕ್ಷದ ಬಲವರ್ಧನೆಗೆ ಒತ್ತು ನೀಡಲಾಗುವುದು ಎಂದು ಸಚಿವ ಎಂಟಿಬಿ ನಾಗರಾಜ್ ತಿಳಿಸಿದರು.