ತರಕಾರಿ ಮಾರುಕಟ್ಟೆ ಬಂದ್: ಮುಂದುವರಿದ ದಂಡದ ಬಿಸಿ, ವೃದ್ಧನ ಹೈಡ್ರಾಮಾ

ದಾವಣಗೆರೆ,ಮೇ.2- ಕೊರೊನಾ ನಿಯಂತ್ರಣ ಕ್ರಮವಾಗಿ ಜಾರಿಯಲ್ಲಿರುವ ಜನತಾ ಕರ್ಫ್ಯೂ ನಗರದಲ್ಲಿ ಮುಂದುವರೆದಿದ್ದು, ಅಗತ್ಯ ವಸ್ತುಗಳ ಖರೀದಿಗೆ ಕಳೆದ ನಾಲ್ಕು ದಿನಗಳಂತೆ ಬೆಳಿಗ್ಗೆ ನಾಲ್ಕು ಗಂಟೆ ಅವಕಾಶ ಇದೆ ಎಂದು ಭಾವಿಸಿ, ವ್ಯಾಪಾರಸ್ಥರು ಮಾರುಕಟ್ಟೆಗೆ ಆಗಮಿಸಿ ವ್ಯಾಪಾರ ಮಾಡುವಷ್ಟರಲ್ಲಿ ಪೊಲೀಸರೊಂದಿಗೆ ಸ್ಥಳಕ್ಕೆ ಬಂದ ತಹಶೀಲ್ದಾರ್ ಗಿರೀಶ್ ತರಕಾರಿ ಅಂಗಡಿಗಳನ್ನು ಮುಚ್ಚಿಸಿದರು. ಹೀಗಾಗಿ ವ್ಯಾಪಾರಸ್ಥರು ನಿರಾಸೆಯಿಂದ ಮನೆಗಳತ್ತ ತೆರಳಿದರು.ರಾಜ್ಯ ಸರ್ಕಾರ ಈ ಹಿಂದೆ ಅಗತ್ಯ ವಸ್ತುಗಳ ಖರೀದಿಗೆ ಬೆಳಿಗ್ಗೆ 6ರಿಂದ 10 ಗಂಟೆಯ ವರೆಗೆ ಅವಕಾಶ ಮಾಡಿಕೊಡಲಾಗಿತ್ತು. ಆದರೆ, ವ್ಯಾಪಕವಾಗಿ ಕೊರೊನಾ ಹರಡುತ್ತಿರುವುದರಿಂದ ಶನಿವಾರ ಮಾರ್ಗಸೂಚಿಗೆ ತಿದ್ದುಪಡಿ ತಂದು ಎಪಿಎಂಸಿ, ತರಕಾರಿ ಮಾರುಕಟ್ಟೆಗಳನ್ನು ಸಂಪೂರ್ಣ ಬಂದ್ ಮಾಡಿಸಲು ಆದೇಶ ಹೊರಡಿಸಿರುವ ಹಿನ್ನೆಲೆಯಲ್ಲಿ ಬೆಳ್ಳಂ ಬೆಳಿಗ್ಗೆ ಬೀದಿಗೆ ಇಳಿದ ತಹಶೀಲ್ದಾರ್ ಗಿರೀಶ್ ತರಕಾರಿ ಅಂಗಡಿಗಳನ್ನು ಬಂದ್ ಮಾಡಿಸಲು ಮುಂದಾದರು. ಈ ವೇಳೆ ಕೆಲ ವ್ಯಾಪಾರಸ್ಥರು ಪ್ರತಿರೋಧ ವ್ಯಕ್ತಪಡಿಸಿದರು. ಆಗ ತಹಶೀಲ್ದಾರ್ ಗಿರೀಶ್ ಸರ್ಕಾರ ಹೊಸ ಮಾರ್ಗಸೂಚಿಯಂತೆ ತರಕಾರಿ ಮಂಡಿ ಹಾಗೂ ಎಪಿಎಂಸಿ ಅಂಗಡಿಗಳನ್ನು ಬಂದ್ ಮಾಡಿಸಲಾಗುತ್ತಿದೆ. ಇನ್ನೂ ಮುಂದೆ ತಳ್ಳುವ ಗಾಡಿಯಲ್ಲಿ ಮಾತ್ರ ತರಕಾರಿ ಮಾರಾಟ ಮಾಡಲು ಅವಕಾಶವಿದೆ. ಹೀಗಾಗಿ ಎಲ್ಲರೂ ಅಂಗಡಿ ಮುಚ್ಚುವ ಮೂಲಕ ಕೊರೊನಾ ನಿಯಂತ್ರಣಕ್ಕೆ ಸಹರಿಸಬೇಕು ಎಂದು ಮನವಿ ಮಾಡಿದರು.
