ತರಕಾರಿ ಮಂಡಿ ಮಾಲೀಕರಿಂದ ವಂಚನೆ ಕ್ರಮಕ್ಕೆ ರೈತ ಸಂಘ ಆಗ್ರಹ

ಕೋಲಾರ,ಏ.೭: ಎಪಿಎಂಸಿ ಮಾರುಕಟ್ಟೆಯಲ್ಲಿ ೧೦೦ ಕೆ.ಜಿ. ತರಕಾರಿಗೆ ೫ ಕೆಜಿಯನ್ನು ಕಡಿತಗೊಳಿಸಿ ರೈತರನ್ನು ವಂಚಿಸುತ್ತಿರುವ ಮಂಡಿ ಮಾಲೀಕರ ವಿರುದ್ಧ ಸೂಕ್ತ ಕ್ರಮ ವಹಿಸಲು ಎಪಿಎಂಸಿ ಅಧಿಕಾರಿಗಳು ಮುಂದಾಗಬೇಕು ಎಂದು ಕರ್ನಾಟಕ ರೈತ ಸಂಘದ ಜಿಲ್ಲಾಧ್ಯಕ್ಷ ಕೋಟಿಗಾನಹಳ್ಳಿ ಗಣೇಶ್‌ಗೌಡ ಅಗ್ರಹಿಸಿದ್ದಾರೆ.
ಬರಪೀಡಿತ ಜಿಲ್ಲೆಯ ರೈತರು ನೀರಿನ ಅಭಾವದ ನಡುವೆಯ ಸಹ ಎದೆಗುಂದೆ ಬರುವ ಅಲ್ಪಸ್ವಲ್ಪ ನೀರಿನಲ್ಲಿಯೇ ಗುಣಮಟ್ಟದ ತರಕಾರಿ ಬೆಳೆಗಳನ್ನು ಬೆಳೆದು ಮಾರುಕಟ್ಟೆಗೆ ತರುತ್ತಿದ್ದಾರೆ. ಬೆಳೆಗಳಿಗೆ ಸೂಕ್ತ ಬೆಲೆಯಿಲ್ಲದೆ ರೈತರು ನೋವಿನಲ್ಲಿ ಕೈತೊಳೆಯುವಂತಾಗಿದೆ. ಆದರೆ ಮಂಡಿ ಮಾಲೀಕರು ರೈತರು ತರುವ ಎಲ್ಲಾ ತರಕಾರಿಗಳಿಗೆ ೧೦೦ ಕೆಜಿಗೆ ಐದು ಕೆಜಿ ತರಕಾರಿಯನ್ನು ಕಡಿತಗೊಳಿಸಿ ರೈತರನ್ನು ವಂಚಿಸುತ್ತಿದ್ದಾರೆ ಎಂದು ಆರೋಪಿಸಿದರು.
ಸತತ ಬರಗಾಲ ಪಟ್ಟಿಯನ್ನು ಪಡೆದಿರುವ ಕೋಲಾರ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಕುಸಿದಿದೆ. ಸುಮಾರು ಸಾವಿರದ ಐನೂರು ಅಡಿಗಳವರೆಗೂ ಕೊಳವೆ ಬಾವಿಗಳನ್ನು ಕೊರೆಸಿದರು ಬೋರ್‍ವೆಲ್‌ಗಳಲ್ಲಿ ನೀರು ಸಿಗುವುದು ಅನುಮಾನವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ರೈತರು ತರಕಾರಿ ಬೆಳೆಯನ್ನು ಬೆಳೆಯಲು ನೀರಿನ ಅಭಾವ, ವಿದ್ಯುತ್, ಕೂಲಿಗಾರರ ಸಮಸ್ಯೆಯನ್ನು ಲೆಕ್ಕಿಸದೆ ಬೆಳೆದ ಬೆಳೆಯನ್ನು ಕಷ್ಟಪಟ್ಟು ಮಾರುಕಟ್ಟೆಗೆ ತರುತ್ತಾರೆ. ಇದರ ಲಾಭವನ್ನು ತರಕಾರಿ ಮಂಡಿ ಮಾಲೀಕರು ಪಡೆಯುತ್ತಿದ್ದಾರೆ. ರೈತನ ಕಷ್ಟದ ಹೆಸರಿನಲ್ಲಿ ಮಂಡಿ ಮಾಲೀಕರು ಲಾಭದಲ್ಲಿ ಇದ್ದು, ಒಂದು ಕ್ವಿಂಟಾಲ್‌ಗೆ ಐದು ಕೆಜಿಯನ್ನು ಕಡಿತಗೊಳಿಸುತ್ತಿರುವುದರ ಬಗ್ಗೆ ಬೇಸರ ವ್ತಕ್ತಪಡಿಸಿದರು.
ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಮಂಡಿ ಮಾಲೀಕರ ಸಭೆಯನ್ನು ನಡೆಸಿ ಕ್ವಿಂಟಾಲ್‌ಗೆ ಐದು ಕೆಜಿ ತರಕಾರಿ ಕಡಿತಗೊಳಿಸುವ ಕ್ರಮಕ್ಕೆ ಕಡಿವಾಣ ಹಾಕಿ ರೈತರಿಗೆ ಅನುಕೂಲ ಮಾಡಿಕೊಡಲು ಮುಂದಾಗಬೇಕು ಎಂದು ಸಂಘದ ಗೌರವಾಧ್ಯಕ್ಷ ಕೆ.ಬಿ ಮುನಿವೆಂಕಟಪ್ಪ, ಕಾರ್ಯಾಧ್ಯಕ್ಷ ಕಾಮದೇನುಹಳ್ಳಿ ವೆಂಕಟಾಚಲಪತಿ, ಜಿಲ್ಲಾ ಉಪಾಧ್ಯಕ್ಷ ಯಲವಾರ ವಿಶ್ವನಾಥ ಗೌಡ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಕ್ಸೂದ್‌ಪಾಷಾ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಒತ್ತಾಯಿಸಿದರು.