ತಮಿಳುನಾಡು, ಕೇರಳ, ಪುದುಚೇರಿ, ಅಸ್ಸಾಂ, ಬಂಗಾಳದಲ್ಲಿ ನಾಳೆ ಮತದಾನ


ನವದೆಹಲಿ, ಏ. ೦೫: ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದೆ. ತಮಿಳುನಾಡು, ಕೇರಳ, ಪುದುಚೇರಿ, ಅಸ್ಸಾಂ ಮತ್ತು ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ತೆರೆಬಿದ್ದಿದೆ. ಇಂದು ಸಂಜೆಯವರೆಗೆ ಅಭ್ಯರ್ಥಿಗಳು ಮನೆ ಮನೆಗಳಿಗೆ ತೆರಳಿ ಮತಯಾಚನೆ ಮಾಡಲಿದ್ದು, ನಾಳೆ ಮಂಗಳವಾರ ಮತದಾನ ನಡೆಯಲಿದೆ. ಭಾನುವಾರ ಚುನಾವಣೆ ನಡೆಯುವ ಪಂಚ ರಾಜ್ಯಗಳಲ್ಲಿ ಬಿಜೆಪಿ, ಕಾಂಗ್ರೆಸ್ ಸೇರಿದಂತೆ ವಿವಿಧ ರಾಜಕೀಯ ನಾಯಕರು ಭಾನುವಾರ ಭರ್ಜರಿ ಮತಪ್ರಚಾರ ನಡೆಸಿದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ, ಕಾಂಗ್ರೆಸ್ಸಿನ ರಾಹುಲ್ ಗಾಂಧಿ, ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೇರಿದಂತೆ ವಿವಿಧ ಪಕ್ಷಗಳ ನಾಯಕರು ಮತದಾರರನ್ನು ಮನಸೆಳೆಯಲು ಪ್ರಚಾರ ನಡೆಸಿದರು.
೧೪೦ ಅಭ್ಯರ್ಥಿ ರಾಜಕೀಯ ಭವಿಷ್ಯ ನಿರ್ಧಾರ
ಕೇರಳದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಚಾರದ ಕೊನೆಯ ದಿನ ಉತ್ತರ ಕೇರಳದ ಕೋಝಿಕೋಡ್ ನಲ್ಲಿ ರೋಡ್ ಶೋ ನಡೆಸಿದರೆ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಿಜೆಪಿ ಅಭ್ಯರ್ಥಿಗಳ ಪರ ರ್ಯಾಲಿ ಉದ್ದೇಶಿಸಿ ಮಾತನಾಡಿದರು. ಕೇರಳದ ಆಡಳಿತರೂಢ ಪಕ್ಷದ ವಿರುದ್ಧ ಹರಿಹಾಯ್ದರು. ಕೇರಳದಲ್ಲಿ ಸುಮಾರು ೨.೬೭ ಕೋಟಿ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ರಾಜ್ಯದ ೪೦,೭೭೧ ಮತಗಟ್ಟೆಗಳಲ್ಲಿ ೧೪೦ ಶಾಸಕರನ್ನು ಚುನಾಯಿಸಲು ಮತಚಲಾಯಿಸಲಿದ್ದಾರೆ.
ಎಐಎಡಿಎಂಕೆ-ಡಿಎಂಕೆ ಪ್ರಬಲ ಪೈಪೋಟಿ
ತಮಿಳುನಾಡಿನ ಚುನಾವಣಾ ಅಖಾಡ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ತಮಿಳುನಾಡಿನ ೩೮ ಜಿಲ್ಲೆಗಳ ೨೩೪ ವಿಧಾನಸಭಾ ಕ್ಷೇತ್ರಗಳಲ್ಲಿ ನಾಳೆ ಬೆಳಗ್ಗೆ ೭ ಗಂಟೆಗೆ ಮತದಾನ ನಡೆಯಲಿದೆ. ಒಟ್ಟು ೩,೯೯೮ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ.
ಈ ಬಾರಿ ಆಡಳಿತಾರೂಢ ಎಐಎಡಿಎಂಕೆ ಮತ್ತು ವಿರೋಧ ಪಕ್ಷ ಡಿಎಂಕೆ ತಲಾ ೧೭೦ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿವೆ.
ಡಿಎಂಕೆ ಮತ್ತು ಎಐಎಡಿಎಂಕೆ ನಡುವೆ ಪ್ರಬಲ ಪೈಪೋಟಿ ಏರ್ಪಟ್ಟಿದೆ. ಮುಖ್ಯಮಂತ್ರಿ ಪಳನಿಸ್ವಾಮಿ ಅವರು ತಮ್ಮ ಸ್ಥಾನವನ್ನು ಉಳಿಸಿಕೊಳ್ಳಬೇಕೇ ಅಥವಾ ಐದು ದಶಕಗಳ ಕಾಲ ಸ್ಟಾಲಿನ್ ಅವರಿಗೆ ಪಟ್ಟ ಕಟ್ಟಬೇಕೋ ಎಂಬುದನ್ನು ನಾಳೆ ಮತದಾರರು ನಿರ್ಧರಿಸಲಿದ್ದಾರೆ.
ಅಸ್ಸಾಂ ಅಧಿಕಾರ ಯಾರಿಗೆ?
ಅಸ್ಸಾಂನಲ್ಲಿ ಆಡಳಿತಾರೂಢ ಬಿಜೆಪಿ ನೇತೃತ್ವದ ಮಿತ್ರಕೂಟ ಮತ್ತು ವಿರೋಧ ಪಕ್ಷ ಕಾಂಗ್ರೆಸ್ ನೇತೃತ್ವದ ಮಹಾಮೈತ್ರಿ ಪಕ್ಷಗಳು ಅಸ್ಸಾಂನಲ್ಲಿ ಮೂರನೇ ಮತ್ತು ಅಂತಿಮ ಹಂತದ ಚುನಾವಣೆಗಾಗಿ ಭರದ ತಯಾರಿ ಮಾಡಿಕೊಂಡಿವೆ. ರಾಜ್ಯದ ೧೨೬ ಕ್ಷೇತ್ರಗಳ ಪೈಕಿ ೪೦ ಸ್ಥಾನಗಳಿಗೆ ನಾಳೆ ಚುನಾವಣೆ ನಡೆಯಲಿದ್ದು, ರಾಜ್ಯದಲ್ಲಿ ಯಾರು ಮುಂದಿನ ಸರ್ಕಾರ ರಚಿಸುತ್ತಾರೆ ಎಂಬುದನ್ನು ನಿರ್ಧರಿಸಲಿದೆ.
ಈ ಹಂತದಲ್ಲಿ ಬಹುತೇಕ ಎಲ್ಲ ಸ್ಥಾನಗಳು ‘ಲೋವರ್ ಅಸ್ಸಾಂ’ ಎಂದು ಕರೆಯಲ್ಪಡುವ ಜಿಲ್ಲೆಗಳಿಂದ ಚುನಾಯಿತಗೊಳ್ಳಲಿವೆ. ರಾಜ್ಯ ಸಚಿವ ಹಿಮಾಂತ ಬಿಸ್ವಾ ಶರ್ಮಾ ಸೇರಿದಂತೆ ೩೩೭ ಅಭ್ಯರ್ಥಿಗಳ ಹಣೆಬರಹ ನಾಳೆ ಮತಯಂತ್ರಗಳಲ್ಲಿ ಭದ್ರವಾಗಲಿದೆ.