ಮುಂದುವರಿದ ದಂಡದ ಬಿಸಿ:
ಇನ್ನೂ ಪೊಲೀಸರು ಕರ್ಫ್ಯೂ ವೇಳೆಯಲ್ಲಿ ಅನಗತ್ಯವಾಗಿ ಓಡಾಡುವವರಿಗೆ ಕಡಿವಾಣ ಹಾಕಲು ದಂಡ ವಿಧಿಸುವುದನ್ನು ಮುಂದುವರೆಸಿದ್ದು, ನಗರದ ಪ್ರಮುಖ ರಸ್ತೆ, ವೃತ್ತಗಳಲ್ಲಿ ನಿಂತು ಅನಗತ್ಯವಾಗಿ ಓಡಾಡುವವರಿಗೆ, ಮಾಸ್ಕ್ ಧರಿಸದೆ ಇರುವವರಿಗೆ ದಂಡ ವಿಧಿಸುತ್ತಿದ್ದ ದೃಶ್ಯ ಅಲ್ಲಲ್ಲಿ ಕಂಡು ಬಂತು.
ವೃದ್ಧನ ಹೈಡ್ರಾಮಾ:
ಎಲ್ಲರಿಗೆ ದಂಡ ವಿಧಿಸುವಂತೆ ನಗರದ ರೈಲ್ವೆ ನಿಲ್ದಾಣದ ಎದುರಿನಲ್ಲಿ ಕಾಯಿ ಪೇಟೆ ನಿವಾಸಿ ಬಸವರಾಜಪ್ಪ ಎಂಬ ವಯೋ ವೃದ್ಧನಿಗೂ ಪೊಲೀಸರು 500 ರೂ. ದಂಡ ವಿಧಿಸಿದರು. ಆಗ ವಯೋ ವೃದ್ಧ ನಾನು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು, ಔಷಧಿ ಖರೀದಿಸಲು ಹೊರಗಡೆ ಬಂದಿದ್ದೆ. ಆದರೆ, ಪೊಲೀಸರು ನನಗೆ ಅನಗತ್ಯವಾಗಿ ದಂಡ ವಿಧಿಸಿದ್ದಾರೆ. ಹೀಗಾಗಿ ನಾನು ಇಲ್ಲಿಂದ ಕದಲುವುದಿಲ್ಲ ಎಂಬುದಾಗಿ ಪಟ್ಟು ಹಿಡಿದು ರಸ್ತೆಯಲ್ಲಿ ಕುಳಿತು ಹೈಡ್ರಾಮಾ ನಡೆಸಲು ಮುಂದಾದರು.
ಆಗ ಪೊಲೀಸರು ಎಷ್ಟೆ ಮನವೋಲಿಸಿದರೂ ವೃದ್ಧ ಬಸವರಾಜಪ್ಪ ಜುಪ್ ಎನ್ನಲಿಲ್ಲ. ಬಳಿಕ ಪೊಲೀಸರು ಬಸವರಾಜಪ್ಪನವರ ಮಕ್ಕಳಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಅವರ ಮಕ್ಕಳು ಬಂದ್ ತಮ್ಮ ತಂದೆಯನ್ನು ಕಾರಿನಲ್ಲಿ ಕರೆದು ಕೊಂಡು ಹೋದರು.
12 ಗಂಟೆಯ ವರೆಗೆ ದಿನಿಸಿ ಅಂಗಡಿ ವ್ಯಾಪಾರಕ್ಕೆ ಅವಕಾಶ ನೀಡಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ದಿನಸಿ ಅಂಗಡಿಯಲ್ಲಿ ವ್ಯಾಪಾರ ನಡೆಸುತ್ತಿರುವುದು ಕಂಡು ಬಂತು. ಅಲ್ಲದೆ, ಇಂದು ಭಾನುವಾರ ಆಗಿರುವುದರಿಂದ ಬಾಡೂಟ ಪ್ರಿಯರು ಕುರಿ, ಕೋಳಿ ಮಾಂಸ ಮತ್ತು ಮೀನು ಖರೀದಿಗೆ ಮುಗಿಬಿದ್ದ ದೃಶ್ಯ ಅಲ್ಲಲ್ಲಿ ಕಂಡು ಬಂತು.