ತಮಿಳುನಾಡು ವಿಧಾನಸಭಾ ಚುನಾವಣೆ ಪ್ರತಿ ಹೆಣ್ಣು ಮಗುವಿನ ಖಾತೆಗೆ ೧ ಲಕ್ಷ ಜಮೆ ನಟಿ ಖುಷ್ಬೂ ಭರವಸೆ

ಚೆನ್ನೈ, ಮಾ. ೨೮: ತಮಿಳುನಾಡು ವಿಧಾನಸಭಾ ಚುನಾವಣೆ ಬಿರುಸುಗೊಂಡಿದ್ದು, ಪ್ರಚಾರದ ವೇಳೆ ವಿವಿಧ ರಾಜಕೀಯ ಮುಖಂಡರು ಮತದಾರ ಪ್ರಭುಗಳಿಗೆ ಭರವಸೆಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.
ನಟಿ ಹಾಗೂ ಬಿಜೆಪಿ ಅಭ್ಯರ್ಥಿ ಖುಷ್ಬೂ ಸುಂದರ್ ತಮ್ಮ ಚುನಾವಣಾ ಭಾಷಣದಲ್ಲಿ ಪ್ರತಿ ಹೆಣ್ಣು ಮಗುವಿನ ಖಾತೆಗೆ ಒಂದು ಲಕ್ಷ ರೂಪಾಯಿಯನ್ನು ಜಮಾ ಮಾಡುವುದಾಗಿ ಹೇಳಿದ್ದಾರೆ.
ರಾಜ್ಯದ ಪ್ರತಿ ಹೆಣ್ಣು ಮಕ್ಕಳು ಆರ್ಥಿಕವಾಗಿ ಸ್ವತಂತ್ರವಾಗಬೇಕು ಎನ್ನುವುದು ನಮ್ಮ ಮತ್ತು ಪಕ್ಷದ ಆಶಯ. ಈ ಹಿನ್ನಲೆಯಲ್ಲಿ ಪ್ರತಿ ಹೆಣ್ಣು ಮಗುವಿನ ಖಾತೆಗೆ ಒಂದು ಲಕ್ಷ ರೂಪಾಯಿ ಜಮಾ ಮಾಡುತ್ತೇನೆ. ಇದು ಭರವಸೆಯಲ್ಲ. ಇದು ನನ್ನ ಕನಸು ಎಂದು ಖುಷ್ಬೂ ಹೇಳಿದ್ದಾರೆ.
ತಮಿಳುನಾಡು ಅಭಿವೃದ್ಧಿಗೆ ಬಿಜೆಪಿ ಕಂಕಣಬದ್ಧವಾಗಿದೆ. ಸರ್ವತೋಮುಖ ಅಭಿವೃದ್ಧಿಗೆ ಬಿಜೆಪಿ ಅಭ್ಯರ್ಥಿಗಳನ್ನು ಬೆಂಬಲಿಸುವಂತೆ ಖುಷ್ಬೂ ರಾಜ್ಯದ ಮತದಾರರಲ್ಲಿ ಮನವಿ ಮಾಡಿದರು.
ಚುನಾವಣಾ ಪ್ರಚಾರದ ಸಂದರ್ಭದಲ್ಲೇ ನಟಿ ಖುಷ್ಬೂ, ತಾವೇ ಸ್ವತಃ ದೋಸೆ ತಯಾರಿಸಿ ಮತದಾರರಿಗೆ ಉಣಬಡಿಸಿದರು.
ತಮಿಳುನಾಡಿನ ಒಟ್ಟು ೨೩೪ ವಿಧಾನಸಭಾ ಕ್ಷೇತ್ರಗಳಿಗೆ ಏಪ್ರಿಲ್ ೬ರಂದು ಚುನಾವಣೆ ನಡೆಯಲಿದ್ದು, ಕಾಂಗ್ರೆಸ್-ಡಿಎಂಕೆ ಮತ್ತು ಬಿಜೆಪಿ-ಎಐಎಡಿಎಂಕೆ ನಡುವಣ ಮೈತ್ರಿ ಏರ್ಪಟ್ಟ ಚುನಾವಣೆ ಎದುರಿಸುತ್ತಿವೆ.