ತರಕಾರಿ, ಹಣ್ಣುಗಳ ಬೆಲೆ ಗಗನಕ್ಕೇರಿಕೆ ಗ್ರಾಹಕರ ಪರದಾಟ

ಬಾಬು ಅಲಿ ಕರಿಗುಡ್ಡ.
ದೇವದುರ್ಗ.ನ.೪-ಮುಂಗಾರು ಹಾಗೂ ಹಿಂಗಾರು ಮಳೆಯಾದರೂ, ಆಗದಿದ್ದರೂ ರೈತರಿಗೆ ಮಾತ್ರವಲ್ಲ ಸಾಮಾನ್ಯ ಗ್ರಾಹಕರಿಗೂ ಬಿಸಿ ತಟ್ಟಲಿದೆ. ಈ ವರ್ಷ ಹಿಂಗಾರು ಸತತ ೪೫ದಿನಕ್ಕೂ ಹೆಚ್ಚು ಕಾಲ ಸುರಿದ ಕಾರಣ ತರಕಾರಿ ಮಾತ್ರವಲ್ಲ ಹಣ್ಣು ಹಂಪಲುಗಳ ಬೆಲೆ ಏರಿಕೆಯಾಗಿದೆ.
ತಾಲೂಕು ಬಹುತೇಕ ನೀರಾವರಿ ಪ್ರದೇಶವಾಗಿದ್ದರಿಂದ ತರಕಾರಿ ಬೆಳೆಗಾರರ ಸಂಖ್ಯೆ ತುಂಬಾ ವಿರಳ. ಅಲ್ಲದೆ ಬೆರಳೆಣಿಕೆಯಷ್ಟು ತೋಟಗಾರಿಕೆ ಬೆಳೆಗಾರರಿದ್ದಾರೆ. ಸಾಮಾನ್ಯ ಹಾಗೂ ಹಬ್ಬ ಹರಿದಿನಗಳಲ್ಲಿ ತರಕಾರಿ, ಹಣ್ಣಿನ ಬೇಡಿಕೆ ಹೆಚ್ಚಾದರೆ, ಬೇರೆ ತಾಲೂಕು, ಜಿಲ್ಲೆಯಿಂದ ಆಮದು ಮಾಡಿಕೊಳ್ಳುವ ಸ್ಥಿತಿಯಿದೆ. ಇದರಿಂದ ಬೆಲೆಗಳು ಏರಿಕೆಯಾಗಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಬೀಳುತ್ತಿದೆ.
ತರಕಾರಿ ಜತೆಗೆ ಹಣ್ಣುಗಳ ಬೆಲೆ ಹೆಚ್ಚಾಗಿದ್ದು, ಸಿರಿಧಾನ್ಯಗಳ ಬೆಲೆ ಕೂಡ ಶೇ.೨೦ ಏರಿಕೆ ಕಂಡಿವೆ. ಸತತ ೪೫ದಿನ ಮಳೆ ಹಾಗೂ ಕೃಷ್ಣಾ ನದಿ ನೆರೆಯಿಂದ ತರಕಾರಿ ಬೆಳೆಗೆ ಹೊಡೆತ ಬಿದ್ದಿವೆ. ಈರುಳ್ಳಿ, ಟೊಮಾಟೊ, ಮೆಣಸಿನಕಾಯಿ ಬೆಳೆಯಲ್ಲಿ ನೀರು ನಿಂತು ಹಾನಿಗೀಡಾಗಿವೆ. ಇದರ ಜತೆ ಸಿರಿಧಾನ್ಯ ಬೆಳೆಗಳು ಕೂಡ ಸತತ ಮಳೆಗೆ ಹೂವು, ಮೊಗ್ಗು ಉದುರಿ ಇಳುವರಿ ಕುಂಠಿತಗೊಂಡಿದೆ. ಇದರಿಂದ ಬೆಳೆ ಕಡಿಮೆ ಬಂದಿದ್ದು, ಬೇಡಿಕೆ ಹೆಚ್ಚಾಗಿದೆ. ಅನಿವಾರ್ಯವಾಗಿ ಬೇರೆಕಡೆಯಿಂದ ಆಮದು ಮಾಡಿಕೊಂಡರೆ ಟ್ರಾನ್ಸ್‌ಫೋರ್ಟ್ ಚಾರ್ಜ್ ಹೆಚ್ಚಾಗಲಿದೆ.
ಮಧ್ಯವರ್ತಿಗಳ ಹಾವಳಿಯಿಂದ ಈರುಳ್ಳಿ ಬೆಲೆ ರೈತರಿಗೆ ಅಷ್ಟೇನು ಲಾಭ ತಂದಿಲ್ಲ. ಆದರೆ, ಗ್ರಾಹಕರಿಗೆ ಮಾತ್ರ ಕಣ್ಣೀರು ತರಿಸುತ್ತಿದೆ. ಪ್ರತಿಕೆಜಿ ಈರುಳ್ಳಿ ೯೦-೧೦೦ ರೂ.ಗೆ ಮಾರಾಟವಾಗುತ್ತಿದೆ. ಈರೇಕಾಯಿ ೮೦ರೂ., ಬದನೆಕಾಯಿ ೬೦ರೂ. ಕೆಜಿ, ಟೊಮಾಟೋ ೬೦ರೂ., ಮೆಣಸಿನಕಾಯಿ ೫೦-೬೦ರೂ., ಆಲುಗಡ್ಡೆ ೩೦-೪೦ ರೂ., ಚವಳಿಕಾಯಿ ೮೦ರೂ., ದೊಡ್ಡಮೆಣಸಿನಕಾಯಿ ೮೦ರೂ, ಬುಡಮೆಕಾಯಿ ೩೦-೪೦ರೂ., ಬೆಂಡೇಕಾಯಿ ೪೦-೫೦ ರೂ., ಹಾಗಲಕಾಯಿ ೩೦ರೂ. ಪ್ರತಿಕೆಜಿಗೆ ಮಾರಾಟವಾಗುತ್ತಿದೆ.
ಹಣ್ಣುಗಳ ಬೆಲೆ ಕೂಡ ಹೆಚ್ಚಾಗಿದ್ದು, ಸೇಬು ಪ್ರತಿಕೆಜಿಗೆ ೧೮೦-೨೦೦ರೂ., ದಾಳಿಂಬೆ ೧೨೦ರೂ., ದ್ರಾಕ್ಷಿ ೮೦ರೂ., ಸಪೋಟಾ ೪೦-೫೦ರೂ., ಸೀತಾಫಲ ೫೦ರೂ., ಪೇರಲಹಣ್ಣು ೪೦ರೂ., ನಿಂಬೆಹಣ್ಣು ೨೦ರೂ.ಗೆ ನಾಲ್ಕು, ಪಪ್ಪಾಯಿ ಗಾತ್ರದ ಮೇಲೆ ಬೆಲೆಯಿದೆ. ಇದಲ್ಲದೇ ಸಿರಿಧಾನ್ಯಗಳಾದ ಹಲಸಂಧಿ ೮೦ರೂ.ಗೆ ೧ಸೇರು, ಹೆಸರುಕಾಳು ೮೦-೧೦೦ರೂ. ಸೇರು, ಹುರುಳ್ಳಿ ೮೦ರೂ. ಸೇರಿನಂತೆ ಮಾರಾಟವಾಗುತ್ತಿದೆ. ಸತತ ಮಳೆಯಿಂ ಬೆಲೆಯಲ್ಲಿ ೨೦-೨೫ರೂ. ಏರಿಕೆಯಾಗಿದೆ ಎನ್ನುತ್ತಾರೆ ಗ್ರಾಹಕರು.

