
ಇಸ್ತಾನ್‌ಬುಲ್ (ಟರ್ಕಿ), ಮಾ.೭- ಮುಂದೆ ಮೇನಲ್ಲಿ ಟರ್ಕಿಯಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದ್ದು, ಈಗಾಗಲೇ ರಾಜಕೀಯ ಪಕ್ಷಗಳ ತಯಾರಿ ಚುರುಕಿನಿಂದ ಸಾಗಿದೆ. ಆದರೆ ವಿವಿಧ ಕಾರಣಗಳಿಂದ ಚದುರಿ, ಒಗ್ಗಟ್ಟಿನ ಕೊರತೆ ಕಾಣುತ್ತಿರುವ ಟರ್ಕಿಯ ವಿರೋಧ ಪಕ್ಷಗಳು ಇದೀಗ ಒಗ್ಗಟ್ಟಿನ ಮಂತ್ರ ಜಪಿಸುತ್ತಿದ್ದು, ಹಾಲಿ ಅಧ್ಯಕ್ಷ ತಯ್ಯಪ್ ಎರ್ಡೊಗಾನ್ ವಿರುದ್ಧ ಸ್ಪರ್ಧಿಸಲು ಒಮ್ಮತದ ಅಭ್ಯರ್ಥಿಯನ್ನು ನೇಮಕ ಮಾಡಿದೆ.
ಮುಖ್ಯ ಜಾತ್ಯತೀತ ವಿರೋಧ ಪಕ್ಷವಾದ ಸೆಂಟರ್-ಲೆಫ್ಟ್ ರಿಪಬ್ಲಿಕನ್ ಪೀಪಲ್ಸ್ ಪಾರ್ಟಿ (ಸಿಹೆಚ್‌ಪಿ)ಯನ್ನು ಇದೀಗ ಮುನ್ನಡೆಸಲು ಟರ್ಕಿಯ ಗಾಂಧಿ ಎಂದೇ ಕರೆಯಲ್ಪಡುವ ಕೆಮಾಲ್ ಕಿಲಿಕ್‌ಡರೊಗ್ಲು ಅವರನ್ನು ನಾಯಕನನ್ನಾಗಿ ಆಯ್ಕೆ ಮಾಡಿಕೊಂಡಿದೆ. ಆಧುನಿಕ ಟರ್ಕಿಯ ಸಂಸ್ಥಾಪಕ ಎಂದೇ ಕರೆಯಲ್ಪಡುವ ಮುಸ್ತಫಾ ಕೆಮಾಲ್ ಅಟಟುರ್ಕ್ ಅವರು ಸಿಹೆಚ್‌ಪಿ ಪಕ್ಷವನ್ನು ಸ್ಥಾಪಿಸಿದ್ದು, ಇದು ದೇಶದ ಹಳೆಯ ರಾಜಕೀಯ ಪಕ್ಷ ಎಂದು ಗುರುತಿಸಿಕೊಂಡಿದೆ. ಆದರೆ ೧೯೯೦ ರ ದಶಕದಿಂದ ಕೇಂದ್ರೀಯವಾಗಿ ಸಿಹೆಚ್‌ಪಿ ಅಧಿಕಾರದಿಂದ ಹೊರಗಿದೆ. ಇನ್ನು ಕಳೆದ ಎರಡು ದಶಕಗಳಲ್ಲಿ ಎರ್ಡೋಗನ್ ಅವರ ಸರ್ವಾಧಿಕಾರಿ ರೀತಿಯ ಆಡಳಿತದಿಂದ ಜನತೆ ಹೆಚ್ಚು ಸಂಕಷ್ಟ ಅನುಭವಿಸಿದ್ದು, ಅಲ್ಲದೆ ಇತ್ತೀಚಗೆ ಸಂಭವಿಸಿರುವ ಭೂಕಂಪನದಿಂದಾಗಿ ಜನತೆ ಮತ್ತಷ್ಟು ಭವಣೆ ಪಡುವಂತಾಗಿತ್ತು. ಇದೇ ಕಾರಣದಿಂದ ಧ್ರುವೀಕರಣಗೊಂಡ ದೇಶದಲ್ಲಿ ಎರ್ಡೊಗಾನ್ ಓಟಕ್ಕೆ ಅಂತ್ಯಹಾಡಲು ಎಲ್ಲಾ ಪ್ರಮುಖ ವಿರೋಧ ಪಕ್ಷಗಳು ಇದೀಗ ಒಗ್ಗಟ್ಟಿನ ಮಂತ್ರ ಜಪಿಸಿದೆ. ಸದ್ಯ ಟರ್ಕಿಯಲ್ಲಿ ಆರ್ಥಿಕ ಸಮಸ್ಯೆಯಿಂದ ಈಗಾಗಲೇ ಜನತೆ ಬಸವಳಿದಿದ್ದು, ಭಾರೀ ಭೂಕಂಪದಿಂದಾಗಿ ಇದು ಮತ್ತಷ್ಟು ಹೈರಣಾಗುವಂತೆ ಮಾಡಿವೆ. ಹಾಗಾಗಿ ಹಿಂದಿನ ಚುನಾವಣೆಗಳಿಗಿಂತ ಎರ್ಡೊಗಾನ್ ಇದೀಗ ಹೆಚ್ಚು ದುರ್ಬಲಗೊಂಡಿದ್ದಾರೆ ಎನ್ನಲಾಗಿದೆ. ಆರು ಪಕ್ಷಗಳ ವಿರೋಧ ಪಕ್ಷದ ಮೈತ್ರಿಯಿಂದ ಆಯ್ಕೆಯಾಗಿರುವ ಕಿಲಿಕ್‌ಡರೋಗ್ಲು ಅವರಿಗೆ ಈಗಾಗಲೇ ಭಾರೀ ಜನಬೆಂಬಲ ವ್ಯಕ್ತವಾಗಿದೆ. ಗಾಂಧಿ ಕೆಮಾಲ್ ಅಥವಾ ಟರ್ಕಿಯ ಗಾಂದಿ ಎಂದೇ ಕರೆಯಲ್ಪಡುವ ೭೪ ಹರೆಯದ ಕೆಮಾಲ್ ಈಗಾಗಲೇ ನಾಗರಿಕ ಹಕ್ಕುಗಳ ಹೋರಾಟದಲ್ಲಿ ತನ್ನನ್ನು ಗುರುತಿಸಿಕೊಂಡು, ಜನಮನ್ನಣೆ ಗಳಿಸಿದ್ದಾರೆ. ೨೦೧೮ರಲ್ಲಿ ಸಂಸದೀಯ ವ್ಯವಸ್ಥೆಯಲ್ಲಿ ಭಾರೀ ಬದಲಾವಣೆ ಮಾಡಿಕೊಂಡಿದ್ದ ಎರ್ಡೊಗಾನ್, ಸರ್ವಾಧಿಕಾರಿಯ ರೀತಿಯಲ್ಲಿ ಸದ್ಯ ಆಡಳಿತ ನಡೆಸುತ್ತಿದ್ದು, ಬಹುತೇಕ ಎಲ್ಲಾ ಅಧಿಕಾರವನ್ನು ಹೊಂದಿದ್ದಾರೆ.
ಬಾಕ್ಸ್
ದೇಶವನ್ನು ಸಮೃದ್ಧಿ, ಶಾಂತಿ ಮತ್ತು ಸಂತೋಷದ ದಿನಗಳತ್ತ ಕೊಂಡೊಯ್ಯುವುದು ನಮ್ಮ ಏಕೈಕ ಗುರಿಯಾಗಿದೆ. ದೇಶವನ್ನು ಸಂಸದೀಯ ವ್ಯವಸ್ಥೆಗೆ ಹಿಂದಿರುಗಿಸಲಾಗುವುದು. ಒಮ್ಮತ ಮತ್ತು ಸಮಾಲೋಚನೆಯ ಮೂಲಕ ಟರ್ಕಿಯ ಆಡಳಿತ ನಡೆಸಲಾಗುವುದು.
-ಕೆಮಾಲ್ ಕಿಲಿಕ್‌ಡರೊಗ್ಲು, ಸಿಹೆಚ್‌ಪಿ ನಾಯಕ