ತರಕಾರಿ ಮಾರುಕಟ್ಟೆ ಸ್ಥಳಾಂತರವಾದರು,ತಪ್ಪದ ಜನಜಂಗುಳಿ

ಕೆಂಭಾವಿ:ಎ.27:ಕೇಂದ್ರ ಹಾಗೂ ರಾಜ್ಯ ಸರಕಾರಗಳು ಕೊರೊನಾ ನಿಯಂತ್ರಣಕ್ಕೆ ಹರ ಸಾಹಸ ಮಾಡುತ್ತಿವೆ. ಸೆಮಿ ಲಾಕ್‍ಡೌನ್ ಹಾಗೂ ಲಾಕ್‍ಡೌನ್ ಅಂತಹ ಕಠಿಣ ಕ್ರಮಗಳನ್ನು ಪ್ರಯೋಗಿಸುತ್ತಿದ್ದರೂ ಕೆಳ ಹಂತದ ಅಧಿಕಾರಿಗಳು ಅದನ್ನು ಸಂಪೂರ್ಣವಾಗಿ ಜಾರಿಗೆ ತರಲಾಗದಿದ್ದರಿಂದ ಜನದಟ್ಟನೆಯನ್ನು ತಡೆಯಲು ಸಾಧ್ಯವಾಗುತ್ತಿಲ್ಲ.

ಸೋಮವಾರ ಪಟ್ಟಣದಲ್ಲಿ ವಾರದ ಸಂತೆಯ ನಿಮಿತ್ತ ಎಲ್ಲ ತರಕಾರಿ ಅಂಗಡಿಗಳನ್ನು ಎಪಿಎಮ್‍ಸಿಗೆ ಶಿಫ್ಟ್ ಮಾಡಲಾಗಿತ್ತು. ಎಲ್ಲ ವ್ಯಾಪಾರಸ್ಥರು ಒಂದೆಡೆ ಸೇರಿದ್ದರಿಂದ ಜನಜಂಗುಳಿ ಹೆಚ್ಚಾಗಿದ್ದರೂ ನಿಯಂತ್ರಿಸುವವರು ಯಾರು ಇಲ್ಲದಂತಾಗಿತ್ತು. ಅನೇಕರು ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ವ್ಯಾಪಾರ ಮಾಡುತ್ತಿರುವದು ಕಂಡು ಬಂತು. ಒಂದೆಡೆ ಹೆಚ್ಚು ಜನರನ್ನು ಸೇರಿಸಬಾರದು ಎಂದು ಸರಕಾರದ ಆದೇಶವಿದ್ದರೂ ವ್ಯಾಪಾರಸ್ಥರಾಗಲಿ, ಸಾರ್ವಜನಿಕರಾಗಲಿ ತಲೆ ಕೆಡಿಸಿಕೊಂಡಂತೆ ಕಾಣಲಿಲ್ಲ. ಸರಕಾರದ ಆದೇಶವನ್ನು ಪಾಲಿಸಿ ಜನರನ್ನು ನಿಯಂತ್ರಿಸಿಬೇಕಾದ ಅಧಿಕಾರಿಗಳು ಒಬ್ಬರು ಅಲ್ಲಿ ಕಂಡುಬರದೆ ಇರುವದು ಅನೇಕರ ಕೆಂಗಣ್ಣಿಗೆ ಗುರಿಯಾಯಿತು. ಪುರಸಭೆ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು ಜನರನ್ನು ಹಾಗೂ ವ್ಯಾಪಾರಸ್ಥರನ್ನು ನಿಯಂತ್ರಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿರುವದು ಕಂಡುಬಂತು.

ರಾಜ್ಯಾದ್ಯಾಂತ ಅಗತ್ಯ ಸೇವಾ ವಸ್ತುಗಳನ್ನು ಬಿಟ್ಟು ಯಾವದೇ ಅಂಗಡಿ ಮುಂಗಟ್ಟುಗಳನ್ನು ತೆರೆಯಬಾರದು ಎಂಬ ಆದೇಶವಿದ್ದರೂ ಕೆಲವು ಅಂಗಡಿಗಳು (ಬಟ್ಟೆ, ಅಟೋಮೊಬೈಲ್ಸ್ ಸೇರಿದಂತೆ ಇತರವು) ಕದ್ದು ಮುಚ್ಚಿ ವ್ಯಾಪಾರ ನಡೆಸುತ್ತಿರುವದು ಪುರಸಭೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವದೇ ಕ್ರಮ ಕೈಗೊಳ್ಳದೆ ಇರುವದು ಉಳಿದ ವ್ಯಾಪಾರಸ್ಥರಲ್ಲಿ ಅನುಮಾನ ಮೂಡಿಸಿದೆ. ಕೆಲ ವ್ಯಾಪಾರಸ್ಥರು ಅಧಿಕಾರಿಗಳಿಗೆ ಈ ಕುರಿತು ಫೋನ್ ಮಾಡಿಯೂ ಸಹ ತಿಳಿಸಿದ್ದಾರೆ ಎನ್ನಲಾಗುತ್ತಿದೆ. ಪುರಸಭೆ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಸಂಪೂರ್ಣ ಜವಾಬ್ಧಾರಿಯನ್ನು ತೆಗೆದುಕೊಂಡು ಸರಕಾರದ ಆದೇಶವನ್ನು ಪಾಲಿಸಬೇಕು ಮತ್ತು ಸಾರ್ವಜನಿಕರು, ವ್ಯಾಪಾರಸ್ಥರು ಸಹ ಇದಕ್ಕೆ ಸಹಕರಿಸಬೇಕು ಎಂಬುದು ಹಲವರ ಅಭಿಪ್ರಾಯವಾಗಿದೆ.