ತರಗತಿಗಳನ್ನು ಪರಿಣಾಮಕಾರಿಯಾಗಿ ನಡೆಸುವುದು ಅತ್ಯಗತ್ಯ-ಹಂಚಾಟೆ

ಧಾರವಾಡ,ಜ.6-6 ರಿಂದ 9 ನೇ ತರಗತಿಗಳಿಗೆ ವಿದ್ಯಾಗಮ ಕಾರ್ಯಕ್ರಮ ಮಕ್ಕಳ ಕಲಿಕೆಗೆ ಪೂರಕವಾಗಿದ್ದು ಇದನ್ನು ಅತ್ಯಂತ ಕಾಳಜಿ ಪೂರ್ವಕವಾಗಿ ಅನುಷ್ಠಾನಗೊಳಿಸಬೇಕು. ಹಾಗೂ ಎಸ್‍ಎಸ್‍ಎಲ್‍ಸಿ ಮಕ್ಕಳ ತರಗತಿಯನ್ನು ಪರಿಣಾಮಕಾರಿಯಾಗಿ ನಡೆಸುವುದು ಅತ್ಯಗತ್ಯ ಎಂದು ಧಾರವಾಡ ಜಿಲ್ಲೆಯ ಉಪನಿರ್ದೇಶಕರಾದ ಮೋಹನಕುಮಾರ ಹಂಚಾಟೆ ಅಭಿಪ್ರಾಯಪಟ್ಟರು.
ವಿದ್ಯಾಗಮ ಹಾಗೂ ಎಸ್‍ಎಸ್‍ಎಲ್‍ಸಿ ತರಗತಿಗಳ ಅನುಷ್ಠಾನ ಕುರಿತು ಧಾರವಾಡ ಶಹರದ ಬಿಆರ್‍ಸಿಯಲ್ಲಿ ನಡೆದ ಗೂಗಲ್ ಸಭೆಯಲ್ಲಿ ಮಾತನಾಡಿದ ಅವರು ಕೊರೋನ ನಂತರ ಪ್ರಾರಂಭವಾದ ಶಾಲೆಗಳ ಪ್ರಾರಂಭ ಹಾಗೂ ವಿದ್ಯಾಗಮ ಎರಡೂ ಕಾರ್ಯಕ್ರಮಗಳ ಸಮರ್ಪಕ ಅನುಷ್ಠಾನ ಹಾಗೂ ಯಶಸ್ಸು ಎಲ್ಲ ಮುಖ್ಯೋಪಾಯರುಗಳು ಹಾಗೂ ಶೈಕ್ಷಣಿಕ ಮೇಲ್ವಿಚಾರಕರ ಮೇಲಿದೆ” ಎಂದು ತಿಳಿಸಿದರು.
ನಂತರ ಕ್ಷೇತ್ರ ಶಿಕ್ಷಣಾಧಿಕಾರಿಗಳು ಎ.ಎ. ಖಾಜಿಯವರು ಮಾತನಾಡುತ್ತಾ “ವಿದ್ಯಾಗಮ ಹಾಗೂ ಎಸ್‍ಎಸ್‍ಎಲ್‍ಸಿ ತರಗತಿಗಳಲ್ಲಿ ಅತ್ಯಂತ ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದು ಮಕ್ಕಳ ದಾಖಲಾತಿ ನಿರಂತರವಾಗಿ ಹೆಚ್ಚಿಸುವಂತೆ ಎಲ್ಲ ಶಿಕ್ಷಕರು ಶ್ರಮವಹಿಸಬೇಕು ಹಾಗೂ ಶಾಲೆಯ ಸಮಗ್ರ ಸ್ವಚ್ಛತೆ, ಕೋವಿಡ್-19 ರ ಎಸ್‍ಓಪಿಯ ಎಲ್ಲ ಅಂಶಗಳ ಉಲ್ಲಂಘನೆಯಾಗದಂತೆ ಕ್ರಮವಹಿಸಲು ಸೂಚಿಸಿದರು.
ಶಹರ ವಲಯದ ಸಮನ್ವಯಾಧಿಕಾರಿಗಳಾದ ಎಂ.ವಿ. ಅಡಿವೇರ, ಕೋವಿಡ್ ಪರೀಕ್ಷೆಯನ್ನು ಎಲ್ಲ ಶಿಕ್ಷಕರು ಮಾಡಿಸಿಕೊಂಡು ಪ್ರಮಾಣ ಪತ್ರದೊಂದಿಗೆ ಹಾಗೂ ಪಾಲಕರ ಒಪ್ಪಿಗೆಯೊಂದಿಗೆ ಶಾಲೆಗಳನ್ನು ಎಸ್‍ಓಪಿ ಆಧಾರದ ಮೇಲೆ ನಡೆಸುವಂತೆ ಸೂಚಿಸಿದರು. ಪ್ರತಿದಿನ ಮಕ್ಕಳ ಹಾಜರಾತಿ ಹಾಗೂ ಎಸ್‍ಎಟಿಎಸ್‍ನಲ್ಲಿ ಇಂದೀಕರಿಸುವುದು. ಮುಖ್ಯೋಪಾಧ್ಯಾಯರ ಪ್ರಮುಖ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಮುಖ್ಯೋಪಾಧ್ಯಾಯರುಗಳು ಹಾಗೂ ಶಿಕ್ಷಕರು ಪೂರ್ವಸಿದ್ಧತೆಗಾಗಿ ಇಲಾಖೆಯ ಅನುದಾನದ ಜೊತೆ ತಮ್ಮ ವೈಯಕ್ತಿಕ ಹಣವನ್ನು ಖರ್ಚು ಮಾಡಿ ವಿದ್ಯಾಗಮ ಹಾಗೂ ಎಸ್‍ಎಸ್‍ಎಲ್‍ಸಿ ತರಗತಿಗಳ ಪುನರಾರಂಭ ಯಶಸ್ವಿಗೊಳಿಸಿದ್ದಕ್ಕೆ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಉಪನಿರ್ದೇಶಕ ಕಾರ್ಯಾಲಯದ ಎಪಿಸಿಓರವರಾದ ಶಿವಲೀಲಾ ಕಳಸಣ್ಣವರ, ವಿದ್ಯಾಗಮ ನೋಡಲ್ ಜಯಲಕ್ಷ್ಮಿ ಹೆಚ್ ಹಾಜರಿದ್ದರು. ಈ ಸಭೆಯಲ್ಲಿ ಎಲ್ಲ ಪ್ರೌಢ ಶಾಲೆಯ ಮುಖ್ಯ ಶಿಕ್ಷಕರು ಹಾಗೂ ಶೈಕ್ಷಣಿಕ ಮೇಲ್ವಿಚಾರಕರು ಹಾಜರಿದ್ದರು. ಮೊದಲನೇ ಗೂಗಲ್ ಸಭೆ ಕಾರ್ಯಕ್ರಮವನ್ನು ಬಿಆರ್‍ಪಿಯವರಾದ ವಿಜಯಕುಮಾರ ಕರಿಕಟ್ಟಿ ನಿರೂಪಿಸಿದರು. ಎರಡನೇ ಗೂಗಲ್ ಮೀಟ್ ಕಾರ್ಯಕ್ರಮವನ್ನು ಇಸಿಓ ಶಕುಂತಲಾ ಗಡೆಂಕನಹಳ್ಳಿ ನಿರೂಪಿಸಿದರು.