ಕೋಟ್=====

ಹಬ್ಬ ಹರಿದಿನಗಳಲ್ಲಿ ತರಕಾರಿ ಹಾಗೂ ಹಣ್ಣುಗಳ ಬೆಲೆ ಏರಿಕೆಯಾಗುವದ್ದು ಸಾಮಾನ್ಯ, ಅದರೆ ಕಾಲಿದಿನಗಳಲ್ಲಿ ದಿನ ನಿತ್ಯದ ವಸ್ತುಗಳು ಖರೀದಿ ಸಾಮನ್ಯ ವರ್ಗದ ಜನರಿಗೆ ತರಕಾರಿ ಕೊಳ್ಳಲು ಹಿಂದೇಟು ಹಾಕುವಂತಾಗಿದೆ. ಈ ಹಿಂದೆ ಕೆಜಿ ತರಕಾರಿ ಖರೀದಿ ಮಾಡುವವರು ಬೆಲೆ ಏರಿಕೆಯಿಂದ ಅರ್ಧ ಕೆಜಿ, ಪಾವ್ ಕೆಜಿ ಕೊಳ್ಳುವಂತಾಗಿದೆ. ಸತತ ಮಳೆಯಿಂದ ತರಕಾರಿ ಮಾರುಕಟ್ಟೆಗೆ ಬರುತ್ತಿಲ್ಲ.
ಮಾನಪ್ಪ,ರಂಗಮ್ಮ,
ಕಾಸಿಂಸಾಬ್ ದೇವದುರ್ಗ.