ತಮಿಳುನಾಡು ಚುನಾವಣಾ ಸಮರ ಡಿಎಂಕೆ ನಾಯಕರ ವಿರುದ್ಧ ಸಿಎಂ ಪಳನಿ ಕಿಡಿ

ಚೆನ್ನೈ, ಮಾ. ೨೭: ತಮಿಳುನಾಡು ವಿಧಾನಸಭಾ ಚುನಾವಣೆಗೆ ಇನ್ನು ಎರಡು ವಾರ ಬಾಕಿ ಇರುವಾಗಲೇ ಆಡಳಿತ ಮತ್ತು ವಿಪಕ್ಷ ನಾಯಕರ ನಡುವೆ ವಾಕ್ಸಮರ ತೀವ್ರಗೊಂಡಿದೆ. ಮುಖ್ಯಮಂತ್ರಿ ಪಳನಿಸ್ವಾಮಿ ಅವರ ವಿರುದ್ಧ ಡಿಎಂಕೆ ಮುಖ್ಯಸ್ಥ ಸ್ಟಾಲಿನ್ ನೀಡಿರುವ ವಿವಾದಾಸ್ಪದ ಹೇಳಿಕೆ ತೀವ್ರ ಚರ್ಚೆಗೆ ಗ್ರಾಸವಾಗಿದೆ.
“ಮೊನ್ನೆ ಮೊನ್ನೆಯವರೆಗೆ, ಎಡಪ್ಪಾಡಿ ಪಳನಿಸ್ವಾಮಿ ಅವರು ‘ಬೆಲ್ಲದ ಮಾರುಕಟ್ಟೆಯಲ್ಲಿ ಕೆಲಸ ಮಾಡಿದವರು. ಅಂತಹವರು ಸ್ಟಾಲಿನ್‌ಗೆ ಹೇಗೆ ಪೈಪೋಟಿ ನೀಡಲು ಸಾಧ್ಯ? ಪಳನಿಸ್ವಾಮಿ, ಡಿಎಂಕೆ ನಾಯಕ ಸ್ಟಾಲಿನ್ ಹಾಕುವ ಚಪ್ಪಲಿಗೆ ಸಮ ಎಂದು ಡಿ. ರಾಜಾರವರು ಜರಿದು ನೀಡಿದ ಹೇಳಿಕೆ ಆಡಳಿತ ಪಕ್ಷದ ನಾಯಕರ ಕಣ್ಣು ಕೆಂಪಾಗಿಸಿದೆ.
ಮಧುರೈನ ಮೇಲೂರ್‌ನಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಸಿಎಂ ಪಳನಿಸ್ವಾಮಿ, ಡಿಎಂಕೆ ನಾಯಕರ ವಿರುದ್ಧ ಹರಿಹಾಯ್ದರು. ನೆಹರು, ಇಂದಿರಾಗಾಂಧಿ, ಮೋದಿ ಅವರಿಗೆ ಇಲ್ಲದ ಶ್ರೀಮಂತಿಕೆ ಹೇಗೆ ಸ್ವಾಲಿನ್ ಕುಟುಂಬದವರಿಗೆ ಹೇಗೆ ಬಂತು? ಎಂದು ಪ್ರಶ್ನಿಸಿದ್ದಾರೆ. ಸ್ಟಾಲಿನ್ , ರಾಜಾ ತಮ್ಮ ವಿರುದ್ಧ ಲಘುವಾಗಿ ಮಾತನಾಡಿದರೆ ಜನರು ತಕ್ಕ ಶಾಸ್ತಿ ಮಾಡಲಿದ್ದಾರೆಂದು ಎಚ್ಚರಿಸಿದರು.
ತಾವು ಸಾಮಾನ್ಯ ರೈತ, ಬಡ ಕುಟುಂಬದಿಂದ ಬಂದವನು. ನಾನೇನು ಹುಟ್ಟಿನಿಂದಲೇ ಶ್ರೀಮಂತನಲ್ಲ; ಜನರ ಕಷ್ಟಸುಖಗಳೇನು ಎನ್ನುವುದನ್ನು ಚೆನ್ನಾಗಿ ಬಲ್ಲೆ. ಹಾಗಾಗಿಯೇ ನಾನು ಈಗಲೂ ವಿನಯವಂತನಾಗಿರಲು ಸಾಧ್ಯ ಎಂದು ಡಿಎಂಕೆ ನಾಯಕರ ವಿರುದ್ಧ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.
ತಾವು ಮುಖ್ಯಮಂತ್ರಿಗಾದಿಗೇರಲು ಸಾಕಷ್ಟು ಏಳುಬೀಳುಗಳನ್ನು ಕಂಡಿದ್ದೇನೆ. ಸ್ಟಾಲಿನ್‌ನವರಂತೆ ತಮ್ಮ ತಂದೆಯೇನು ಮುಖ್ಯಮಂತ್ರಿಯಾಗಿರಲಿಲ್ಲ. ಅವರು ಹುಟ್ಟುವಾಗಲೇ ಬೆಳ್ಳಿ, ಚಿನ್ನದ ಚಮಚ ಹಿಡಿದವರು ಎಂದು ವ್ಯಂಗ್ಯವಾಡಿದ ಪಳನಿಸ್ವಾಮಿ, ಪರೋಕ್ಷವಾಗಿ ೨ಜಿ ಸ್ಪೆಕ್ಟ್ರಂ ಹಗರಣವನ್ನು ಉಲ್ಲೇಖಿಸಿ ಸ್ಟಾಲಿನ್ ವಿರುದ್ಧ ಕಿಡಿಕಾರಿದರು.